ನಚಿಕೇತ ಹೆಸರು ಕೇಳಿದರೆ ಸಾಕು, ಚಿಕ್ಕ ವಯಸ್ಸಿನಲ್ಲಿ ಅಪಾರ ಜ್ಞಾನವನ್ನು ತನ್ನದಾದ ದೃಢಮನಸ್ಸು, ಶ್ರದ್ಧೆ, ಕಲಿಯಬೇಕೆಂಬ ಹಂಬಲ, ಒಳ್ಳೆಯ-ಕೆಟ್ಟದರ ಬಗ್ಗೆ ನಿಜವಾದ ತುಲನೆ ಮಾಡಿ ಸ್ವೀಕರಿಸುವ ಗುಣ, ಆಧ್ಯಾತ್ಮ ತತ್ವಗಳ ಕುರಿತು ಸಮಗ್ರ ಅರಿವು ಮೂಡಿಸಿಕೊಂಡ ಓರ್ವ ಮೇಧಾವಿ ಬಾಲಕ. ಆತ್ಮ ವಿದ್ಯೆಯ ಪರಮ ರಹಸ್ಯಗಳ ಬಗ್ಗೆ ಯಮನಿಂದಲೇ ಕೇಳಿ ಉತ್ತರ ಪಡೆದವನಂತೆ. ಕಷ್ಟ- ಇಷ್ಟ ಎರಡೂ ಕಲಿಕಾಕಾಲದಲ್ಲಿರಬೇಕೆಂದು ಜಗತ್ತಿಗೆ ಸಾರಿದವನು. ಸಾವು ಬದುಕುಗಳ ನಡುವೆ ಒಂದು ರೀತಿಯ ಹೋರಾಟವಿದೆ ಎಂದವನು. ಆ ಹೋರಾಟದಲ್ಲಿ ಏನನ್ನಾದರೂ ಗಳಿಸಿ, ಉಳಿಸಿ ಹೋಗಬೇಕೆಂದ ಜ್ಞಾನಿಯಾತ. ಇಂದಿನ ಈ ಆಕರ್ಷಣೆಯ ಸಮಯದಲ್ಲಿ, ತಂತ್ರ ಜ್ಞಾನದ ಅಳವಡಿಕೆಯಲ್ಲಿ ಶಾಲೆಗೆ ಹೋಗುವ ಮಕ್ಕಳ ಮನಸ್ಸನ್ನು ಹಿಡಿದಿಡಲು ಹೆತ್ತವರು ಹರಸಾಹಸ ಪಡಬೇಕಾಗಿದೆ. ಸ್ವತಃ ತಾವೇ ತಮ್ಮ ಇಷ್ಟಗಳಿಗೆ ಕಡಿವಾಣ ಹಾಕಬೇಕಿದೆ. 'ಒಂದನ್ನು ಪಡೆಯಲು ಇನ್ನೊಂದನ್ನು ತ್ಯಾಗ ಮಾಡಬೇಕಂತೆ' ಈ ಮಾತು ಅಕ್ಷರಶಃ ಸತ್ಯ. ನಮ್ಮ ಬೇಕುಗಳನ್ನು ಸ್ವಲ್ಪ ಬದಿಗೆ ಸರಿಸೋಣವೇ? ಕೋಪ, ಹಾರಾಟ-ಚೀರಾಟ, ಸಿಟ್ಟು, ಬೈಗುಳ, ಹಂಗಿಸುವಿಕೆ ಸಲ್ಲದು. ಸಮಾಧಾನದಿಂದ ಕೂರಿಸಿ ಮಾತನಾಡುವುದೇ ಲೇಸು. ತಾಳ್ಮೆಯೆನುವ ಅಸ್ತ್ರ ಹಿರಿಯರಾಗಿರಬೇಕು. ತಾಳ್ಮೆ ಕೆಟ್ಟರೆ ಮನೆಯ ಸಂಬಂಧಗಳ ತಾಳ ತಪ್ಪಿದಂತೆ. 'ತಾಳಿದವನು ಬಾಳಿಯಾನು' ನಮಗೆ ಜೀವನ, ಬದುಕು ಮುಖ್ಯ. ಹೋದರೆ ಹೋಯಿತು ಅಲ್ಲವೇ? ಹೋದವರು ಈಗ ನಮ್ಮೊಂದಿಗಿಲ್ಲವೆಂಬುದು ತಿಳಿದಿರಲಿ. ಇರುವಷ್ಟು ದಿನ ನಗುನಗುತ ಇರೋಣ. ಎಲ್ಲವೂ ನಶ್ವರ, ಗುಣ ಮಾತ್ರ ಸ್ಥಿರ. ನಚಿಕೇತನ ಗುಣಗಳನ್ನು ಕಲಿಕಾ ಸಮಯದಲ್ಲಿ ನಮ್ಮ ಮಕ್ಕಳೂ ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸೋಣವೇ?

(ಸಂಗ್ರಹ) ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ