ಪ್ರಕೃತಿಯ ವಿಶೇಷ ಕೊಡುಗೆಯಿದು. ಭಾಷೆಯ ಸಂವಹನ ಮಾತಿನ ಮೂಲಕ,ಮನುಜರಿಗೆ ದೇವನಿತ್ತ ವರ. ಪ್ರಾಣಿಗಳೂ ನಾವಾಡಿದ ಮಾತನ್ನು ಅರ್ಥೈಸಿ ಪ್ರತಿಕ್ರಿಯೆ ನೀಡುವುದಿದೆ. 'ಮಾತೇ ಮಾಣಿಕ್ಯ ಸರ್ವಜ್ಞರ ವಚನ. ಮಾತೇ ಮೃತ್ಯು, ಮಾತೇ ದ್ವೇಷಕ್ಕೆ, ಜಗಳಕ್ಕೆ, ಮನಸ್ಸು ಮುರಿಯಲು, ಒಡೆದ ಮನಸ್ಸು ಒಂದಾಗಲು ಕಾರಣವೆನ್ನಬಹುದು. ನಾಲಿಗೆಯ ಹಿಡಿತ ಆಡುವವರ ಕೈಯಲ್ಲಿರಬೇಕು. ಕೆಲವರ ಮುಖ ಗಂಟಿಕ್ಕಿದಂತೆ, ಮಾತೇ ಇಲ್ಲ. "ನಾ..ದಾತವ್ಯಂ ನ ದಾತವ್ಯಂ ವಚನೇಕಾ ದರಿದ್ರತಾ"  ಎನ್ನುವಂತೆ ಮಾತಿಗ್ಯಾಕೆ ದರಿದ್ರ? ಅದಕ್ಕೇನು ಹಣ ಕೊಡಬೇಕೇ? ಒಳ್ಳೆಯ ಮಾತು ಮುಖ್ಯ. ಮಾತನಾಡಿದರೆ ಬೆಲೆಬಾಳುವ ಮುತ್ತು ಉದುರುವ ಹಾಗೆ ಬಿಗುಮಾನದಿಂದ ಇರುವವರೂ ಇದ್ದಾರೆ. ಸಂಬಂಧಗಳನ್ನು ಗಟ್ಟಿಗೊಳಿಸಲು, ಬೆಸೆಯಲು ಮಾತು ಬೇಕು.

"ಯಾಂ ಋಷಯೋ ಮಂತ್ರಕೃತೋ ಮನೀಷಿಣ: ಅನ್ವೈಚ್ಛನ್ ದೇವಾ: ಯಜಾಮಹೇ...." ಎನ್ನುವ ಶ್ಲೋಕವೊಂದು ಯಜುರ್ವೇದದ ಮಂತ್ರವೊಂದರಲ್ಲಿ ಉಲ್ಲೇಖವಿದೆ. ದೇವಾನುದೇವತೆಗಳು, ಋಷಿಮುನಿಗಳು ಹಲವು ಕಾಲ ಕಠಿಣ ತಪಸ್ಸನ್ನು ಗೈದು ಭಾಷೆಯನ್ನು ಕಂಡುಕೊಂಡವರಂತೆ.

ಕರಾವಳಿಯ ಗಂಡುಕಲೆ ಯಕ್ಷಗಾನದ ವೇದಿಕೆಗಳು ಉತ್ತಮ ಮಾತಿನ ಆಡೊಂಬಲವೇ ಸರಿ. ತಾಳಮದ್ದಳೆ ಕೂಟದಲಿ ಮಾತೇ ಮುಖ್ಯ. ಹಲವಾರು ಬಂಧು ಬಳಗದ ಕೆಲವೊಂದು ಮನೆಗಳಲ್ಲಿ ವಿವಾಹ ಸಂಬಂಧಗಳು ಪರಸ್ಪರ ದೂರವಾಣಿ (ಮೊಬೈಲ್) ಮಾತುಗಳಿಂದಾಗಿ ಮುರಿದು ಬಿದ್ದದ್ದೂ ಇದೆ. ಯೋಚಿಸಿ, ಯಾರಿಗೂ ನೋವಾಗದಂತೆ, ತೊಂದರೆಯಾಗದಂತೆ ಮಾತನ್ನು ಆಡುವುದೊಳ್ಳೆಯದು. ಮಾತಿಗೂ ತೂಕವಿರಲಿ. ಅತಿಭಾರವಾಗುವುದು ಬೇಡ. ಸಭೆ ಸಮಾರಂಭಗಳಿಗೆ ಕರೆದಾಗ ವೇದಿಕೆಯಲ್ಲಿ ಸಂದರ್ಭ ನೋಡಿ ಮಾತಿರಬೇಕು. ಬಾಯಿಪಾಠ, ಬರೆದು ತಂದದ್ದು ಅಷ್ಟು ಪರಿಣಾಮಕಾರಿಯಾಗದು. ಮಾತು ಮನದಾಳದಿಂದ ಬರಬೇಕಂತೆ, ಶಬ್ದಗಳ ಜೋಡಣೆ, ಪದಗಳು, ಸಾಲುಗಳು ಮುತ್ತಿನ ಮಣಿಯಂತಿದ್ದರೆ ಚಂದ. ಕಷ್ಟದಲ್ಲಿ, ಕಾಯಿಲೆಯಿಂದ ಇರುವಲ್ಲಿ, ಮನೆಯ ಸದಸ್ಯರನ್ನು ಕಳಕೊಂಡ ಸಂದರ್ಭ, ತಡೆಯಲಾರದ ನೋವಾದಲ್ಲಿ, ನಾಲ್ಕು ಸಾಂತ್ವನದ ಮಾತುಗಳು ಹೃದಯವನ್ನು ಹಗುರವಾಗಿಸಬಹುದು. ಬಾಯಿ ತಪ್ಪಿ ಬಿರುನುಡಿಗಳಾಡಿದಲ್ಲಿ ಕ್ಷಮೆ ಕೇಳುವ ಔದಾರ್ಯವಿರಲಿ. ಅಹಮಿಕೆ ಬೇಡ. 'ತುಂಬಿದ ಕೊಡ ತುಳುಕದಲ್ಲವೇ? ತೆನೆ ಬೆಳೆದು ನಿಂತಾಗ ಭಾರಕ್ಕೆ ಬಾಗುವುದಂತೆ, ಹಾಗೆಯೇ ನಾವು ಸಹ, ಬಾಗುವಲ್ಲಿ ಬಾಗೋಣ, ಬೀಗುವಲ್ಲಿ ಬೀಗೋಣ. ಅತ್ಯುತ್ತಮವಾದ ಮಾತುಗಳ ಸಾರವು ನಮಗೆ 'ಸುಭಾಷಿತ'ಗಳಲ್ಲಿ ಸಿಗುತ್ತದೆ. ಆದರೆ ಓದುವ ಮನಸ್ಸು ಬೇಕು. ಅಪಾರ ಜ್ಞಾನದ ಭಂಡಾರವದು. ನಮ್ಮ ಬದುಕಿಗೆ ಉರಿಯುವ ದೀಪದ ಜ್ಯೋತಿಯಂತೆಮ ಸಹಕರಿಸುವುದು. ವಿದ್ಯೆ, ಸರಳತೆ, ಸಜ್ಜನಿಕೆ, ಮಾಡುವ/ಮಾಡಬಾರದ ಕೆಲಸಕಾರ್ಯಗಳು ಅವುಗಳ ವಿಶ್ಲೇಷಣೆ, ದಾನಧರ್ಮ, ಗುರುಹಿರಿಯರಲ್ಲಿ ಪ್ರೀತಿ ಗೌರವ, ಅನುಕಂಪ, ಭಕ್ತಿ-ಶಕ್ತಿ-ಯುಕ್ತಿಗಳ ಮಜಲು, ವೈರಾಗ್ಯ,ಹೇಗಿರಬೇಕು? ಹೇಗಿರಬಾರದೆನ್ನುವ ಸರಳ ಸಾಲುಗಳು, ಮಾಹಿತಿ, ಮೆದುಳಿಗೆ ಮೇವು ಎಲ್ಲವನ್ನೂ ಸುಭಾಷಿತ ಶ್ಲೋಕಗಳಲ್ಲಿ ನಾವು ಓದಿ ತಿಳಿಯಬಹುದು. ಮನುಕುಲಕ್ಕೆ ಮಾರ್ಗದರ್ಶಿಯಾದ ಸುಭಾಷಿತ ಸಂಗ್ರಹ ಪ್ರತಿ ಮನೆಯಲ್ಲೂ ಇರಲಿ, ಕೊಂಡು ಓದುವ ಹವ್ಯಾಸವಿರಲಿ. ಬಂಧುಗಳೇ, ಒಳ್ಳೆಯ ನಡೆನುಡಿ ನಮ್ಮನ್ನು ನಾವೇ ಅರಿಯುವ ಸಾಧನವೂ ಹೌದು. ಎಲ್ಲರೊಂದಿಗೂ ಉತ್ತಮ ಬಾಂಧವ್ಯದಲ್ಲಿರೋಣ.

ಮಾತಿನಿಂ ನಡೆನುಡಿಯು/ಮಾತಿನಿಂ ಹಗೆ ಕೊಲೆಯು/ಮಾತಿನಿಂ ಸರ್ವ ಸಂಪದವು,ಲೋಕಕ್ಕೆ/ಮಾತೆ ಮಾಣಿಕವು ಸರ್ವಜ್ಞ//

ಹೊಲಬನರಿಯದ ಮಾತು ತಲೆಬೇನೆಯಿದ್ದಂತೆ, ಆಡುವ ಮಾತು ಫಲಪಕ್ವವಾದಂತಿರಲಿ. ಸಮಯ ಸಂದರ್ಭವಿರಲಿ, ವಿವೇಚನೆಯಿಂದ ಕೂಡಿರಲಿ. .'ಮಾತು ಬೆಳ್ಳಿ ಮೌನ ಬಂಗಾರ' ನಿಜವಾಗಿಯೂ ಹೌದಲ್ವೇ? ಮಾತಿನ ಗಟ್ಟಿತನ ಬೇಕಾದಲ್ಲಿ ಬೇಕು. ಒಮ್ಮೊಮ್ಮೆ ಹೇಳುವುದಿದೆ "ಅವನು/ಳು ಎಷ್ಟೊಂದು ಮಾತಾಡ್ತಾರೆ,ಕಡಿವಾಣವೇ ಇಲ್ಲ" ಎಂಬುದಾಗಿ. ಆದರೆ ಅದೇ ಅವನು/ಳು ಉ‌ಸಿರು ಚೆಲ್ಲಿ ಮಲಗಿದಾಗ ನೋಡಲು ಹೋಗುತ್ತೇವಲ್ಲ, ಆಗ ಗ್ರಹಿಸಿ ಕಣ್ಣಂಚಲಿ ಕಂಬನಿ ಹೆಪ್ಪುಗಟ್ಟುತ್ತದೆ. ಮಾತೇ ಕೆಲವರಿಗೆ ಆಭರಣ. ವ್ಯಂಗ್ಯ, ಹೀಯಾಳಿಕೆ ಸಲ್ಲದು. 'ಮುಗುಳ್ನಗುವಿನ ಮಾತು ಜಗವನ್ನೇ ಗೆಲ್ಲಬಹುದು'. ಅರಿತು ಬಾಳೋಣ, ಬದುಕೋಣ, ವ್ಯವಹರಿಸೋಣ.

ಆಕರ:(ಸರ್ವಜ್ಞ ತ್ರಿಪದಿಗಳು)

(ಸಂಗ್ರಹ) -ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ