ಸೋಮಾರಿತನ, ಆಲಸ್ಯ ಸಲ್ಲದು. ಒಮ್ಮೆ ದೇಹಕ್ಕೆ ಸೋಮಾರಿತನ ಪ್ರವೇಶವಾದರೆ ಸುಲಭದಲ್ಲಿ ಬಿಟ್ಟು ಹೋಗದು. ಆಲಸ್ಯ ನಮ್ಮ ಶತ್ರು, ಬೆಳೆಯುವ, ಸಾಧಿಸುವ ಹಾದಿಯಲಿ ಚುಚ್ಚುವ ಮುಳ್ಳದು. ಮುಂದೆ ಹೋಗಲು ತಡೆಯಾಗುವುದು. ನಮ್ಮ ಜೀವನಕ್ಕೆ ಬೇಕಾದ್ದನ್ನು, ಹಿರಿಯರ ಸಹಕಾರದಿಂದ ಪಡೆಯುವ ವಯಸ್ಸಿನಲ್ಲಿ ಪಡೆದೇ ತೀರಬೇಕು. ಸೋಮಾರಿತನವೆಂಬುದು ನಿಂತಿರುವ ನಡೆಯದ ಗಡಿಯಾರದ ಮುಳ್ಳುಗಳಂತೆ ಅದರಲ್ಲಿ ಸಮಯ ತಿಳಿಯಲಾಗದು. ಈ ದಿನದ ಚಟುವಟಿಕೆ ಮೆಲುಕು ಹಾಕುತ್ತಾ, ನಾಳೆಯ ಕೆಲಸ ಕಾರ್ಯಗಳೇನು ಎಂದು ಯೋಚಿಸುವುದು ನಮ್ಮ ದಿನಚರಿಯಾಗಿರಲಿ. ಹೊಸತು ಹೊಸತು ಕಲಿಯುವ ಉತ್ಸಾಹವಿರಬೇಕು. ‘ಆಗುವುದಿಲ್ಲ, ನನ್ನಿಂದಾಗದು' ಎನ್ನುವುದು ನಮ್ಮ ಹತ್ತಿರ ಬರಬಾರದು. ಪ್ರತಿನಿತ್ಯದ ನಮ್ಮ ಆಚಾರ-ವಿಚಾರ, ವ್ಯವಹಾರ, ಕೆಲಸಕಾರ್ಯಗಳ ಮೇಲೆ ನಮ್ಮ ವರ್ತಮಾನ ಮತ್ತು ಭವಿಷ್ಯ ನಿಂತಿದೆ. ಈ ಜೀವಜಗತ್ತಿನಲ್ಲಿ ನಾವು ನೆಮ್ಮದಿಯಿಂದ ಇರಬೇಕೆಂದರೆ ಕಾಲಕ್ಕೆ ಸರಿಯಾಗಿ ಹೊಂದಾಣಿಕೆ ಮಾಡಿಕೊಳ್ಳುವುದು ಅಗತ್ಯ. ಸೋಮಾರಿತನವನ್ನು ರಾತ್ರಿಯ ನಿದ್ದೆ ಕಳೆದು ಬೆಳಗಿನ ಎಚ್ಚರದೊಂದಿಗೆ ಬಿಟ್ಟೇಳುವ ಅಭ್ಯಾಸವಿರಲಿ. ಸಮಯದ ಸದುಪಯೋಗದೊಂದಿಗೆ ಹೆಜ್ಜೆ ಹಾಕೋಣ

-ರತ್ನಾ ಕೆ ಭಟ್ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ