ಎಲ್ಲರಿಗೂ ಕಾರ್ತಿಕೇಯನ ಕೃಪೆಯಿರಲಿ

ಸುಬ್ರಹ್ಮಣ್ಯಂ ಸುಬ್ರಹ್ಮಣ್ಯಂ ಷಣ್ಮುಖನಾಥ ಸುಬ್ರಹ್ಮಣ್ಯಂ

ಹೇ ಸ್ವಾಮಿನಾಥ ಕರುಣಾಕರ ದೀನಬಂಧೋ

ಶ್ರೀ ಪಾರ್ವತಿ ಸುಮುಖ ಪಂಕಜ ಪದ್ಮಬಂಧೋ

ಸಜ್ಜನರಿಗೆ, ದೇವತೆಗಳಿಗೆ, ಋಷಿಮುನಿಗಳಿಗೆ ಸದಾ ಕಷ್ಟವನ್ನು ಕೊಡುತ್ತಿದ್ದ, ತಾರಕಾಸುರನನ್ನು, ಆತನ ಸಹೋದರನನ್ನು ಇಲ್ಲವಾಗಿಸಿ, ಕ್ಷೇಮ ನೀಡಿದ, ಜಗದ ತಂದೆ ತಾಯಿ ಶಿವ ಪಾರ್ವತಿಯವರ ಎರಡನೇ ಪುತ್ರ ಕಾರ್ತಿಕೇಯ, ಷಣ್ಮುಖ ಸುಬ್ರಹ್ಮಣ್ಯನ ಆರಾಧನಾ ದಿನವಿಂದು. ಕುಕ್ಕೆ ಸುಬ್ರಹ್ಮಣ್ಯ ಷಷ್ಠಿಯೆಂದೂ ಆಚರಿಸುತ್ತೇವೆ. ದೇವತೆಗಳ ದಂಡನಾಯಕ ಶ್ರೀ ಸುಬ್ರಹ್ಮಣ್ಯನು ದುಷ್ಟರ  ಮೇಲೆ ವಿಜಯ ಸಾಧಿಸಿದನೆಂದು ಸ್ಕಂದ ಪುರಾಣದಲ್ಲಿ ಉಲ್ಲೇಖಿಸಲ್ಪಟ್ಟಿದೆ. ಪಾರಾಯಣ, ಕಥೆ, ಭಜನೆ, ಕೀರ್ತನೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ನೆಮ್ಮದಿ, ಶಾಂತಿ, ಕಷ್ಟಗಳಿಂದ ಮುಕ್ತಿ ಸಿಗುವುದೆಂಬ ನಂಬಿಕೆ. ಸರ್ಪದೋಷ, ಚರ್ಮದೋಷವಿದ್ದಲ್ಲಿ ಸುಬ್ರಹ್ಮಣ್ಯನಿಗೆ ವಿಶೇಷ ಸೇವೆ ಸಲ್ಲಿಸುತ್ತಾರೆ. ಚಂಪಾ ಷಷ್ಠಿ,ಸುಬ್ರಹ್ಮಣ್ಯ ಷಷ್ಠಿಯನ್ನು ಉಪವಾಸ,ಭಕ್ತಿ ಶ್ರದ್ಧೆಯಿಂದ ಕೈಗೊಂಡು ಪುನೀತರಾಗೋಣ.

ರಾಷ್ಟ್ರೀಯ ಸಂವಿಧಾನ ದಿನ: ನಮ್ಮ ಭಾರತದ ಸಾರ್ವಭೌಮತ್ವದ ಪ್ರತೀಕ ನಮ್ಮ ಬೃಹತ್ ಲಿಖಿತ ಸಂವಿಧಾನ. ಇಂದು ಸಂವಿಧಾನ ರಚನೆಯ ಕರಡು ಪ್ರತಿಯನ್ನು ದೇಶಕ್ಕೆ ಅರ್ಪಿಸಿದ ದಿನ. ಅಖಂಡ ಸಂವಿಧಾನವನ್ನು ದೇಶಕ್ಕೆ ಅರ್ಪಿಸಿದ ಎಲ್ಲಾ ಹಿರಿಯರನ್ನು ಗೌರವಪೂರ್ವಕವಾಗಿ ಸ್ಮರಿಸೋಣ.

ಕನ್ನಡದತ್ತ ಕರೆ: "ಮಾತೃಭಾಷೆ, ನಾಡಭಾಷೆಯನ್ನು ಕಡೆಗಣಿಸದಿರಿ, ಆಂಗ್ಲ ಭಾಷೆಯತ್ತ ವಾಲುವುದು ಹೆಚ್ಚಾಗಿದೆ, ಆದರೆ ಕನ್ನಡದ ಮಣ್ಣಿನ ಈ ಭಾಷೆಯತ್ತ ಗಮನಹರಿಸಿರೆಂದು ಕರೆಯಿತ್ತವರು" ಹಿರಿಯ ಸಾಹಿತಿ ನಂಜನಗೂಡು ತಿರುಮಲಾಂಬಾರವರು. ನಾಡ, ದೇಶ ಭಾಷೆಯ ದುರವಸ್ಥೆ ಶೋಚನೀಯವಾಗಿಸುವುದು, ಕನ್ನಡಿಗರಾದ ನಮ್ಮ ದುರ್ಬಲತೆ ಅಲ್ಲವೇ? ನಮ್ಮ ತಲೆ ಮೇಲೆ ನಾವೇ ಕಲ್ಲು ಚಪ್ಪಡಿ ಹಾಕಬಾರದಲ್ಲವೇ? ೨೦ನೇ ಶತಮಾನದ ಈ ಮಹಿಳಾ ಬರಹಗಾರ್ತಿಯ ಮಾತಂತೂ ಸತ್ಯ. ಬಂಧುಗಳೇ, ಅನ್ಯ ಭಾಷೆಯ ಎಷ್ಟು ಬೇಕೋ ಅಷ್ಟೇ ಸ್ವೀಕರಿಸೋಣ, ಜೊತೆಗೆ ಕನ್ನಡವ ಮರೆಯದಿರೋಣ.

(ಸಂಗ್ರಹ) - ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ