ದೇವರ ಅಸ್ತಿತ್ವ ತಿಳಿಯುವುದು ಹೇಗೆ? ಓರ್ವರ ಪ್ರಶ್ನೆ. ಕಣ್ಣೆದುರು ಕಲ್ಪನೆಯಿದೆ, ಆದರೆ ಕಾಣಿಸುವನೇ, ಇಲ್ಲ. 'ಮನಸ್ಸಿನಂತೆ ಮಾಧವ' ಅವರವರ ನಂಬಿಕೆ, ವಿಶ್ವಾಸವೆಂದೆ. ಹೆಜ್ಜೆ ಹೆಜ್ಜೆಗೂ ಪೊರೆಯುವಾತ, ವಿಧಿ ಲಿಖಿತದಂತೆ ಆಟ ಆಡಿಸುವಾತ, ಕೆಸರಿಗೆ ಬಿದ್ದಾಗ ಕೈಹಿಡಿಯುವಾತ (ಆಯುಷ್ಯವೇ ಇಲ್ಲದಿರೆ ಏನೂ ಮಾಡಲಾಗದು) ಭಗವಂತನಿರಬಹುದು. ಹರಿಯುವ ಪ್ರವಾಹದಲ್ಲಿ ಕೊಚ್ಚಿ ಹೋಗುವಾಗ ಜೀವನ್ಮರಣದ ಹೋರಾಟ ಮಾಡುವ ಬುದ್ಧಿ ಕೊಡುವವ ದೇವನೆಂಬ ಅರಿವಿದ್ದರೆ ಸಾಕು. ಯಾರೋ ಮೂರನೆಯ ವ್ಯಕ್ತಿ ಕಾಪಾಡುವವ ಬಂದರೆ ಅದು ಭಗವಂತನ ದಯೆಯೇ ಆಗಿದೆ. ನೀರಿನಲ್ಲಿ ಬಿದ್ದವನಿಗೆ ಈಜಾಡುವ ಶಕ್ತಿಯೇ ಭಗವಂತ. 'ಬೆಂಕಿಯಲ್ಲಿ ಬೀಳದಂತೆ ಜಾಗ್ರತೆ ವಹಿಸು' ಎಚ್ಚರಿಕೆ  ನೀಡುವವನೇ ನಿರಾಮಯನೂ, ನಿರಾಕಾರನೂ ಆದ ದೇವರು. ನಮ್ಮನ್ನು ಜಾಗ್ರತಾವಸ್ಥೆಗೆ ಕರೆದೊಯ್ಯುವ ಶಕ್ತಿ. ಕಲಿಕೆ ಎಂದರೆ ಸುಲಭದ ಮಾತಲ್ಲ. ಎಲ್ಲರೂ, ಎಲ್ಲವನ್ನೂ ಹೇಳಿದ್ದನ್ನು, ನೋಡಿದ್ದನ್ನು ಈ ಪುಟ್ಟ ಶಿರದೊಳಗೆ ತುಂಬಿಸಿಕೊಳ್ಳಬೇಕು. ಈ ಧಾರಣಾಶಕ್ತಿಯೇ ಕಣ್ಣಿಗೆ ಕಾಣಿಸದ ದಿವ್ಯ, ಭವ್ಯ, ತೇಜಸ್ಸಿನಿಂದ ಕೂಡಿದ ಅಗೋಚರ ಶಕ್ತಿ. ಅವನೇ ಭಗವಂತ, ಜಗತ್ತನ್ನು ಮುನ್ನಡೆಸುವವ. "ನೀನು ದೇವರನ್ನು ನೋಡಿರುವೆಯಾ"? ಕೇಳಿದವರೂ ಇದ್ದಾರೆ, ಹೌದು ಹೇಳಿದ್ದೇನೆ. ಅವರವರ ಹೃದಯದೊಳಗಡಗಿದ ಮನಸ್ಸಿಗೆ,ಅಂತ:ಶಕ್ತಿಗೆ ಕೇಳಿಕೊಳ್ಳಲಿ, ಆಗ ಉತ್ತರ ಸಿಗಬಹುದು. ತಾಯಿತಂದೆ, ಗುರು ಹಿರಿಯರು, ಕೈಗೊಂದು ಕಾಯಕ, ಪುಟ್ಟ ಮಕ್ಕಳು, ಪ್ರಕೃತಿಯ ಜೀವರಾಶಿಗಳಲ್ಲಿ ಭಗವಂತನನ್ನು ಯಾಕೆ ಕಾಣಬಾರದು? ಲೇವಡಿ, ಹಾಸ್ಯ, ವ್ಯಂಗ್ಯಗಳಿಗೆ ಕಿವಿಯಾನಿಸದೆ ಇದ್ದರೆ ಆರೋಗ್ಯವಾಗಿರಬಹುದು. ಎರಡು ದೋಣಿಯಲ್ಲಿ ಕಾಲಿಡಬಾರದು, ಭದ್ರವಾದ ಒಂದೇ ದೋಣಿ ಸಾಕೆಂಬ ನಿರ್ಧಾರ ನಮಗಿರಬೇಕು. ಸತ್ಯಮಿಳಿತವಾದ ವಿಶ್ವಾಸವಿದ್ದಲ್ಲಿ ಪರಮಾತ್ಮನಿದ್ದಾನೆ ಎನ್ನುವುದೇ ನಂಬಿಕೆ.

(ಸಂಗ್ರಹ) -ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ