ಕೌಸಲ್ಯಾಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ/
ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈಮಾಹ್ನಿಕಂ//
ಶುಕ್ಲಾಂಬರಧರಂ ವಿಷ್ಣುಂ
ಶಶಿವರ್ಣಂ* *ಚತುರ್ಭುಜಮ್/
ಪ್ರಸನ್ನವದನಂ ಧ್ಯಾಯೇತ್/
ಸರ್ವ ವಿಘ್ನೋಪಶಾಂತಯೇ//
ನಾರಾಯಣಂ ರಮಾಶ್ಲಿಷ್ಟಂ ಸರ್ವಮಂಗಲಭಾಜನಂ/ಚಿಂತಯೇತ್ಪ್ರಾತರುತ್ಥಾಯ ಸರ್ವದು:ಖೋಪಶಾಂತಯೇ//
ವೈಕುಂಠವಾಸಿಯಾದ ಭಗವಾನ್ ವಿಷ್ಣು, ಮಾತೆ ಲಕ್ಷ್ಮೀದೇವಿಯ ಸಹಿತವಾಗಿ ಪೂಜೆ, ನಮನ, ಏಕಾದಶಿ ಉಪವಾಸ, ವ್ರತ, ಆರಾಧನೆಯ ಪುಣ್ಯ ದಿನವಿಂದು. ಮುಕ್ಕೋಟಿ ಏಕಾದಶಿಯೆಂದೂ ಹೇಳುವರು. ಭಗವಂತನ ಅಂತರಂಗದ ವೈಕುಂಠದ ಬಾಗಿಲು ತೆರೆಯುವ ದಿನವೆಂದೇ ಪ್ರತೀತಿ. ಸುರನರರನ್ನು ಮಹಾವಿಷ್ಣು ಹರಸುವ, ಅನುಗ್ರಹಿಸುವ ದಿನ. ಈ ವೈಕುಂಠ ಏಕಾದಶಿಯಂದು ಭಗವಂತನ ನಾಮಸ್ಮರಣೆ ಮಾಡಿದರೆ ಸಕಲ ಪಾಪಂಗಳೂ ಪರಿಹಾರವೆಂಬ ನಂಬಿಕೆ. ಹೇಮಂತ ಋತು, ದಕ್ಷಿಣಾಯನ, ವಿಶ್ವಾವಸು ಸಂವತ್ಸರ, ಶುಕ್ಲಪಕ್ಷ, ಪೌಷ್ಯ ಮಾಸದ ಈ ಶುಭದಿನ ವೆಂಕಟೇಶ್ವರನ ಆರಾಧನೆಯು ಅತ್ಯಂತ ಪವಿತ್ರವಾದುದೂ, ಸೂಕ್ತವಾದುದು ಆಗಿದೆ. ವೈಕುಂಠ ಏಕಾದಶಿಯ ಆಚರಣೆಯನ್ನು ದಶಮಿ ತಿಥಿಯಂದು ಆರಂಭಿಸಿ, ಏಕಾದಶಿ ಉಪವಾಸದೊಂದಿಗೆ, ದ್ವಾದಶಿಯಂದು ಪಾರಾಯಣ ಮಾಡಿ ನೈವೇದ್ಯ ಅರ್ಪಿಸಿ, ಸರಳ ಆಹಾರ ಸೇವನೆಯೊಂದಿಗೆ ಆಚರಿಸುವುದೂ ಇದೆ. ಎಲ್ಲಾ ವೈಷ್ಣವ ದೇವಾಲಯಗಳಲ್ಲಿ ವಿಜೃಂಭಣೆಯನ್ನು ಕಾಣಬಹುದು. ಭಕ್ತರು ಭೇಟಿ ನೀಡಿ, ಇಷ್ಟಾರ್ಥ ನೆರವೇರಿಸೆಂದು ಬೇಡುವರು. ಈ ದಿನಗಳಲ್ಲಿ ತುಳಸಿಗಿಡ, ಅನ್ನ, ಬಟ್ಟೆ, ಧಾನ್ಯಗಳ ದಾನ ಮಾಡಿದರೆ ಒಳ್ಳೆಯದೆಂದು ಪೌರಾಣಿಕ ಉಲ್ಲೇಖವಿದೆ. ಸಂಜೆ ಉರಿಸುವ ದೀಪಕ್ಕೆ ವಿಶೇಷ ಮಹತ್ವವಿದೆ. ತುಳಸಿ ಗಿಡಕ್ಕೆ ನೀರುಣಿಸಿ ವಿಶೇಷವಾಗಿ ಪೂಜಿಸಿ ನಮಸ್ಕರಿಸಬಹುದು. ಹರಿನಾಮ ಸ್ಮರಣೆ, ಭಗವದ್ಗೀತೆ, ವಿಷ್ಣುಸಹಸ್ರನಾಮ ಪಾರಾಯಣ, ಲಕ್ಷ್ಮೀದೇವಿಯ ಅಷ್ಟೋತ್ತರ ನಾಮಗಳನ್ನು, ಭಗವಂತನ ಸ್ತೋತ್ರಗಳನ್ನು ಪಠಿಸುವುದರಿಂದ ಮನೆ ಮತ್ತು ಮನದೊಳಗಿನ ಕಲ್ಮಶ ತೊಲಗುವುದಂತೆ. ನಕಾರಾತ್ಮಕ ಶಕ್ತಿಗಳ ನಿರ್ಮೂಲನಕ್ಕೆ ಮನೆಯ ಹೊರ ಒಳಗೆ ಪವಿತ್ರವಾದ ತುಳಸಿ ನೀರನ್ನುಪ್ರೋಕ್ಷಣೆಮಾಡಬೇಕಂತೆ. ಕಷ್ಟ-ಸುಖ ಬದುಕಿನ ಹಾದಿಯಲ್ಲಿ ಸಾಮಾನ್ಯ. ಶ್ರೀಹರಿಯ ಧ್ಯಾನ 'ಓಂ ನಮೋ ನಾರಾಯಣಾಯ'ಮಂತ್ರವನ್ನು ಪಠಿಸುವುದು ಮನಸ್ಸಿಗೆ ನೆಮ್ಮದಿ ಲಭಿಸುವುದು. ವಿಶೇಷವಾಗಿ ವೆಂಕಟೇಶ್ವರನಿಗೆ ಅಕ್ಕಿಯಿಂದ ಮಾಡಿದ ಪಾಯಸ ಸಮರ್ಪಣೆ ಮಾಡುವ ರೂಢಿಯಿದೆ. ವಿಷ್ಣು ಸನ್ನಿಧಿಯಲ್ಲಿ ಭೇದಕ್ಕೆಡೆಯಿಲ್ಲ, ಒಂದೇ ನಿಯಮ, ಒಂದೇ ತತ್ವ. ಕರ್ಮೇಂದ್ರಿಯ, ಜ್ಞಾನೇಂದ್ರಿಯಗಳನ್ನು ನಿಗ್ರಹಿಸಿ ಭಗವತ್ ಚಿಂತನೆ ನಡೆಸುವುದೊಳ್ಳಿತು. ವೈಕುಂಠಾಧಿಪತಿಯನ್ನು ಶ್ರದ್ಧಾಭಕ್ತಿಯಿಂದ ಮನಸಾರೆ ಭಜಿಸೋಣ, ನಮಿಸೋಣ, ಅರ್ಚಿಸೋಣ, ಕೃತಾರ್ಥರಾಗೋಣ
ಮೇಘಶ್ಯಾಮಂ ಪೀತ ಕೌಶೇಯವಾಸಂ
ಶ್ರೀವತ್ಸಾಂಕಂ ಕೌಸ್ತುಭೋದ್ಭಸೀತಾಂಗಂ/
ಪುಣ್ಯೋಪೇತಂ ಪುಂಡರೀಕಾಯತಾಕ್ಷಂ/
ವಿಷ್ಣುಂ ವಂದೇ ಸರ್ವ ಲೋಕೈಕ ನಾಥಂ//
ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ,ತನ್ನೋ ಪ್ರಚೋದಯಾತ್//
(ಸಂಗ್ರಹ) ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!