ಕೋವಿಡ್ ಅಬ್ಬರ ಬಹುತೇಕ ತಗ್ಗಿದ ಬೆನ್ನಲ್ಲೇ ದೇಶದಾದ್ಯಂತ ಕಳೆದ ಮೂರು ತಿಂಗಳಿಂದ ಶೀತ, ಜ್ವರ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಕೊರೋನಾ ವೈರಸ್ ನ ಹೊಸ ರೂಪಾಂತರಿಯಿಂದ ಏನಾದರೂ ಈ ರೀತಿಯ ಸಮಸ್ಯೆ ಕಾಣಿಸಿಕೊಂಡಿದೆಯೇ ಅಥವಾ ಚಳಿಗಾಲದಿಂದ ಬೇಸಿಗೆಗೆ ಪ್ರವೇಶಿಸುವಾಗ ವಾತಾವರಣದಲ್ಲಿನ ವ್ಯತ್ಯಾಸದಿಂದಾಗಿ ಆರೋಗ್ಯದಲ್ಲಿ ಏರುಪೇರಾಗುತ್ತಿದೆಯೇ ಎಂದು ಜನರು ಭಾವಿಸುತ್ತಿರುವಾಗಲೇ, ಇದೇ ಅಮೇರಿಕಾದಲ್ಲಿ ೬೦ರ ದಶಕದಲ್ಲೇ ಕಂಡುಬಂದಿದ್ದ ಎಚ್3ಎನ್2 ವೈರಾಣುವಿನ ಉಪಟಳ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಹೇಳಿದೆ. ಇದರಿಂದಾಗಿ ಕೋವಿಡ್ ಆತಂಕ ಸಹ ದೂರವಾಗಿದೆ. ಜತೆಗೆ ಈ ವೈರಾಣು ಕೋವಿಡ್ ರೀತಿ ಮಾರಣಾಂತಿಕವಲ್ಲದಿರುವುದರಿಂದ ನಿಟ್ಟುಸಿರು ಬಿಡುವಂತಾಗಿದೆ. ಹಾಗಂತ ಉಪೇಕ್ಷೆ ಮಾಡುವಂತಿಲ್ಲ. ನಿರ್ಲಕ್ಷ್ಯ ವಹಿಸಿದರೆ ವಯೋವೃದ್ಧರು ಹಾಗೂ ಮಕ್ಕಳಲ್ಲಿ ಶ್ವಾಸಕೋಶದ ಸೋಂಕಿಗೆ ಇದು ಎಡೆ ಮಾಡಿಕೊಡಬಲ್ಲದು ಎಂಬುದು ತಜ್ಞರ ಅಭಿಪ್ರಾಯ. ಕೋವಿಡ್ ಸಂದರ್ಭದಲ್ಲಿ ಇದ್ದಂತಹ ಮುನ್ನೆಚ್ಚರಿಕೆ ಕ್ರಮಗಳನ್ನೇ ಅಲ್ಪ ಪ್ರಮಾಣದಲ್ಲಿಯಾದರೂ ಪಾಲಿಸಿದರೆ ಈ ಸೋಂಕಿನಿಂದ ಪಾರಾಗಬಹುದು. ಹೀಗಾಗಿ ಈ ಸೋಂಕನ್ನು ನಿಗ್ರಹಿಸುವ ನಿಟ್ಟಿನಲ್ಲಿ ಜನರದ್ದೇ ಪ್ರಮುಖ ಪಾತ್ರವಿದೆ ಎಂಬುದನ್ನು ಮನಗಾಣಬೇಕಾಗಿದೆ.
ಜ್ವರ, ಕೆಮ್ಮು, ವಾಕರಿಕೆ, ವಾಂತಿ, ಗಂಟಲುನೋವು, ಸ್ನಾಯುಸೆಳೆತ ಹಾಗೂ ಅತಿಸಾರದಂತಹ ಲಕ್ಷಣಗಳನ್ನು ಎಚ್3ಎನ್2 ಹೊಂದಿದೆ. ಈ ರೀತಿಯ ಲಕ್ಷಣ ಕಾಣಿಸಿಕೊಂಡವರು ಸ್ವಯಂ ವೈದ್ಯರಾಗಿ ವಿವಿಧ ಔಷಧಗಳನ್ನು ಸೇವಿಸಿ ಪ್ರಯೋಗಗಳನ್ನು ದೇಹದ ಮೇಲೆ ಮಾಡುವ ಬದಲು ಹತ್ತಿರದ ವೈದ್ಯರನ್ನು ಸಂಪರ್ಕಿಸುವುದು ಒಳಿತು. ವೈದ್ಯರು ನೀಡುವ ಸೂಚನೆಗಳನ್ನು ಪಾಲಿಸುವುದು ಉತ್ತಮ. ಹಾಗೆಯೇ ಈ ಸೋಂಕು ಹಬ್ಬಿರುವ ಹಿನ್ನಲೆಯಲ್ಲಿ ಜನರು ಆಗಾಗ್ಗೆ ಕೈತೊಳೆದುಕೊಳ್ಳುವ, ಜನಸಂದಣಿ ಪ್ರದೇಶಗಳಲ್ಲಿ ಮಾಸ್ಕ್ ಧರಿಸಿ ಓಡಾಡುವ, ಕೈಕುಲುಕಿ ಶುಭಾಶಯ ಹೇಳುವ ಅಭ್ಯಾಸಗಳನ್ನು ತಪ್ಪಿಸುವುದು ಒಳಿತು. ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವ ಅಭ್ಯಾಸವನ್ನು ಬಿಡಬೇಕು. ಇದನ್ನು ಸೋಂಕು ಇದ್ದಾಗ ಎಂದಲ್ಲ ಶಾಶ್ವತವಾಗಿ ನಿಲ್ಲಿಸಿದರೆ ಹಲವಾರು ಸೋಂಕುಗಳು ಹಬ್ಬುವುದು ಹಾಗೂ ನಗರಗಳು ಗಲೀಜಾಗುವುದು ತಪ್ಪುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಕೊರೋನಾದಂತಹ ಮಹಾಮಾರಿಯನ್ನೇ ದೇಶವಾಸಿಗಳು ಎದುರಿಸಿ ಗೆದ್ದಿದ್ದಾರೆ. ಹೀಗಾಗಿ ಈ ಸೋಂಕಿನ ವಿರುದ್ಧದ ಹೋರಾಟಕ್ಕೆ ಮುನ್ನೆಚ್ವರಿಕೆಯೊಂದಿಗೆ ಅಣಿಯಾಗುವುದು ಉತ್ತಮ. ಸೋಂಕು ತಾಗದಂತೆ ಜನರು ಯಾವ ರೀತಿ ಎಚ್ಚರಿಕೆ ವಹಿಸುತ್ತಾರೋ, ಅದೇ ರೀತಿ ಸೋಂಕು ಕಾಣಿಸಿಕೊಂಡಾಗ ಮತ್ತೊಬ್ಬರಿಗೆ ಅದು ವರ್ಗವಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನೂ ಪ್ರದರ್ಶಿಸುವುದು ಸೂಖ್ತ. ಕೋವಿಡ್ ಸಂಪೂರ್ಣ ಹೋಗಿಲ್ಲ. ಮೈಮರೆತು ವರ್ತಿಸಿ ಅದರ ಮತ್ತೊಂದು ಪ್ರಬಲ ರೂಪಾಂತರಿ ಉದಯಕ್ಕೆ ಆಸ್ಪದ ನೀಡಬಾರದು.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೦೬-೦೩-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!