ಧನುರ್ಮಾಸ ಆರಂಭವಾಗಿದೆ. ಲೋಕಕ್ಕೆ ಬೆಳಕು ಮತ್ತು ಶಾಖವನ್ನು ನೀಡುವ ಭಗವಾನ್ ಸೂರ್ಯನಾರಾಯಣನು ಧನು ರಾಶಿಗೆ ಪ್ರವೇಶಿಸುತ್ತಾನೆ. ಇನ್ನು ಒಂದು ತಿಂಗಳ ಕಾಲದ ಅನಂತರ ಮಕರ ರಾಶಿಯತ್ತ ಚಲಿಸುವನು. ಧನು ಮಾಸದಲ್ಲಿ ವಿಪರೀತ ಚಳಿ. ಬಿಲ್ಲಿನಂತೆ ದೇಹವನ್ನು ಚಳಿಗೆ ಬಾಗಿಸಿ ಮಲಗುವವರೂ ಇದ್ದಾರೆ, ಅದರಿಂದಲೇ ಧನುರ್ಮಾಸವೆಂಬ ಹೆಸರಾಯಿತು ಹೇಳುತ್ತಾರೆ. ಪ್ರಾತ:ಕಾಲದಲ್ಲಿ ಎದ್ದು, ಶುಚಿರ್ಭೂತರಾಗಿ ವಿಷ್ಣುವನ್ನು ಜೊತೆಗೆ ಮಹಾಲಕ್ಷ್ಮಿಯ ಪೂಜೆ, ಆರಾಧನೆ ಮಾಡುವರು. ದೇವಾಲಯಗಳಲ್ಲಿ ಸೂರ್ಯೋದಯದ ಮೊದಲೇ ಪೂಜಾ ಕಾರ್ಯಗಳು ನಡೆಯುವುದು. ಚಳಿಯನ್ನು ತಾಳಿಕೊಳ್ಳುವುದು, ಸಕಲಕಷ್ಟಗಳ ನಿವಾರಣೆ, ಚರ್ಮದ ಆರೋಗ್ಯಕ್ಕಾಗಿ ತುಪ್ಪ ಸೇರಿಸಿದ ಹುಗ್ಗಿ (ಖಚಡಿ) ನೈವೇದ್ಯ ಅನಂತರ ಸೇವನೆ ವಿಶೇಷ. ಕಳೆದುಕೊಂಡ ಸಂಪತ್ತನ್ನು ಮರಳಿ ಪಡೆಯಲು ಸುರಪತಿಯ ಪತ್ನಿ ಶಚೀದೇವಿ ಒಂದು ತಿಂಗಳ ಪರ್ಯಂತ ವಿಷ್ಣುವಿಗೆ ಹುಗ್ಗಿಯನ್ನು ಶ್ರದ್ಧಾಭಕ್ತಿಯಿಂದ ಮಾಡಿ ನೈವೇದ್ಯ ಮಾಡುತ್ತಿದ್ದಳಂತೆ. ಸಕಲರ ಪೊರೆವ ಭಗವಾನ್ ಮಹಾವಿಷ್ಣು ಸಂಪತ್ತನ್ನು ಮರಳಿ ಪಡೆಯುವಂತೆ ಮಾಡಿದ ಮಾಸವೇ ಧನುರ್ಮಾಸ ಎಂಬುದಾಗಿ ಪೌರಾಣಿಕ ಹಿನ್ನೆಲೆಯಿದೆ. ವಿಪರೀತ ಚಳಿಯ ಹೊಡೆತವನ್ನು ಸಹಿಸಿಕೊಂಡು ಮನುಷ್ಯ ಜೀವನ ಸಾಗಿಸಬೇಕೆಂಬ ಸಂದೇಶವಿದೆ. ಯಾವ ಯಾವ ಕಾಲಕ್ಕೆ ಏನೇನು ಕೊಡಬೇಕು? ಏನು ಮಾಡಬೇಕು? ಎಷ್ಟು ಕೊಡಬೇಕು? ಎಲ್ಲವನ್ನೂ ಬಲ್ಲ ಭಗವಂತನ ಅರಿವಿಗೆ ಬಾರದ್ದು ಏನಾದರೂ ಇದೆಯೇ? ಇಲ್ಲ. ಭಗವದ್ಗೀತೆ, ವಿಷ್ಣು ಸಹಸ್ರನಾಮ, ಶ್ಲೋಕ, ಸುಭಾಷಿತ, ಉಪನಿಷತ್ತು, ವೇದ ಪುರಾಣಗಳ ಪಠಣಕ್ಕೆ ಸಕಾಲವಿದು. ವೈಷ್ಣವ ದೇವಾಲಯಗಳಲ್ಲಿ ಸಂಭ್ರಮ, ಸಡಗರ, ಭಕ್ತರ ಭೇಟಿ, ದರ್ಶನ ಹೆಚ್ಚಿರುತ್ತದೆ. ಅಲಂಕಾರ ಪ್ರಿಯ ದೇವ ಮಹಾವಿಷ್ಣುವಿನ ಜೊತೆ, ಸಂಪತ್ತಿನ ಒಡತಿ ದೇವಿ ಮಹಾಲಕ್ಷ್ಮೀಯನ್ನೂ ಆರಾಧಿಸಿ, ಮನೋಭಿಲಾಷೆಗಳನ್ನು ನಿವೇದಿಸಿಕೊಳ್ಳುವರು. ಭಗವಂತನ ನಾಮಸ್ಮರಣೆ, ಪೂಜೆ, ಆರಾಧನೆಯ ಜೊತೆಗೆ ಕಾಯಕನಿಷ್ಠೆಯನ್ನೂ ಅಳವಡಿಸಿಕೊಂಡು ಪುನೀತರಾಗೋಣ.
(ಸಂಗ್ರಹ) ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!