ಇನ್ನೊಬ್ಬರನ್ನು ತುಳಿದೇ ಮೇಲೆ ಬರುವೆನೆಂದುಕೊಂಡರೆ ಅದರಷ್ಟು ಮೂರ್ಖತನ ಬೇರೊಂದಿಲ್ಲ. ತುಳಿಯಲು ನಾವ್ಯಾರು? ಮೇಲೊಬ್ಬನಿಹನಲ್ಲ? ತುಳಿಯುವುದಾದರೆ ಅವನೇ ಸರಿ. ಏನೋ ತೊಂದರೆ ಕೊಡಬಹುದು, ಕಡೆಗೆ ಉಸಿರು ನಿಲ್ಲಿಸಲೂ ಬಹುದು. ಇದೆಲ್ಲ ನಕಾರಾತ್ಮಕ ಧೋರಣೆಗಳು, ಕೆಟ್ಟ ಮನೋ ಕಾಮನೆಗಳು. ಅದೇ ಜಾಗದಲ್ಲಿ ಸಕಾರಾತ್ಮಕ ಭಾವನೆಗಳು ಮೊಳೆಯಲಿ. ಯಾರು ಯಾರನ್ನೂ ಮುಗಿಸುವುದು ಬೇಡ, ಮೇಲೇಳದಂತೆ ಸಂಚು ನಡೆಸುವುದೂ ಬೇಡ. ಸೋಲಿಸೋಣ ಎನ್ನುವಲ್ಲಿ ಗೆಲ್ಲಿಸೋಣ ಬರಲಿ. ಅವರಿಗೆ ಸ್ಫೂರ್ತಿಯಾಗಿ ಬಾಳೋಣ. ಎಲ್ಲರನ್ನೂ ಸರಿಮಾಡಬಹುದೆಂಬ ಆಶಯ ಬೇಡ. ಆದರೆ ನಮ್ಮ ಮೇಲೆ ನಂಬಿಕೆ, ವಿಶ್ವಾಸವಿಟ್ಟವರಿಗೆ ದ್ರೋಹ ಮಾಡಬಾರದು. 'ನಂಬಿಕೆಯೇ ತಾಯಿ, ವಿಶ್ವಾಸವೇ ತಂದೆ' ಎಂದು ನಂಬಿದವರು ಭಾರತೀಯರು. ನಮ್ಮ ಮಣ್ಣಿನ ಸೊಗಡೇ ಹಾಗೆ. ಸಂಸ್ಕೃತಿ, ಸಂಸ್ಕಾರ ಬದುಕಿನ ನಂಬಿಕೆ ಎನ್ನುವ ಇಟ್ಟಿಗೆಗಳು. ಅದು ಗಟ್ಟಿಯಾಗಿರುವಂತೆ ನೋಡಿಕೊಳ್ಳುವುದೇ ಬಾಳಿನ ಧ್ಯೇಯವಾಗಿರಬೇಕು. ಕೆಲಸಕ್ಕೆ ಬಾರದ ವಿಷಯಗಳು, ಯಾವುದೇ ಒಳ್ಳೆಯ ಸಂದೇಶವಿಲ್ಲದ ಧಾರಾವಾಹಿಗಳ ದಾಸರಾಗದಿರೋಣ. ಒಂದು ದಿನವೆಂದರೆ ನಮ್ಮ ಆಯುಷ್ಯದಲ್ಲಿ ಒಂದು ದಿನ ಕಳೆದಂತೆ. ಬೇಕು ಎಂದರೂ ಮರಳಿ ಬಾರದು. ಇತರರ ಬದುಕು ಅವರ ಶ್ರಮ. ನಮ್ಮ ಬದುಕು ನಮ್ಮ ಶ್ರಮದ ಬೆವರ ಹನಿಗಳು. ನಮ್ಮನ್ನು ತಿರಸ್ಕರಿಸಿದವರ ಎದುರು ಚೆನ್ನಾಗಿ ಜೀವಿಸಿ ತೋರಿಸೋಣ. ನೋವಿತ್ತವರ ಮರೆಯೋಣ, ಪ್ರೀತಿ, ವಾತ್ಸಲ್ಯ ತೋರಿದವರ ಮರೆಯದಿರೋಣ. ಸಮಸ್ಯೆಯಿಲ್ಲದವರಾರಿಲ್ಲ. ಹೇಗೆ ಸುತ್ತಿಗೆ ಕಬ್ಬಿಣವನ್ನು ಬಡಿದು ಚಂದದ ಆಕಾರ ತರಬಹುದೋ, ಹಾಗೆಯೇ ಕನ್ನಡಿಗೆ ಬಡಿದರೆ ಹುಡಿಯಾಗಿ ಹಾಳಾಗಬಹುದೋ ಹಾಗೆಯೇ ಸಮಸ್ಯೆಗೆ ಪರಿಹಾರ ನಾವು ನಾವೇ ಕಂಡುಕೊಳ್ಳಬೇಕು. ಸುತ್ತಿಗೆ ಯಾವುದಕ್ಕೆ ಬಳಸಬಹುದೆಂಬ ಪ್ರಜ್ಞೆಯಿರಬೇಕು. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ನಮ್ಮದಾಗಿಸಿಕೊಂಡು ಬದುಕಿನ ಕ್ಷಣಗಳನ್ನು ಅನುಭವಿಸೋಣ.

(ಸಂಗ್ರಹ) -ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ