ನಮ್ಮಲ್ಲಿ ಪಾಂಡಿತ್ಯವಿದೆ ಎಂದು ನಾವೇ ಕೊಚ್ಚಿಕೊಳ್ಳುವುದರಲ್ಲಿ ಅರ್ಥವಿಲ್ಲ. ನಮ್ಮ ನಡೆ ನುಡಿ, ದಿನದ ವ್ಯವಹಾರಗಳು, ವೃತ್ತಿ ಕ್ಷೇತ್ರದ ಕರ್ತವ್ಯ ಪ್ರಜ್ಞೆ,ಜೀವನದ ಹಾದಿ, ಗುರು ಹಿರಿಯರೊಂದಿಗೆ ಗೌರವ, ಸಂಬಂಧ, ನೆರೆಹೊರೆ ಎಲ್ಲವನ್ನೂ ಗಮನಿಸಿ ಇತರರು ಹೇಳಬೇಕು. ಜ್ಞಾನ, ಪಾಂಡಿತ್ಯ ಸಮಯ, ಸಂದರ್ಭಕ್ಕೆ ಸರಿಯಾಗಿ ಉಪಯೋಗಕ್ಕೆ ಅಳವಡಿಸುವ ಚಾಕಚಕ್ಯತೆಯಿರಬೇಕು. 'ಕೇವಲ ಅರಿತರೆ ಸಾಲದು. ಆಚರಿಸಿ ಯಶಸ್ಸನ್ನು ಕಾಣಬೇಕು. ಜೊತೆಗೆ ದೈವಕೃಪೆಯೂ ಅಗತ್ಯ, ಮರೆಯಬಾರದು. ಕಷ್ಟಪಟ್ಟು ಗಳಿಸಿದ್ದನ್ನು ಕೊನೆತನಕ ಉಳಿಸುವ ಹೊಣೆಗಾರಿಕೆಯಿರಬೇಕು. 'ಕಲ್ಲಿನಲಿ ಉಜ್ಜದೆ ಬೆಳ್ಳಿ, ಚಿನ್ನ, ವಜ್ರ ಪರೀಕ್ಷಿಸಲಾಗದು. ಪರೀಕ್ಷೆಗಳಿಲ್ಲದೆ ಮನುಷ್ಯ ಪರಿಪೂರ್ಣನಾಗಲಾರ' ಅಲ್ಲವೇ? ಕಾಡಿನ ಬಾಲಕ ಏಕಲವ್ಯನ ಕಥೆ ನಾವೆಲ್ಲ ಓದಿದವರೇ.ಶ್ರದ್ಧೆಯ ಕಲಿಕೆ, ಏಕಾಗ್ರತೆಯ ಪ್ರಜ್ಞೆ, ಗುರುಭಕ್ತಿ, ಅತ್ಯುತ್ತಮ ಎನಿಸಿಕೊಂಡವರಿಗಿಂತ ಮೇಲ್ಪಂಕ್ತಿಯಲ್ಲಿ ನಿಂತು ಅಮರನಾದ. ಭಗವಾನ್ ಶ್ರೀಕೃಷ್ಣನ ಗೀತೋಪದೇಶದ ಸಾರ ಬದುಕಿನ ಆಡೊಂಬಲವೇ ಹೌದು. ತಾನೆಂದೂ ರಾಜ್ಯ ಕೋಶ, ಐಶ್ವರ್ಯ ಬಯಸಿದವನಲ್ಲ. ದುಷ್ಟರ ಮಟ್ಟ ಹಾಕಲು ಕಪಟದ ಸೋಗನ್ನು, ವೇದಿಕೆಯನ್ನು ನಿರ್ಮಿಸಿದ ಪ್ರಜ್ಞಾವಂತ ಸೂಕ್ಷ್ಮತೆಯ ಆಲೋಚನೆಗಳ ರಾಜಕಾರಿಣಿಯಾದ. ಸಕಲರೂ ಮೆಚ್ಚುವ ಕಾರ್ಯಗಳಿಂದ ದೇವತ್ವಕ್ಕೇರಿ ಧರ್ಮ ಸಂಸ್ಥಾಪಕನಾದ. ಶ್ರೀರಾಮಚಂದ್ರ ಪ್ರಭು ಮನುಷ್ಯ ರೂಪದಲ್ಲಿ ಜನಿಸಿದರೂ, ಉನ್ನತ ಆದರ್ಶಗಳಿಂದ, ಸ್ಥಿತಪ್ರಜ್ಞ ಗುಣದಿಂದ, ಸ್ವತ:ತಾನೇ ಕಷ್ಟಗಳ ಅನುಭವಿಸುವುದರ ಮೂಲಕ ನಂಬಿದವರ ಹೃದಯದಲಿ ಭಗವಂತನ ಪಟ್ಟಕ್ಕೇರಿದ. ಹಿರಿಯರ ಮಾತು ಎಂದರೆ ವೇದವಾಕ್ಯವೆಂದೂ, ಭಾಷೆಯನ್ನು ಅಲ್ಲಗಳೆಯಲಾಗದೆಂದು ವಿಶ್ವಮುಖಕ್ಕೆ ತೋರಿಸಿದ ಧೀಮಂತನಾದ.ಉಂಡ ಮನೆಗೆ ಎರಡು ಬಗೆಯಬಾರದು ಎನ್ನುವ ತತ್ವವನ್ನು,ಉಪ್ಪಿನ ಋಣವನ್ನು ನೆನಪಿಟ್ಟು, ಕೌರವನ ದುರಾಡಳಿತ ಗೊತ್ತಿದ್ದರೂ ಸಹ ಭೀಷ್ಮಪಿತಾಮಹರು ಮೇಲ್ಪಂಕ್ತಿಯಲ್ಲಿ ನಿಂತವರು. ನೀಡಿದ ಭಾಷೆಯೂ ಸನ್ನಿವೇಶಕ್ಕೆ  ಪೂರಕವಾಗಿತ್ತು. ಕಷ್ಟಪಟ್ಟು ಹಾಸ್ಯ ಲೋಕದಲ್ಲಿ ವಿದ್ವಾಂಸರ ಸಾಲಿನಲ್ಲಿ ಸ್ಥಾನ ಪಡೆದ ತೆನ್ನಾಲಿರಾಮ ಮೌಢ್ಯತೆ, ಅಹಂಕಾರಗಳನ್ನು ಅನೇಕ ಪ್ರತ್ಯಕ್ಷ ಸಾಕ್ಷಿಗಳ ಮೂಲಕ ಇಲ್ಲವಾಗಿಸಿ, ಅರಸನ ಕಣ್ಣು ತೆರೆಸಿದವ. ದೇವರಾಗಲಿ, ಮನುಷ್ಯರಾಗಲಿ, ಋಷಿಮುನಿಗಳಾಗಲಿ,ಅರಸರಾಗಲಿ ಹಲವಾರು ಪರೀಕ್ಷೆಗಳನ್ನು ಬದುಕಿನ ಉದ್ದಕ್ಕೂ ಎದುರಿಸಿಯೇ ಉನ್ನತ ಸ್ಥಾನಮಾನಕ್ಕೇರಿದವರು. 'ಗುರುವಿನ ಗುಲಾಮ'ನಾಗಬೇಕೆಂದು ದಾಸವರೇಣ್ಯರು ಅನುಭವಿಸಿ ನುಡಿದರು. ತುಂಬಿದ ಕೊಡ,ಅನುಭವಗಳ ಭಾಂಡವೇ ಆದ ಗುರುಹಿರಿಯರ, ಪುರಾಣ ದಲ್ಲಿ ಉಲ್ಲೇಖವಿರುವ ಮಹಾನುಭಾವರ ಆಚಾರವಿಚಾರಗಳೇ ಜನಸಾಮಾನ್ಯರಾದ ನಮಗೆಲ್ಲ ಒಂದು ಪಾಠವಿದ್ದಂತೆ. ನಮಗೆ ತಿಳಿದ ವಿಚಾರವನ್ನು ಎಲ್ಲೆಲ್ಲಿ, ಹೇಗೆ, ಯಾವಾಗ ಪ್ರದರ್ಶಿಸಬೇಕೆಂಬ ವಿವೇಚನೆ ಬೆಳೆಸಿಕೊಳ್ಳೋಣ.

(ಸಂಗ್ರಹ) -ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ