ರಂಗು ರಂಗಿನ ಬಣ್ಣಗಳು ನೂರಾರು
ಕಂಗು ತೆಂಗಿನ ಸಹಕಾರ ಸಾವಿರಾರು
ಮನದೊಳಗಿನ ಆತ್ಮದ ಝೇಂಕಾರ
ಕನಸು ಮನಸಲು ಎಣಿಸದಿರೆ ಮತ್ಸರ
ಶಿಕ್ಷಿಸುವ ರಕ್ಷಿಸುವ ಹೊಣೆ ತಾಯಿ 'ಶ್ರೀದುರ್ಗೆ'ಯದು ನೋಡ
ಬಣ್ಣಗಳ ಹಬ್ಬ ಹೋಳಿಯಲಿ ಮಿಂದೆದ್ದು ಸಂತಸಪಟ್ಟವರು ಬಹಳಷ್ಟು ಮಂದಿ. ಮನಸ್ಸಿನ ಕೊಳೆ ಕಳೆದು ಹೊಳೆಯುವ ಹೊನ್ನ ಮೌಲ್ಯವಾಗಲಿ ಅಂತರಂಗದ ನಮ್ಮ ಭಾವನೆಗಳು. ಕಳೆಯುತ ಕಾರ್ಮೋಡ, ಪ್ರೀತಿ ವಾತ್ಸಲ್ಯದ ವರ್ಷಾಧಾರೆಯಾಗಲಿ. ಎಲ್ಲೆಲ್ಲೂ ಬೆಳಗಿ ಹಬ್ಬಲಿ ದಿನಕರನ ಕಿರಣದಂತೆ ಬೆಳಕು. ಮೌಢ್ಯದ ಚಾಪೆ ಸರಿಯಲಿ, ವಾಸ್ತವದ ವೃಕ್ಷದ ಬೇರಿಗೆ ಸತ್ಯ, ನ್ಯಾಯ, ಧರ್ಮದ ನೀರನ್ನು ಎರೆದು ಸಲಹೋಣ. ನಮ್ಮ ನಮ್ಮಲ್ಲೇ ಕಚ್ಚಾಟ ಬೇಡ, ಮೂರನೆಯವನ ಪ್ರವೇಶ ಆಗದಂತೆ ಜಾಗ್ರತೆ ವಹಿಸೋಣ. ನಾವು ನಾವು ಚೆನ್ನಾಗಿದ್ದಾಗ, ಬೇರೊಬ್ಬ ಅದನ್ನು ನೋಡಿ ಮಾತನಾಡಿಸಲು ಸಹ ಆಲೋಚನೆ ಮಾಡಬೇಕು. ಗುರು ಹಿರಿಯರ, ಹೆತ್ತವರ ಮಾರ್ಗದರ್ಶನದೊಂದಿಗೆ, ನಮ್ಮದೇ ಆದ ಸ್ವ ನಿಲುವುಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯವನ್ನು ನಮ್ಮ ಮಕ್ಕಳಲ್ಲಿ ಮೂಡಿಸೋಣ, ನೀಡುವ ಮಾಹಿತಿ ಮಕ್ಕಳ ಬಾಳಿಗೆ ಉರಿಯುವ ಜ್ಯೋತಿಯಾಗಲಿ. 'ಕನಸು ಕಾಣುವುದು ತಪ್ಪಲ್ಲ' ನೆರವೇರುವುದನ್ನು ಮಾತ್ರ ಕಾಣಬೇಕು. ಆಗಸಕೆ ಏಣಿ ಹಾಕಲು ಸಾಧ್ಯವೇ? ಆದರೆ ಒಳ್ಳೆಯ ಗುಣವೆನ್ನುವುದು ಆಗಸದೆತ್ತರ ಪಸರಿಸಬಹುದು. ಅದಕ್ಕೆ ದೃಢತೆ ಬೇಕು.ಕಲಿಯುವ ಹಂಬಲ ಸದಾ ಇರಬೇಕು. ಶುದ್ಧ, ಸ್ವಚ್ಛ, ಸುಂದರ ಮನಸ್ಸೇ ಎಲ್ಲದಕ್ಕೂ ಕಾರಣ, ಪ್ರೇರಣೆ. ಪ್ರತಿಯೋರ್ವರ ಮನಸ್ಸು ಪರಿಶುದ್ಧವಾಗಲೆಂದು ಆಶಿಸೋಣ.
(ಸಂಗ್ರಹ) -ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!