ಮಾತು ಮುತ್ತಿನಂತಿರಬೇಕು' ಬಲ್ಲವರ ನುಡಿ, ಮಾತೇ ಮಾಣಿಕ್ಯ, ಮಾತೇ ಮೃತ್ಯುವಿಗೂ ದಾರಿ, ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು. ಕೆಲವರ ಮಾತಿನ ವೈಖರಿ ಘಟಸರ್ಪದ ಘೋರ ವಿಷಕ್ಕಿಂತಲೂ ಮಿಗಿಲಂತೆ. ಮಾತುಮನೆ ಕೆಡಿಸಿತು; ತೂತು ಒಲೆ ಕೆಡಿಸಿತು, ಎಲುಬಿಲ್ಲದ ನಾಲಿಗೆಯಲ್ಲಿ ಮಾತು ಹೇಗೆ ಬೇಕಾದರೂ ಸುರುಳಿ ಸುರುಳಿಯಾಗಿ ಬಿಚ್ಚಿಕೊಂಡು ರಿಂಗಣ ಹಾಕಬಹುದು. ಮಾತು ಚಂದವಾಗಿರಲಿ,ಸತ್ಯದ ಚಾಪೆಯಂತಿರಲಿ, ಮಿಥ್ಯ ಇಣುಕದಿರಲಿ. ಎಷ್ಟೋ ಸಂಬಂಧಗಳು ಈ ಮಾತಿನ ಧಾಟಿಯಿಂದ ಹಾಳಾದ್ದಿದೆ.ಇತ್ತೀಚೆಗೆ ವಿವಾಹ ಸಂಬಂಧಗಳು ಕೇವಲ ದೂರವಾಣಿ ಸಂಭಾಷಣೆಗಳಿಂದಾಗಿ ಮುರಿದು ಬೀಳುತ್ತಿದೆ. ಸಲಿಗೆಯೋ, ಸದರವೋ ಸಹ ಇರಬಹುದು. ಬಾಯಿ ಮಾತಿನಲ್ಲಿ ಬಡಾಯಿ ಬೇಡ. ಇದ್ದುದನ್ನು ಹೇಳಲು ಪ್ರಯತ್ನಿಸಬೇಕು. ಹೃದಯದಿಂದ ಮಾತು ಹೊಮ್ಮಲಿ. ಮಾತು ಪ್ರಿಯವಾಗಿದ್ದು, ಇತರರಿಗೆ ಮನಸ್ಸು ಹಿಂಡುವಂತಿರದೆ ಮನವರಳುವಂತಿರಲಿ. ಕೆಲವರಿಗೆ ಚುಚ್ಚಿ, ಹಂಗಿಸಿ ಮಾತನಾಡದಿದ್ದರೆ ಉಂಡ ಅನ್ನ ಕರಗದಂತೆ ,ಹಿರಿಯರು ಹೇಳಿದ್ದನ್ನು ಕೇಳಿದ್ದೇನೆ.ಅವರಿಗೆ ಅದರಲ್ಲಿ ಏನು ತೃಪ್ತಿಯೋ,ಆ ದೇವರಿಗೇ ಗೊತ್ತು.ನಯವಾದ ನಾಲಿಗೆಯೊಳು ಪ್ರಾಮಾಣಿಕ ಮಾತುಗಳು ಹೊಮ್ಮಲಿ.

(ಸಂಗ್ರಹ) ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ