ಯಾರಿಗಾದರೂ ಹಣ ಮುಖ್ಯವೋ ಶಾಂತಿ, ನೆಮ್ಮದಿ ಮುಖ್ಯವೋ ಎಂದರೆ ಹೆಚ್ಚಿನವರು ಹಣವೇ ಮುಖ್ಯ ಹೇಳಬಹುದು. ಹೊಟ್ಟೆಬಟ್ಟೆ, ಬದುಕಿಗಾಗಿ ಹಣ ಬೇಕು. ಆರೋಗ್ಯಕ್ಕಾಗಿ ನೆಮ್ಮದಿ, ಶಾಂತಿ ಬೇಕು. ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕಾದ್ದು ಮನುಷ್ಯನ ಜಾಣ್ಮೆ. 'ಹಣಕ್ಕಾಗಿಯೇ ಹೆಣಗಾಡಿ ಕೊನೆಗೆ ಹೆಣ'ವಾಗಬಾರದಲ್ಲ? ಗಾದೆ ಮಾತೇ ಇದೆ 'ಹಣ ಕಂಡರೆ ಹೆಣವೂ ಬಾಯಿ ಬಿಡಬಹುದು'. ಸುಖ ಶಾಂತಿ, ನೆಮ್ಮದಿ ಸಂತೆಯಲ್ಲಿ ಸಿಗದು, ನಮಗೆ ನಾವೇ ಕಂಡುಹಿಡಿಯುವ ಸಾಧನವದು. ಬದುಕಿನ ಇತಿಮಿತಿ ಇದನ್ನೆಲ್ಲ ನೀಡಬಹುದು. ಆತ್ಮಜ್ಞಾನ, ತೃಪ್ತಿ, ಸಾಕೆಂಬ ಮನೋಭಾವ ಇವೆಲ್ಲ ಶಾಂತಿಗಿರುವ ಮಾರ್ಗಗಳು. ಭಗವದ್ಗೀತೆಯಲ್ಲಿ ನಾವು ಓದಿದ ಶ್ಲೋಕವೊಂದು ಶಾಂತಿಯ ಹುಡುಕಾಟದ ಬಗ್ಗೆ ಹೀಗೆ ಉಲ್ಲೇಖವಿದೆ.

ಶ್ರದ್ಧಾವಾನ್ ಲಭತೇ ಜ್ಞಾನಂ ತತ್ಪರ: ಸಂಯತೇಂದ್ರಿಯ:/

ಜ್ಞಾನಂ ಲಬ್ಧ್ವಾ'ಪರಾಂ ಶಾಂತಿಂಮ್' ಅಚಿರೇಣಾಧಿಗಚ್ಛತಿ//

ಕೋಟ್ಯಾಧಿಪತಿಗಳೂ, ಆಸ್ತಿ ಐಶ್ವರ್ಯ ಹೊಂದಿದ ಕೆಲವರಲ್ಲಿ ಮಾತನಾಡುವಾಗ ಹೇಳುವ ಮಾತು "ಹಣ ಇದೆ ,ಆದರೆ ಮನಸ್ಸಿಗೆ ಶಾಂತಿಯೇ ಇಲ್ಲ, ರಾತ್ರಿ ನಿದ್ದೆಯಿಲ್ಲ" ಎಂಬುದಾಗಿ. ನಿದ್ದೆ ಕೆಡಿಸುವ ಧನ ಯಾಕೆ ಅಲ್ಲವೇ? ಬಡವನ ಗುಡಿಸಲೊಳಗೆ ಹಣವಿರದು, ಆದರೆ ನೆಮ್ಮದಿ ಇರುವುದು. 'ತೃಪ್ತಿ'  ಎಲ್ಲಿದೆಯೋ ಅಲ್ಲಿ 'ಶಾಂತಿ'ಯಿದೆ. ಇನ್ನೂ ಬೇಕು, ಮತ್ತಷ್ಟು ಬೇಕೆಂಬುದು ಹೋಗಿ, ಇದ್ದದ್ದು ಸಾಕು' ಬರಲಿ. ಬಯಕೆಗೆ ಅಂಕುಶವಿರಲಿ. ಚಿನ್ನದ ಮೊಟ್ಟೆಯಿಡುವ ಕೋಳಿಯ ಕಥೆ ' ಆಗಬಾರದು. ಜೀವಹಾನಿಯೂ ಆಸೆಯಿಂದಾಯಿತು.

ಬಡವ ಮಲಗಿದ ಗುಡಿಸಲಿ ಪ್ರೇಮವನು ಕಂಡ

ಕಾಡು ಝರಿಗಳಲಿ ಗುರುವ ಕಂಡ

ತಾರೆ ತುಂಬಿದ ನಭದಿ ಮೌನವನು ಕಂಡ

ಒಂಟಿ ಬೆಟ್ಟಗಳಲಿ ನಿದ್ರೆಯನು ಕಂಡ

ಮೇಲಿನ ಕವನದ ಸಾಲುಗಳು ದಾರ್ಶನಿಕ, ಕವಿ ವರ್ಡ್ಸ್ ವರ್ತ್ ಬರೆದಿರುವುದು. ಹೌದಲ್ವೇ? ಶಾಂತ ಮನಸ್ಕನು ಮಾತ್ರ ಆನಂದದ ಅನುಭೂತಿ ಹೊಂದುವನು.

ಸ್ಮಿತವಿರಲಿ ವದನದಲಿ,ಕಿವಿಗೆ ಕೇಳಿಸದಿರಲಿ

ಹಿತವಿರಲಿ ವಚನದಲಿ,ಋತವ ಬಿಡದಿರಲಿ/

ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ

ಅತಿಬೇಡವೆಲ್ಲಿಯುಂ-ಮಂಕುತಿಮ್ಮ//

ಮಾನ್ಯ ಡಿ.ವಿ.ಜಿಯವರ ಈ ಕಗ್ಗದ ಸಾಲುಗಳು ನಮ್ಮ ಬದುಕಿಗೆ ಸರಳತೆಯ ಸೂತ್ರವಾಗಬಹುದು.

(ಸಂಗ್ರಹ) -ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ