ಮೂಡಲ ಮನೆಯಾ ಮುತ್ತಿನ ನೀರಿನ

ಎರಕಾವ ಹೊಯ್ದಾ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

ಹೊಸವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ

ನೀ ಹೀಂಗೆ ನೋಡಬ್ಯಾಡ ನನ್ನ,ನೀ ಹೀಂಗ ನೋಡಿದರೆ ನನ್ನ

ತಿರುಗಿ ನಾ ಹ್ಯಾಂಗ ನೋಡಲಿ ನಿನ್ನ

ಮೇಲಿನ ಕವನದ ಸಾಲುಗಳ ಒಂದೊಂದು ಪದಗಳೂ ಮುತ್ತಿನ ಮಣಿಗಳು ಎನ್ನಬಹುದು. ಅದ್ಭುತ ಭಾವನೆಯ ಶರಧಿಯೇ ಸರಿ."ರಸವೇ ಜನನ ವಿರಸ ಮರಣ ಸಮರಸವೇ ಜೀವನ"ಎಂದವರು. ಸಾಕಷ್ಟು ನೋವನ್ನೇ ಉಂಡರೂ, ನೋವಿನಲ್ಲೂ ಸಂಭ್ರಮಿಸಿ, ಕವನ ಬರೆದವರು.

'ಅಂಬಿಕಾತನಯದತ್ತ' ಕಾವ್ಯನಾಮದಿಂದ ಸಾಹಿತ್ಯ ಕೃಷಿಯ ನಾನಾ ಮಜಲಿನಲ್ಲಿ ತನ್ನನ್ನು ತೊಡಗಿಸಿಕೊಂಡು, ಅಪ್ಪಟ ಕನ್ನಡಾಭಿಮಾನಿಯಾಗಿ, ನಾಕುತಂತಿ ಕವನ ಸಂಕಲನಕ್ಕೆ ಅತ್ಯುನ್ನತ 'ಜ್ಞಾನಪೀಠ' ಪ್ರಶಸ್ತಿ ಮುಡಿಗೇರಿಸಿಕೊಂಡ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ (ದ.ರಾ.ಬೇಂದ್ರೆ) ಕವನಗಳಿವು. "ಬೆಂದಾವ ಬೇಂದ್ರೆ ಆಗ್ತಾನ" ಕನ್ನಡದ ಗಾರುಡಿಗರ ಮನದಾಳದ ಮಾತಿದು. ಮಾತು, ಹರಟೆ, ಬದುಕೇ ಸಾಹಿತ್ಯಮಯ. 'ಇಳಿದು ಬಾ ತಾಯೇ' ಮರೆಯಲು ಸಾಧ್ಯವಿಲ್ಲ, ಅದ್ಭುತ. ಪಾತರಗಿತ್ತಿ ಪಕ್ಕ, ಕುಣಿಯೋಣ  ಬಾರಾ, 'ಅಜರಾಮರ ಸಾಲುಗಳು. ಜೀವಾತ್ಮ ಪರಮಾತ್ಮ ಒಂದೇ ಎನ್ನುವ ಭಾವ ಶ್ರೀಯುತರ ಹಲವು ಕವನದಲ್ಲಿ ಕಾಣಬಹುದು. ತಮ್ಮ ಸಶಕ್ತ ಸಾಹಿತ್ಯದ ಮೂಲಕ ಇಂದಿಗೂ ಜೀವಂತ ಜಂಗಮರಂತಿರುವ ಹಿರಿಯ ಸಾಹಿತ್ಯವರೇಣ್ಯರಿವರು. ಕರ್ನಾಟಕ ಕವಿಕುಲ ತಿಲಕ, ಗೌರವ ಡಾಕ್ಟರೇಟ್, ಭಾರತ ಸರಕಾರದ ಪದ್ಮಶ್ರೀ ಪ್ರಶಸ್ತಿ,ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಭಾಜನರಾದವರು. ತಮ್ಮ ಪ್ರತಿಭೆಯಿಂದಲೇ 'ವರಕವಿ'ಎನಿಸಿದವರು. ತಮ್ಮೆಲ್ಲ ರಚನೆಗಳಲ್ಲೂ ಪ್ರಕೃತಿ ವರ್ಣನೆ, ಬದುಕಿನ ಕಹಿ ಸತ್ಯಗಳು, ದೇಶಪ್ರೇಮ, ಒಲವು, ಸರಸ, ವಿರಸ, ಸಾಮಾಜಿಕ ಸ್ಥಿತಿಗತಿ,,ವಿದ್ಯೆ,ಹಣಗಳಿಕೆ,ಹಣದ ಮಹಿಮೆ ಹೀಗೆ ಹತ್ತು ಹಲವು ವಿಷಯಗಳನ್ನು ನೀಡಿದವರು.ನಾಟಕಕಾರರು  ಸಹ. ಕನ್ನಡ ಸಾರಸ್ವತ ಲೋಕದಲ್ಲಿ ಸಾಹಿತ್ಯದ ಮೂಲಕ ಸದಾ ಹಸಿರಾಗಿರುವ ಹಿರಿಯರು. ಲೇಖಕ,ನಾಟಕಕಾರ,ಕವಿ,ವಿಮರ್ಶಕರಾಗಿ ತಮ್ಮದೇ ಛಾಪನ್ನು ಮೂಡಿಸಿ ಮರೆಯಾದ, ಕನ್ನಡಮ್ಮನ ಮಡಿಲ ಮಗ, ಶಬ್ಧಗಾರುಡಿಗ ನಮ್ಮೆಲ್ಲರ ಹೆಮ್ಮೆಯ ಸಾಹಿತಿ ದ.ರಾ.ಬೇಂದ್ರೆಯವರಿಗೆ ನಮನ.

(ಸಂಗ್ರಹ) -ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ