ಹೆಣ್ಣು, ಹೊನ್ನು, ಮಣ್ಣು ಮಾಯೆ ಎಂಬ ಈ ಮೂರರಲ್ಲಿ ಯಾವುದು ಮೇಲೆಂದರೆ ಉತ್ತರ ಹೇಳಲು ಸ್ವಲ್ಪ ಕಷ್ಟವೇ ಸರಿ. ಪುರಾಣ, ಇತಿಹಾಸ, ದೇವರುಗಳು ಅರಸರ ಕಾಲದಿಂದಲೂ ಓದುವಾಗ ಅರಿವಿಗೆ ಬರುವುದು ಹೆಣ್ಣು, ಮಣ್ಣಿಗಾಗಿಯೇ ಅನೇಕ ಹೋರಾಟಗಳು. ಆಕೆಯ ಸೌಂದರ್ಯವೇ ಆಕೆಗೆ ಸಾವಾಗಿ ಕಾಡಿತೋ ಏನೋ ಅನಿಸುತ್ತದೆ. ಒಂದು ಹಣೆಬರಹ, ಇನ್ನೊಂದು ಅತಿಯಾದ ಮೋಹದ ಮಾಯೆ. ಇಂದ್ರಿಯ ನಿಗ್ರಹದ ಕೊರತೆ, ಮತ್ತಷ್ಟೂ ಗಳಿಸಬೇಕೆಂಬಾಸೆ. ಇತ್ತೀಚೆಗಂತೂ ಪರಸ್ಪರ ಉಸಿರು ನಿಲ್ಲಿಸಲೂ ಹೇಸದ ಮಟ್ಟಿಗೆ ಬಂದು ನಿಂತಿದೆ. ಆ ಭಗವಂತನೇ ಬುದ್ಧಿ ಕೊಡಬೇಕಷ್ಟೆ. 'ಐಶ್ವರ್ಯ, ಹೆಣ್ಣು, ಆಹಾರ ಅನುಭವಿಸಿ ತೃಪ್ತರಾದವರಿಲ್ಲವಂತೆ ಈ ಜಗದಿ, ಹಾಗಾದವರೆಲ್ಲ ಮಸಣ ಸೇರುವುದೇ ನಿಶ್ಚಿತ, ವರ್ತಮಾನ ಭವಿಷ್ಯತ್ತಿನಲ್ಲೂ ಈ ಮಾಯೆಯೆಂಬ ಕರಿಮೋಡ ಮುಸುಕಿ ಚಿತೆಯೇರುವರು 'ಶ್ರೇಷ್ಠ ಚಾಣಾಕ್ಷ ಚಾಣಕ್ಯ ಒಂದೆಡೆ ಬರೆದ ಉಲ್ಲೇಖದ ನುಡಿಗಳಿವು. ಹೌದಲ್ವೇ? ನಾವು ಈ ವರ್ತಮಾನದಲ್ಲಿ ಇಂತಹ ವಾರ್ತೆಯನ್ನು ಓದುವುದು, ಕೇಳುವುದು ಇದೆ. ಕೆಲವೊಂದು ಸಲ ನಮ್ಮ ಪರಿಸರದಲ್ಲಿ ಕಣ್ಣಿಗೆ ಬೀಳ್ತದೆ. ಅಂತರ್ಜಾಲ ನೋಡಲು ಹೋದರೆ ದಿನನಿತ್ಯ ಇದೇ ಸುದ್ಧಿಗಳು. ದಯವಿಟ್ಟು ಸಮಾಜದಲ್ಲಿ ಉತ್ತಮರ ಸಹವಾಸ, ಗೆಳೆತನ ಮಾಡಿ, ತೃಪ್ತಿಯಿಂದ ಇರಿ. ವೇದಿಕೆ ಸಿಗುತ್ತದೆ, ಹೆಸರು ಪ್ರಶಸ್ತಿ ಸಿಗುತ್ತದೆ ಎಂದು ಭಾವಿಸಿ ಸರಿಯಾಗಿ ವಿಮರ್ಶಿಸದೆ ಯಾರ ಸ್ನೇಹವೂ ಬೇಡ. ಪ್ರಸಿದ್ಧಿಯಾದಷ್ಟೇ ಬೇಗ ನೆಲಕಚ್ಚಬಹುದು. ಆಗ ಕೈ ಕೈ ಹಿಸುಕಿದರೆ ಪ್ರಯೋಜನವಿಲ್ಲ. ಅತಿಯಾದ ಆಸೆ, ಆಕಾಂಕ್ಷೆಗಳಿಗೆ ದೃಢತೆ ಎಂಬುದಿಲ್ಲ, ಅದು 'ದೂರದ ಬೆಟ್ಟ ನುಣ್ಣಗೆ ಕಂಡಂತೆ'.ದುರ್ನಡತೆ, ಕುಟಿಲತೆ, ಕೆಟ್ಟ ದೃಷ್ಟಿ, ಕಳ್ಳ ಖದೀಮರ ಬಲೆಗೆ ಬಿದ್ದರೆ ಜೇಡರ ಬಲೆಯೊಳಗೆ ಸಿಲುಕಿದಂತೆ ಒದ್ದಾಟ, ಗುದ್ದಾಟ ನಡೆಸಿ ಉಸಿರನ್ನೇ ಚೆಲ್ಲ ಬೇಕಾಗಬಹುದು. ಮೂರ್ಖರ ಸಂಗ ಬೇಡ. ಬೇಗನೆ ಹೆಸರು ಗಳಿಸಬೇಕೆಂಬ ಆತುರವೂ ಬೇಡ. 'ಹಾಗಿದೆ, ಹೀಗಿದೆಯೆಂದು ಪ್ರತಿನಿತ್ಯ ಅಂತರ್ಜಾಲದಲ್ಲಿ ಭಾವಚಿತ್ರ ಹಾಕುವವರ ಬಗ್ಗೆ ಎಚ್ಚರವಿರಲಿ. 'ಹುಲ್ಲು ಹಗುರವಾಗಿದೆಯೆಂದು ತಲೆಮೇಲೆ ಹೊತ್ತುಕೊಂಡು ಮೆರೆಯಲಾಗದು, ಅದರ ಸ್ಥಾನ ನಮಗೆ ಗೊತ್ತಿರಬೇಕು.ತಿಳಿದೂ ತಿಳಿದೂ ರಾತ್ರಿ ಕಂಡ ಬಾವಿಗೆ ಹಗಲು ಹಾರಬಾರದು. ಸಿಂಹದ ಗುಹೆಯೊಳಗೆ ಹೊಕ್ಕರೆ ಕಥೆ ಏನಾಗಬಹುದೆಂಬ ಕಲ್ಪನೆ ಬೇಕು. ಕ್ಷಣಿಕ ಸುಖಕ್ಕೆ ಬಲಿಯಾಗದಿರಿ. ಭಗವಂತನ ಕೊಡುಗೆ ಈ ಮನುಷ್ಯ ಜನ್ಮ.ಅವನೇ ಕರೆಸಿಕೊಳ್ಳಬೇಕು, ಅಷ್ಟರವರೆಗೆ ಜೀವ, ಜೀವನ ಎರಡೂ ಅಮೂಲ್ಯವಾದ್ದು. ವಿಷಯಾಸಕ್ತರಾಗದೆ ಬದುಕೋಣ. ವಾಸ್ತವತೆಯನ್ನು ಅರಿತು ಮುಂದಡಿಯಿಡೋಣ.'ಮುತ್ತುಗದ ಹೂವು ಎಂದೂ ಸಂಪಿಗೆಯಾಗಲು ಸಾಧ್ಯವಿಲ್ಲ. ಈ ವ್ಯವಸ್ಥೆಗಳೆಲ್ಲ ಎಲ್ಲಿಗೆ ಹೋಗಿ ತಲುಪಬಹುದೆಂಬ ಚಿಂತೆಯಲ್ಲಿ ಕಾಲಹರಣ ಮಾಡದೆ, ಬಂಧುಗಳೇ,ಗುರು ಹಿರಿಯರೇ ತಮ್ಮ ಮನೆಯ ಮಕ್ಕಳ ಬಗ್ಗೆ ನಿಗಾ ವಹಿಸಿ, ಜಾಗೃತಿ ಮೂಡಿಸಿ.ಇಲ್ಲದಿದ್ದಲ್ಲಿ ಇರುವ ಒಂದೆರಡು ಸಂತಾನಗಳೂ ಇಲ್ಲದಾಗಿ, ವಂಶವೇ ಅಳಿಸಿಹೋಗಬಹುದು.

(ಸಂಗ್ರಹ) -ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ