ಜಗತ್ತಿಗೆ ಬೆಳಕು ಮತ್ತು ಶಾಖವನ್ನು ನೀಡಿ ಸಹಕರಿಸುವ ಸೂರ್ಯದೇವನ ದಿವ್ಯ ತೇಜಸ್ಸು ನಮಗೆ ಸಿದ್ಧಿ, ಬುದ್ಧಿ, ಸಮೃದ್ಧಿಯನ್ನು ನೀಡುವುದು. ಸೂರ್ಯ ನಮಸ್ಕಾರವೆಂಬುದು ಆರೋಗ್ಯ, ದೇಹದ ಹಿತ ಕಾಪಾಡುವುದು, ಮನಸ್ಸು ಉಲ್ಲಾಸದಿಂದಿರಲು ಸಹಕಾರಿ. ಈ ಉತ್ತರಾಯಣದ ಕಾಲದಲ್ಲಿ ಆಸ್ತಿಕ ಜನರು ಪುಣ್ಯ ತೀರ್ಥಸ್ನಾನ ಮಾಡುವರು. ಸೂರ್ಯ ದಕ್ಷಿಣದಿಂದ ಉತ್ತರದ ಕಡೆಗೆ ವಾಲಿ ಕ್ರಮಿಸುತ್ತಾನೆ ಎನ್ನುವುದು ವೈಜ್ಞಾನಿಕ ಸತ್ಯವೂ ಹೌದು. ಸೌರಮಾನದ ಪ್ರಕಾರ ನಾವು ನೋಡುವುದಾದರೆ ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವುದೇ ಸಂಕ್ರಮಣ. ಆದರೆ ಮಕರ ಮತ್ತು ಕರ್ಕಟಕ್ಕೆ ವಿಶೇಷ ಪ್ರಾಶಸ್ತ್ಯ.ಕಾರಣವಿಷ್ಟೆ ಮಕರ ಸಂಕ್ರಮಣ ಉತ್ತರಾಯಣ ಕಾಲದ ಆರಂಭ, ಕರ್ಕಾಟಕ ಸಂಕ್ರಾಂತಿ ದಕ್ಷಿಣಾಯನ ಕಾಲದ ಆರಂಭ. ಬದುಕುವುದು ಮಾತ್ರವಲ್ಲ,ಒಂದು ನಂಬಿಕೆಯ ಪ್ರಕಾರ ಉತ್ತರಾಯಣದಲ್ಲಿ ಸಾವು ಬರಲೆಂದು ಆಶಿಸುವವರೂ ಇದ್ದಾರೆ. ಕಾರಣ ದೇವತೆಗಳ ವಾಸಸ್ಥಾನವಾದ ಸ್ವರ್ಗದ ಬಾಗಿಲು ದಕ್ಷಿಣಾಯನದಲ್ಲಿ ಮುಚ್ಚಿದ್ದು, ಉತ್ತರಾಯಣದಲ್ಲಿ ತೆರೆಯುತ್ತದೆಯೆಂಬ ನಂಬಿಕೆ. ಅವರವರ ನಂಬಿಕೆ ಅವರದವರದು. ಒಂದು ರೀತಿಯಲ್ಲಿ ನೋಡಿದರೆ ಸ್ವರ್ಗ-ನರಕ ಎಲ್ಲವೂ ನಮ್ಮ ನಮ್ಮ ಕರ್ಮದ ಫಲ, ವಿಧಿಲಿಖಿತ ಜೀವನದ ಹಾದಿಯಲ್ಲಿಯೇ ಅನುಭವಿಸಿ ಹೋಗುತ್ತೇವೆ. ದಾನಧರ್ಮಾದಿಗಳಿಗೆ ಪ್ರಾಶಸ್ತ್ಯವೀ ಕಾಲ. ಸಂಕ್ರಾಂತಿ ಎನ್ನುವುದು ಸೂರ್ಯರಾಧನೆ ಈಗ ದೀರ್ಘ ಹಗಲಿರುತ್ತದೆ. ಇಳೆಯ ಬೆಳೆಗೆ ಆತನ ಶಾಖ, ಬಿಸಿಲು ಬೇಕು. ರೈತರಿಗಿದು ಸುಗ್ಗಿ ಕಾಲ. ಕೆಲವೆಡೆ ನಿನ್ನೆ, ಕೆಲವು ಕಡೆ ಇಂದು 'ಮಕರ ಸಂಕ್ರಾಂತಿ'ಹಬ್ಬವನ್ನು ಆಚರಿಸುತ್ತಿದ್ದಾರೆ. ಎಳ್ಳು ಬೆಲ್ಲ ಸವಿಯೋಣ, ಒಳ್ಳೆಯ ಮಾತುಗಳ ಆಡೋಣ, ಕ್ಲೇಶಗಳ ಮರೆಯೋಣ, ದ್ವೇಷಗಳ ಸುಟ್ಟುಹಾಕೋಣ. ಸಿಹಿ ಖಾದ್ಯಗಳನ್ನುಂಡ ಬಾಳು  ಸಿಹಿಯಾಗಿಯೇ ಇರಲಿ. ಪ್ರಕೃತಿ ಪ್ರೇಮಿಗಳಾಗೋಣ, ಪರಿಸರದ ಬಗ್ಗೆ ಕಾಳಜಿಯಿರಲಿ. ನಮ್ಮ ಸುತ್ತಮುತ್ತಲಿನ ಪಶು ಪ್ರಾಣಿ, ಜೀವಜಂತುಗಳ ಬಗ್ಗೆ ಚೆಲ್ಲಾಟವಾಡದೆ ಬದುಕಲು ಬಿಡೋಣ. ಭಗವಂತನ ಆರಾಧನೆ ಶರೀರ ಸ್ವಾಸ್ಥ್ಯಕ್ಕೆ ಇರಲಿ. ಕಾಯಕದ ಮಹತ್ವವ ಅರಿಯುತ್ತಾ ಬಾಹ್ಯಾಡಂಬರ ಮರೆಯೋಣ ಆಂತರಿಕವಾಗಿ ಸತ್ಯ ನ್ಯಾಯಧರ್ಮಾತ್ಮರಾಗಿ ಮೆರೆಯೋಣ. ಬೀಗುವಲ್ಲಿ ಬೀಗೋಣ, ಬಾಗುವಲ್ಲಿ ಬಾಗೋಣ.

(ಸಂಗ್ರಹ) ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ