ಭೂಮಿಯ ಆಳದಲ್ಲಿ ಹುದುಗಿರುವ ಅಂತರ್ಜಲವನ್ನು ಪಡೆಯಲು ನಾವು ಬಹಳಷ್ಟು ಶ್ರಮ ಪಡುತ್ತೇವೆ. ಜೊತೆಗೆ ಸಮಯವೂ, ಹಣಕಾಸಿನ ವ್ಯವಸ್ಥೆಯೂ ಬೇಕು. ಒಮ್ಮೊಮ್ಮೆ ಎಷ್ಟು ಆಳ ಕೊರೆದರೂ, ನೀರಿನ ಒರತೆ ಕಾಣಿಸುವುದಿಲ್ಲ. ಬಾವಿಯಾದರೂ ಅಷ್ಟೆ. ಆಗ ಹೇಳುವ ಮಾತಿದೆ 'ಅದೃಷ್ಟವಿಲ್ಲ' ಎಂಬುದಾಗಿ. ನೀರು ಸಾಕಷ್ಟು ದೊರೆಯಲು ನಾಗದೇವನ ಅನುಗ್ರಹ ಬೇಕಂತೆ, ಹಿರಿಯರು ಹೇಳುವುದನ್ನು ಕೇಳಿದ್ದೇನೆ. ಒಂದು ಕಡೆ ಸಿಕ್ಕಿಲ್ಲವೆಂದಾದರೆ ಮತ್ತೊಂದೆಡೆ ನಮ್ಮ ಪ್ರಯತ್ನಬೇಕು. ಹತಾಶರಾಗಬಾರದು, ನಿರಾಶೆಗೊಳಗಾಗಬಾರದು. 'ಮರಳಿ ಯತ್ನವ ಮಾಡು' ಅಲ್ಲವೇ? ವಿದ್ಯಾರ್ಥಿ ಜೀವನ, ಕೆಲಸ, ಉದ್ಯೋಗ, ಮುಂದೆ ವಿವಾಹ, ಮಕ್ಕಳು ಎಲ್ಲಾ ವಿಷಯದಲ್ಲೂ ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವ ನಮ್ಮಲ್ಲಿರಲಿ. ನಮ್ಮ ಮನೆಯ ಮಕ್ಕಳ ಎದೆಯನ್ನು ಹಲವಾರು ಕಥೆಗಳು, ನಡೆದ ಘಟನೆಗಳನ್ನು ಸಮಾಧಾನದಲ್ಲಿ ತಿಳಿಸಿ ಹೇಳುವ ಕೆಲಸ ನಮ್ಮಿಂದಾಗಬೇಕಿದೆ. ಏನಾದರೂ ಒಂದು ಸಣ್ಣ ವಿಷಯಕ್ಕೂ ಸೋತರೆ, ಖಿನ್ನತೆ, ಹತಾಶೆ ಹತ್ತಿರ ಸುಳಿಯದ ರೀತಿಯಲ್ಲಿ ಬದುಕುವ ಕಲೆಯನ್ನು ಹೇಳಿಕೊಡಬೇಕು. ಮನೆ, ಶಾಲೆ ಎರಡೂ ಕಡೆಯಿಂದ ಈ ಕೆಲಸವಾಗಬೇಕು. ತಪ್ಪಿಗೆ ಲಘುವಾದ ಶಿಕ್ಷೆ ಜೊತೆಗಿರಲಿ, ಪ್ರೀತಿ, ಸಂಯಮ, ಪ್ರೇಮ, ವಾತ್ಸಲ್ಯ, ಬೆನ್ನು ತಟ್ಟುವಿಕೆಯು ಇಂದು ಅವಶ್ಯಕ. ಭಕ್ತ ಪ್ರಹ್ಲಾದ, ಧ್ರುವ, ನಚಿಕೇತ, ಹರಿಶ್ಚಂದ್ರ, ಶ್ರವಣಕುಮಾರ, ಮಾರ್ಕಾಂಡೇಯರ ಸಾಧನೆ, ತ್ಯಾಗದ ಪರಿಚಯವಾಗಬೇಕಾಗಿದೆ. ಮೊದಲೆಲ್ಲ ಶಾಲೆಗಳಲ್ಲಿ ಉಪಪಠ್ಯ ಪುಸ್ತಕವಿತ್ತು, ಹಾಡುಗಳಿತ್ತು, ಕಥೆಗಳಿತ್ತು. ಕಥನ ಕವನವಿತ್ತು. ಶ್ರೀರಾಮ,ಕೃಷ್ಣರ ಬಾಲಲೀಲೆಗಳು, ಕಥಾರೂಪದಲ್ಲಿತ್ತು .ಆದರ್ಶಮಾತೆಯರು,ರಾಷ್ಟ್ರೀಯ ನಾಯಕರು, ದೇಶಕ್ಕಾಗಿ ಹೋರಾಡಿ ಬಲಿದಾನವಾದವರ ಬಗ್ಗೆ ಪಠ್ಯಗಳಲ್ಲಿ ಮರಳಿ ಬರಲಿ. ಕೃಷಿಯೇ ಬದುಕಿನ ಮೂಲ. ನಾವೇನು ಸಾಧಿಸಿದರೂ ಉದರಕ್ಕೆ ಅನ್ನವೇ ಬೇಕಲ್ಲ? ಹಣವಿದೆ ಎಂದು ಹೊನ್ನು ತಿನ್ನಲಾಗದು. ಬದುಕ ಹಾದಿಯ ಜಂಜಾಟಗಳನ್ನು ಸುಲಭವಾಗಿ ಪರಿಹರಿಸಿ ಮುಂದೆ ಸಾಗುವ ಚಾಕಚಕ್ಯತೆ ನಮ್ಮಲ್ಲಿರಲಿ, ಏನೇ ಬಂದರೂ ಹಗುರವಾಗಿ ಸ್ವೀಕರಿಸೋಣ, ಚೆನ್ನಾಗಿರೋಣ.

(ಸಂಗ್ರಹ) -ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ