ನಾವು ಒಮ್ಮೊಮ್ಮೆ ಹೇಳುವುದುಂಟು "ಅವನು ಜಡಭರಿತ, ಏನೂ ಉಪಯೋಗವಿಲ್ಲದವ, ಸೋಮಾರಿ, ಮೈಬಗ್ಗಿಸಿ, ಬೆವರು ಹರಿಸಿ ದುಡಿಯಲಾರ. ಯಾರು ಯಾರ ಗಳಿಕೆಯಲ್ಲಿ ಜೀವನ ಮಾಡುವವ" ಎಂಬುದಾಗಿ. ಅವನ ಜಡತ್ವಕ್ಕೆ ಕಾರಣ ಅವನ ಸುತ್ತಮುತ್ತಲಿನವರೇ ಆಗಿರ್ತಾರೆ ಎನ್ನುವ ಸತ್ಯದ ಹಿಂದೆ ಹೋಗುವುದೇ ಇಲ್ಲ. ಚೈತನ್ಯ, ಜಡ ಎರಡಕ್ಕೂ ಕಾರಣ ಆ ಸೃಷ್ಟಿಕರ್ತನಾದ ಪರಬ್ರಹ್ಮನೇ. ಜಡವನ್ನು ಹೋಗಲಾಡಿಸುವಲ್ಲಿ ನಾವು ವಿಫಲರಾಗಿದ್ದೇವೆ. ಸರಿಯಾದ ಮಾರ್ಗದರ್ಶನ ನೀಡಿಲ್ಲ. ಪ್ರಾಮಾಣಿಕತೆಯಿಂದ ಮನಸ್ಸು ಮಾಡಿ, ಪ್ರೋತ್ಸಾಹ ನೀಡಿದ್ದರೆ ಆ ಸೋಮಾರಿಯಲ್ಲೂ ಸುಪ್ತವಾದ ಚೈತನ್ಯ ಶಕ್ತಿ ಪ್ರಕಟವಾಗಿ ಎಲ್ಲರಂತೆ ಇರುತಿತ್ತು, ಅವನೂ ಎಲ್ಲರಂತೆ ಇರುತ್ತಿದ್ದ. ಗುರುತಿಸುವ ಕಾರ್ಯ ನಮ್ಮಿಂದಾಗಬೇಕು. ಹೊಟ್ಟೆ ತುಂಬಿದವಗೆ ಮತ್ತೂ ಮತ್ತೂ ಅನ್ನವಿಕ್ಕಿದರೆ ಫಲವಿಲ್ಲ. ಯಾರಿಗೆ ಹಸಿವೆಯಿದೆಯೋ ಅವರನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಓರ್ವ ವಿಜ್ಞಾನಿಯಾದವನು ಬಾಹ್ಯವಾಗಿ ಅನೇಕಾನೇಕ ಪ್ರಯೋಗಗಳನ್ನು ನಡೆಸಿ ಒಂದು ಹೊಸದನ್ನು ಸಂಶೋಧನೆ ಮಾಡುವಂತೆ ಗುರುತಿಸಿ ಪ್ರೇರೇಪಿಸುವ ಕೆಲಸವಾಗಬೇಕು. ಅವನ ಒಳಮುಖದ ಹಿಂದಿನ ನೋವಿನ, ಬೇಸರದ ಅಥವಾ ಕುಟುಂಬ ಹಿನ್ನೆಲೆಯ ಸತ್ಯವನ್ನು ತಿಳಿದು ಮುಂದುವರಿದರೆ,ಆತ ಸಹ ಎಲ್ಲರಂತೆ ಮುಖ್ಯವಾಹಿನಿಗೆ ಬಂದು, ತನ್ನ ಕಾಲಮೇಲೆ ತಾನೇ ನಿಲ್ಲಬಹುದು. ಸ್ವಲ್ಪ ತ್ಯಾಗದ ಅವಶ್ಯಕತೆಯಿದೆ. ತಾಳ್ಮೆ ಬೇಕು. ಸತ್ಯದ ದಾರಿಯಲ್ಲಿ ಕಲ್ಲು ಮುಳ್ಳು, ಅಡೆತಡೆ ಹೆಚ್ಚಂತೆ. ಅಡೆ-ತಡೆ ಮೈಮೇಲಿನ ಕಜ್ಜಿಯಂತೆ,ಕೆರೆ(ತುರಿಸಿ)ದಷ್ಟುಜಾಸ್ತಿ. ಜಾಗ್ರತೆ ಬೇಕು.ದುರ್ಬಲತೆ, ಬಲಹೀನತೆಯಿದ್ದಲ್ಲಿ ಬೇಡದ ವಿಚಾರಗಳು ಬೇಗ ಪ್ರವೇಶವಾಗುವುದು ಸಹಜ. ಸಣ್ಣ ಮಕ್ಕಳಿಗೆ, ವಯಸ್ಸಾದವರಿಗೆ ಕಾಯಿಲೆಗಳು ಬೇಗ ದೇಹವನ್ನು ಆವರಿಸಿಕೊಳ್ಳುತ್ತದೆ. ರೋಗನಿರೋಧಕ ಶಕ್ತಿ ಕಡಿಮೆ ಅವರಿಗಿರುವುದೇ ಕಾರಣ. ದೌರ್ಬಲ್ಯ ಇದ್ದರೂ ತೋರ್ಪಡಿಸಬಾರದು. ವಿಷಯ ವಾಸನೆಗಳ ದೂರವಿಟ್ಟು, ಪ್ರಕೃತ ಬೇಕಾದ್ದನ್ನು ಆಯ್ಕೆ ಮಾಡಿಕೊಂಡು ದುರ್ಬಲರನ್ನು ಮೇಲೆತ್ತೋಣ.
(ಸಂಗ್ರಹ) ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!