ನಮ್ಮಲ್ಲಿರುವ ಆಸ್ತಿ, ಸಂಪತ್ತು ಎಂದ ತಕ್ಷಣ ನಮಗೆಲ್ಲ ನೆನಪಾಗುವುದು ಹಣ, ತೋಟ, ಬಂಗ್ಲೆ, ಕಾರು ಇತ್ಯಾದಿ. ಶರೀರಕ್ಕೆ ಮುಖ್ಯವಾಗಿ ಬೇಕಾದ ಲವಲವಿಕೆಯನ್ನು ಕೊಡುವ ಆರೋಗ್ಯ, ನೆಮ್ಮದಿ ನೆನಪಾಗುವುದೇ ಇಲ್ಲ. ಎಷ್ಟಿದ್ದರೇನು? ಅದೇ ಇಲ್ಲದಿದ್ದರೆ. ಇನ್ನೂ ಒಂದು ಬಹುದೊಡ್ಡ ಆಸ್ತಿ ನಮ್ಮ 'ಮಕ್ಕಳು' ಅವರನ್ನು ನಿರ್ಜೀವ 'ಅಸ್ಥಿ'ಗಳನ್ನಾಗಿ ಮಾಡದೆ, ಈ ಸಮಾಜದಲ್ಲಿ, ಮನೆಯಲ್ಲಿ ಜೀವವಿರುವ 'ಆಸ್ತಿ'ಗಳನ್ನಾಗಿ ಬೆಳೆಸುವ ಮಹತ್ತರ ಹೊಣೆಗಾರಿಕೆ ನಮ್ಮದು. ಅವರಿಗೆ ಬದುಕಿಗೆ ಬೇಕಾದ ವಿದ್ಯೆ, ಮೌಲ್ಯಗಳನ್ನು ನೀಡಬೇಕು. ಪ್ರೀತಿ, ಸ್ನೇಹದ ನಿಜ ಅರ್ಥ ಮಾಡಿಸಬೇಕು. ಸಹಕರಿಸುವ ಗುಣ ಅಂತರಂಗದಿಂದಲೇ ಮೂಡಬೇಕು. ಕಣ್ಣಿಗೆ ಕಾಣಿಸದ, ನಮ್ಮನೆಲ್ಲ ಪೊರೆಯುವ ಅದ್ಭುತ ಶಕ್ತಿ ನಮ್ಮನ್ನು ಸದಾ ರಕ್ಷಿಸುತ್ತದೆ ಎನ್ನುವ ಭಾವನೆ ಅವರಿಗಾಗಬೇಕು. ಮೌಢ್ಯಗಳು ಬೇಡ. ಅವರ ಬೇಡಿಕೆಗಳಲ್ಲಿ ಅಗತ್ಯವಿದ್ದುದನ್ನು ಪೂರೈಸೋಣ. ಅನಗತ್ಯವಾದುದರ ಬಗ್ಗೆ ಸಮಾಧಾನದಿಂದ ತಿಳಿಹೇಳುವ ಕೆಲಸವಾಗಬೇಕು. ಹಣದ ಮೌಲ್ಯದ ಬಗ್ಗೆ ಸಮಯ, ಸಂದರ್ಭ ನೋಡಿಕೊಂಡು ಮಾತನಾಡಬೇಕು. ಒಂದೆರಡು ದಿನದಲ್ಲಾಗುವ ಕೆಲಸವಲ್ಲ. ಪ್ರತಿನಿತ್ಯ ಸೂಕ್ಷ್ಮವಾಗಿ ಗಮನಿಸಿ ಹೇಳುವ ತಾಳ್ಮೆ ನಮ್ಮಲ್ಲಿರಬೇಕು. 'ಅರಳಿರುವ ಹೂವು ಬಾಡುವ ಮೊದಲೇ ಭಗವಂತನ ಅರ್ಚನೆಗೋ, ಹೆಂಗಳೆಯರ ಮುಡಿಗೋ ಏರಿದರೆ ಚಂದ, ಸಾರ್ಥಕ್ಯ ಭಾವನೆ. ಕಾಯಕದ ಮಹತ್ವದ ಹಾದಿಯನ್ನು ಅವರಲ್ಲಿ ಮೂಡಿಸಬೇಕು. 'ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರವಲ್ಲ' ಮನವರಿಕೆ ಮಾಡೋಣ. ಕಳಕೊಂಡ ಮೇಲೆ ಕೈಕೈ ಹಿಸುಕಿದರೆ ಪ್ರಯೋಜನವಿಲ್ಲ. ವಿಧಿ ನಿಯಮ ತಪ್ಪಿಸಲಾಗದು, ನಿಜ. ಒಂದು ಮಾತಿದೆ 'ಋಣಾನುಬಂಧ ರೂಪೇಣ ಪತಿ ಪತ್ನಿ ಸುತಾಲಯಂ' ಒಪ್ಪೋಣ. ಆದರೂ ಹೆತ್ತವರ, ಹಿರಿಯರ ಕರ್ತವ್ಯದ ಪರಿಧಿಯಿದೆ. ಅದರಂತೆ ನಡೆ ನುಡಿ ಕಲಿಸುವುದು ನಮ್ಮ ಧರ್ಮ.
(ಸಂಗ್ರಹ) ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!