ನಡೆಯುವವ ಎಡವುದು ಸಹಜ, ತಪ್ಪೇ ಮಾಡದವರು ಇರಲಾರರು, ಗೊತ್ತಿದ್ದೋ ಗೊತ್ತಿಲ್ಲದೆಯೋ ನಮ್ಮ ಕೈಯಿಂದ ತಪ್ಪುಗಳಾಗುವುದು ಸಹಜ. ಬರೆಯುವಾಗ, ಓದುವಾಗ ಸಹ ತಪ್ಪುಗಳಾಗಬಹುದು. ಈಗಂತೂ ಈ ಅಂತರ್ಜಾಲದ ಬರೆಹದಲ್ಲಿ ಮುದ್ರಾರಾಕ್ಷಸನ ಹಾವಳಿ ಅಲ್ಲಲ್ಲಿ ಇಣುಕುವುದನ್ನು ಕಾಣುತ್ತೇವೆ. ಗೊತ್ತಿಲ್ಲದೆ ಆದ ತಪ್ಪುಗಳಿಗೆ ಕ್ಷಮೆಯಿದೆ. ಆದರೆ ಗೊತ್ತಿದ್ದೂ ಎಸಗಿದ ತಪ್ಪಿಗೆ ಕ್ಷಮೆಯೇ ಇಲ್ಲ. ಹೇಳಿದರೂ ತಿದ್ದಿಕೊಳ್ಳುವ ಮನೋಭಾವ ಕೆಲವು ಜನರಿಗಿಲ್ಲ. ಏನೂ ಮಾಡಲಾಗದು. ಅವರನ್ನು ಹಾಗೆಯೇ ಬಿಡಬೇಕಷ್ಟೆ. ಹೆತ್ತವರನ್ನು, ಹಿರಿಯರನ್ನು ಕಡೆಗಣಿಸುವುದು, ಅವರ ಸೊತ್ತನ್ನು ಪಡೆದುಕೊಂಡು ಬೀದಿಪಾಲು ಮಾಡುವುದನ್ನು ಮಾಧ್ಯಮಗಳಲ್ಲಿ, ನಮ್ಮ ನೆರೆಹೊರೆಯಲ್ಲಿ ನೋಡುತ್ತಿದ್ದೇವೆ. ಇದು ಗೊತ್ತಿದ್ದು ಎಸಗುವ ತಪ್ಪು. ಅಲ್ಲಿ ಬರಿಯ ಸ್ವಾರ್ಥವಷ್ಟೆ. ಇವರಿಗೂ ಅದೇ ಗತಿಯಾದರೆ ಹೇಗೆ? ಆ ಯೋಚನೆಯೇ ಇಲ್ಲ. ಯಾರಾದರೂ ಹೇಳಿದರೆ ಅವನೇ ತಪ್ಪಿತಸ್ಥ ಆಗುತ್ತಾನೆ. ತಪ್ಪೆಂದು ಅರಿವಾದಾಗ ಪಶ್ಚಾತ್ತಾಪವಾದರೂ ಬೇಕಲ್ಲ? ಅದಿಲ್ಲದವರೂ ಇದ್ದಾರೆ. 'ನನ್ನದೇ' ಸರಿ ಎಂದು ವಾದಿಸುವ ಒಂದು ವರ್ಗವೂ ಇದೆ. ಇದಕ್ಕೆ ಮೌನವಾಗಿರುವುದೇ ಒಳ್ಳೆಯದು. ಮನಸ್ಸಿನಂತೆ ನಡೆನುಡಿ ಅಲ್ವೇ? ಅವರ ಮನಸ್ಸೇ ಹಾಗೆ ಎಂದು ತಿಳಿದು ಸುಮ್ಮನಿರಬೇಕು .'ಬೆಳ್ಳಗಿರುವುದೆಲ್ಲ ಹಾಲಲ್ಲ'. ಬದುಕಿನ ಹಾದಿಯಲ್ಲಾಗುವ ತಪ್ಪುಗಳ ತಿದ್ದಿ ನಡೆಯೋಣ. ರಾಮಾಯಣ ಮಹಾಕಾವ್ಯ ರಚಿಸಿದ ಮಹರ್ಷಿ ವಾಲ್ಮೀಕಿಯವರ ಯಶೋಗಾಥೆಯನ್ನು ಓದಿದಾಗ ಇದು ಸ್ಪಷ್ಟವಾಗುತ್ತದೆ. ತಾನೆಸಗುವ ಕೆಲಸ ತಪ್ಪು, ಪಾಪವೆಂದ ನಾರದರಿಂದ ಕೇಳಿ ತಿಳಿದಾಗ ಅದನ್ನು ಪೂರ್ಣವಾಗಿ ತ್ಯಜಿಸಿದರು. ಲೋಕಮಾನ್ಯರಾದರು. ಹಿಂದಕ್ಕೆ ತಿರುಗಿ ನೋಡದೆ ಮುಂದೆ ಸಾಗಬೇಕು.ಹಿಂದಕ್ಕೆ ಹಿಂದಕ್ಕೆ ನಡೆದ ಕೌರವನ ಸ್ಥಿತಿ ಕೊನೆಗಾಲದಲ್ಲಿ ಏನಾಯಿತೆಂದು ನಮಗೆ ತಿಳಿದಿದೆ. ಚಕ್ರದ ತಿರುಗುವಿಕೆಯ ಸಾರವೇ ನಮ್ಮ ಜೀವನದಲ್ಲಿರಲಿ. ಹಿಂದಕ್ಕೆ ತಿರುಗಿದರೆ ಮುಗ್ಗರಿಸಿ ಬೀಳಬಹುದು.

(ಸಂಗ್ರಹ) ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ