'ಅಕ್ಷರವ ಕಲಿತವನಿಗೆ ಮೋಸವೆಂಬುದಿಲ್ಲವಂತೆ' ಯಾರು ಹೇಳಿದರೋ ಈ ಮಾತು ನಾನರಿಯೆ. ನಮ್ಮ ತಾಯಿಯವರು ಆಗಾಗ ಹೇಳುತ್ತಿದ್ದರು. ಆದರೆ ಕಲಿತವರೇ ಮೋಸ, ವಂಚನೆಗೆ ಒಳಗಾಗುವುದು ಬಹಳಷ್ಟು ಇದೆ. ಕಲಿತದ್ದನ್ನು ಸರಿಯಾದ ಸಂದರ್ಭದಲ್ಲಿ ಬಳಸದವನು ಮೋಸಕ್ಕೆ ತುತ್ತಾಗಬಹುದು ಅಥವಾ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಆಗಲೂಬಹುದು. ಯೋಚನೆ ಕಡಿಮೆಯಾಗಿ ಆಗುವ ಸಾಧ್ಯತೆಯಿದೆ. ಸಂಪೂರ್ಣ ಭರವಸೆ ವಿಶ್ವಾಸ, ನಂಬಿಕೆಯಿಟ್ಟು ಮೋಸ ಹೋಗುವುದೂ ಇದೆ. ನಮ್ಮ ಪರಿಚಯದವರೋರ್ವರು, ಹತ್ತಿರದವರು ಅನಿಸಿಕೊಂಡ ದೊಡ್ಡ ಮನುಷ್ಯ ತಂದೆಯವರು ಕಷ್ಟದಿಂದ ಗಳಿಸಿದ ಸಕಲ ಆಸ್ತಿ,ತಾಯಿಯವರ ಚಿನ್ನಾಭರಣಗಳನ್ನೆಲ್ಲ ಅಣ್ಣ ತಮ್ಮ, ಸಹೋದರಿಯರಿಗೆ ಸ್ವಲ್ಪವೂ ಹಂಚದೆ ತಾನು, ತನ್ನ ಪತ್ನಿಯ ಹೆಸರಿಗೆ ಮಾಡಿಸಿಕೊಂಡಿದ್ದಾನೆ. 10 ಮಕ್ಕಳ ತಾಯಿಯೆನಿಸಿದ ಆ ಮಹಾಮಾತೆ ಜೀವಂತ ಇರುವಾಗಲೇ ಈ ಕೃತ್ಯ ಎಸಗಿದ್ದಾನೆ. ಸಂಸಾರಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಹಿರಿಯಣ್ಣ ತನ್ನ ಸಹೋದರನ ಈ ನಂಬಿಕೆ ದ್ರೋಹದ ಕೆಲಸದಿಂದ ಮನದೊಳಗೆ ಕೊರಗಿ ಈಗ ಈ ಪ್ರಪಂಚದಲ್ಲೇ ಇಲ್ಲ. ಯಾವುದಕ್ಕೂ ಹೇಸದವರು, ಸತ್ಯ, ನ್ಯಾಯ, ಧರ್ಮದ ವಿರುದ್ಧ ನಂಬಿಕೆ ದ್ರೋಹ ಎಸಗುವವರಿಗೆ ಗುರು ಹಿರಿಯರು ಬಿಡಿ, ಭಗವಂತನ ಹೆದರಿಕೆ ಸಹ ಇಲ್ಲ ಕಾಣುತ್ತದೆ. ಜೀವನ ಎಂದ ಮೇಲೆ ನ್ಯಾಯ ನೀತಿ ಇದೆಯಲ್ಲ? ಮುಂದೆ ತಮ್ಮ ಕಾಲಬುಡಕ್ಕೆ ಬರುವಾಗ ಕುಟುಂಬಕ್ಕೆಸಗಿದ ಅನ್ಯಾಯದ ಪರಿಣಾಮ ಅರಿವಾಗಲೂ ಬಹುದು.ಆದರೇನು ಪ್ರಯೋಜನ.ತಮ್ಮವರೆನಿಸಿದ ಎಷ್ಟೋ ಜನರನ್ನು ಕಳಕೊಂಡಾಗಿರುತ್ತದೆ.'ರೈಲು ಹೋದ ಮೇಲೆ ಟಿಕೆಟ್ ತೆಗೆದಂತೆ, ಮನೆಗೆ ಬೆಂಕಿ ಬಿದ್ದ ಮೇಲೆ ನೀರಿಗಾಗಿ ಬಾವಿ ತೋಡಿದಂತೆ'. ಸಂಬಂಧಗಳೆಲ್ಲ ಹಾಳಾಗಿ ಹಳ್ಳ ಹಿಡಿದಾಗಿರುತ್ತದೆ. ಇತರರಿಗೆ ಮಾಡಿದ ಮೋಸ, ವಂಚನೆಯ ಸೌಧದ ಮೇಲೆ ಕುಳಿತವನಿಗೆ ಅದು ಮುಳ್ಳಾಗಿ ಚುಚ್ಚಬಹುದು. ಜೀವನದ ಹಾದಿಯಲ್ಲಿ ಮೊದ ಮೊದಲು ಸೋತು ಅನಂತರ ಗೆಲುವಿನ ಮೆಟ್ಟಿಲನ್ನು ಹಂತ ಹಂತವಾಗಿ ಏರಬೇಕು. ಅದು ಸಾಧನೆ. ಮೊದಲು ಗೆದ್ದು ಬೀಗಿ, ಅನಂತರ ಸೋಲುಂಡರೆ ಏನು ಸಾಧಿಸಿದ ಹಾಗೆ ಆಯಿತು? ಸೋಲೇ ಗೆಲುವಿನ ಸೋಪಾನವಾಗಬೇಕು. ಇಂತಹ ಮೋಸ ವಂಚನೆಯ ಪ್ರಕರಣಗಳು ನಮ್ಮ ಸುತ್ತಮುತ್ತ ಅನೇಕ ಇದೆ. ಸೋತು ಗೆದ್ದದ್ದೂ ಇದೆ. 'ಅವಸರವೇ ಅಪಘಾತಕ್ಕೆ ಕಾರಣ' ಎಂಬ ಹಾಗೆ ಗಡಿಬಿಡಿ ಮಾಡದೆ, ಯೋಚಿಸಿ ಪಾದವೂರೋಣ, ಆಮೇಲೆ ತಲೆಯ ಮೇಲೆ ಕೈ ಹೊತ್ತರೆ ಏನೂ ಪ್ರಯೋಜನವಾಗದು. ಯಾರಿಗೂ ಮೋಸ ಮಾಡುವುದನ್ನು ಕನಸಿನಲ್ಲೂ ಗ್ರಹಿಸದಿರೋಣ. ಸಂಬಂಧ, ಬಾಂಧವ್ಯಗಳು ಸೌಹಾರ್ದಯುತವಾಗಿರಲಿ. 'ಏನಾದರೂ ಆಗು ಮೊದಲು ಮಾನವನಾಗು' ಈ ತತ್ವ ಇರಲಿ. ನೆಮ್ಮದಿಯ ಜೀವನ ಸುಖದ ಸೋಪಾನ ಅರಿಯೋಣ.

(ಸಂಗ್ರಹ) ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ