ಒಂದಾಗಿ ಬಾಳಬೇಕಣ್ಣಾ… ಎಲ್ಲಾರು ಸೇರೀ …

ಚಂದಾ..ದಿ ಬದುಕಬೇಕಣ್ಣಾ … //ಪ//

ಒಳ್ಳೆಯ ಬದುಕನು ಬಾಳುವರಾಗೀ …

ಸಲ್ಲುವ ನುಡಿಯನು ನುಡಿಯುವರಾಗೀ…

ರಾಗದ್ವೇಷವ ತೊರೆದವರಾಗೀ …

ಸಂತಸದಿಂದಲಿ ಜೀವಿಪರಾಗೀ … //ಒಂದಾಗಿ//  //೧//

ಆಶಾಪಾಶವ ತೊರೆದವರಾಗೀ …

ಮೋಸ ವಂಚನೆಯ ಬಿಟ್ಟವರಾಗೀ …

ಹಿರಿಯರ ಸಮ್ಮುಖ ತಾಗೀ… ಬಾಗೀ…

ಸಂತತ ಸದ್ಗುಣವಂ… ತರಾಗೀ … //ಒಂದಾಗಿ//  //೨//

ದೈವ ದೇವರ ಪೂಜಿಪರಾಗೀ…

ಭಕ್ತಿಭಾವ ಸಂಸೇವಿಪರಾಗೀ…

ಭಜನೆ ಕೀರ್ತನೆಯ ಮಾಡುವರಾಗೀ…

ನಿಜಗುಣಮನ ಹರಿದಾ… ಸರಾಗೀ… //ಒಂದಾಗಿ//  //೩//

ದೀನರ ಕಷ್ಟಕೆ ಕರಗುವರಾಗೀ…

ದಾನಮಾನ ಸನ್ಮಾನವರಾಗೀ…

ಹಾನಿ ಮಾಡದೆಲ್ಲರಲೊಂದಾಗೀ… 

ಮಾನವ ಕುಲ ಸಂ…ರಕ್ಷಕರಾಗೀ…  //ಒಂದಾಗಿ//  //೪//

ನೇಮ ನಿಷ್ಠೆಗಳ ಅರಿತವರಾಗೀ…

ಕಾಮ ಕ್ರೋಧಗಳ ತೊರೆದವರಾಗೀ…

ರಾಮ ಕೃಷ್ಣ ದೇವರೆ ಮೊದಲಾಗೀ…

ನಾಮಸ್ಮರಣೆಯ ಮಾಡುವರಾಗೀ … //ಒಂದಾಗಿ//  //೫//

ಮಾಯಾ ಮೋಹವ ನೀಗುತ ಸಾಗೀ…

ಕಾಯಕವೇ ಕೈಲಾಸವಾಗೀ…

ತಾಯಿ ಭಾರತಿಯ ಮಡಿಲಲಿ ತೂಗೀ…

ಆಯುರಾರೋಗ್ಯವಂ …ತರಾಗೀ… //ಒಂದಾಗಿ//  //೬// 

(ಭಾಗ್ಯದ ಲಕ್ಷ್ಮೀ ಬಾರಮ್ಮಾ…. ಎಂಬಂತೆ)

- ಅನಂತ ಭಟ್ ಪೊಳಲಿ