ಇತ್ತೀಚೆಗೆ ಸ್ವಲ್ಪ ವರ್ಷಗಳ ಹಿಂದೆ ನಮ್ಮ ಬಂಧುಗಳ ಮಗಳಿಗೆ ವಿವಾಹ ನಿಶ್ಚಯವಾಗಿತ್ತು. ಇರುವ ಓರ್ವ ಮಗ ಉತ್ತಮ ಕೆಲಸವಿದೆಯೆಂದು ವಿದೇಶಕ್ಕೆ ಕಲಿಯಲೆಂದು ಹೋದವ, ಅಲ್ಲಿಯೇ ಮದುವೆಯಾಗಿ ಊರಿನತ್ತ ಬರುವುದನ್ನೇ ಬಿಟ್ಟಿದ್ದ. ಆ ಹೆತ್ತವರು ಎಷ್ಟೋ ಸಲ ನನ್ನ ಹತ್ತಿರ ಹೇಳಿದ್ದುಂಟು "ನಾವು ಮಗನಿಗೆ ಸರಿಯಾದ ಸಂಸ್ಕಾರ ನೀಡಿ ಬೆಳೆಸದ್ದನ್ನು ಈಗ ಉಣ್ಣುತ್ತಿದ್ದೇವೆ ಎಂದು. "ಬಾಲ್ಯದ ಆಗುಹೋಗುಗಳು, ವಿದ್ಯೆ, ಬುದ್ಧಿಯನ್ನು ತಿದ್ದುವಿಕೆ, ಸಹವಾಸ, ಮನೆಯ ಸದಸ್ಯರ ವರ್ತನೆ ಒಡನಾಟಗಳು ಜೀವನದ ಮೇಲೆ ಬಹಳ ಪರಿಣಾಮ ಬೀರುತ್ತದೆ. ಅಂಕಗಳು ನೂರಕ್ಕೆ ನೂರು ಸಿಗಬಹುದು, ಸಂಸ್ಕಾರದ ಕೊರತೆ ಬದುಕಿನುದ್ದಕ್ಕೂ ಬರುವುದು ಸಹಜ ಎಂದು ನನ್ನ ಮನಸ್ಸು ಹೇಳಿತು. ಆದರೂ ಅವರನ್ನು ಸಮಾಧಾನ ಪಡಿಸುತ್ತಿದ್ದೆ. ಒಬ್ಬಳೇ ಮಗಳೆಂದು ಬಹಳ ಸಂಭ್ರಮದಿಂದ ವಿವಾಹದ ತಯಾರಿಗಳನ್ನೆಲ್ಲ ನಡೆಸಿದ್ದರು. ಕಾರ್ಯಕ್ರಮದ ಕನಸು ಹೆತ್ತವರಿಗೆ ಇರುವುದು, ಸಾಧ್ಯವಾದಷ್ಟು ನೆರವೇರಿಸೋಣ ಎನ್ನುವ ಅಭಿಲಾಷೆ ಸಹಜ. ದೇವರೂ ಸಾಕಷ್ಟು ನೀಡಿದ್ದ, ಕಷ್ಟದ ದುಡಿಮೆಗಾರರು, ಅವಿಭಕ್ತ ಕುಟುಂಬವಾಗಿತ್ತು. ಇನ್ನೇನು ಮದುವೆಗೆ ನಾಲ್ಕು ದಿನವಿರುವಾಗ ವರನ ಕಡೆಯಿಂದ 'ನಕಾರ' ಬಂತು. ಯಾಕೆ ಎಂದು ವಿಚಾರಿಸಿದರೆ ಹುಡುಗಿ ಇಷ್ಟವಿಲ್ಲವಂತೆ, ಹಾಗಾದರೆ ಮೊದಲು ಕಣ್ಣಿರಲಿಲ್ಲವೇ? ಇಷ್ಟೆಲ್ಲ ತಯಾರಿ ನಡೆಸಲು ಶ್ರಮ ಮತ್ತು ಹಣ ಇದರ ಅಂದಾಜಿಲ್ಲವೇ? ದಾಕ್ಷಿಣ್ಯ ಎನ್ನುವುದು ಇಂದಿನ ಯುವ ಜನಾಂಗದವರ ಹತ್ತಿರ ಇಲ್ಲವೆನ್ನಬಹುದು. ಹೆತ್ತವರ ಮರ್ಯಾದೆ ಹೋಗುವುದರ ಅರಿವೇ ಅವರಿಗಿಲ್ಲ. ಅಂತೂ ವಿಷಯ ತಿಳಿವಾಗ ಮುರಿದು ಬಿದ್ದದ್ದೇ ಒಳ್ಳೆಯದಾಯಿತೆಂದು ತಿಳಿಯಿತು. ಹುಡುಗನಿಗೆ ಈಗಾಗಲೇ ನಿಶ್ಚಯವಾದ ಹೆಣ್ಣುಮಗಳು ಊರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳಂತೆ. ತಕ್ಕ ಶಾಸ್ತಿಯೂ ಆಯಿತು ಆತನಿಗೆ. ಅವಳೂ ಮದುವೆಯಾಗಿಲ್ಲ, ಬೇರೆ ಯಾರೂ ಹೆಣ್ಣು ಕೊಡಲಿಲ್ಲ. ನಾನು ಹೇಳಿದ್ದು ಒಂದೇ ಮಾತು ಆ ಹೆತ್ತವರಿಗೆ ಮತ್ತು ಹೆಣ್ಣುಮಗಳಿಗೆ 'ಓದಿಸಿ' ಎಂಬುದಾಗಿ. ಇದೀಗ ಆಕೆ ಊರಿನಲ್ಲಿ ಜನಾನುರಾಗಿ ವಕೀಲೆ. ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ, ಚೆನ್ನಾಗಿದ್ದಾಳೆ. ಸೋಲು ಬಂತೆಂದು ಕೂರುವುದಲ್ಲ, ಧೈರ್ಯದಿಂದ ಎದುರಿಸಬೇಕು. ಹೇಳುವವರು ನೂರೆಂಟು ಹೇಳಲಿ. ಒಳ್ಳೆಯದನ್ನು ಸ್ವೀಕರಿಸಿ, ಹಿಂದಿರುಗಿ ನೋಡದೆ ಮುಂದುವರಿಯುವುದನ್ನು ಕಲಿಯಬೇಕು. ಹತಾಶೆಯಿಂದ ಉಸಿರೇ ನಿಲ್ಲಿಸಬಾರದು,ಅಂತಹ ಕೆಟ್ಟ ಆಲೋಚನೆಗಳೇ ಬರಬಾರದು.

ಏನೋ ಒಂದು ಕಷ್ಟವಾಯಿತೆಂದು ಚಿಂತಿಸಿದರೆ ಫಲವಿಲ್ಲ.ತಕ್ಕ ಪರಿಹಾರ ಹುಡುಕಿ ಸರಿಪಡಿಸುವುದೇ ಜಾಣರ ಲಕ್ಷಣ. ಬರಿಯ ಪುಸ್ತಕದ ಬದನೆಕಾಯಿ ಸಾಲದು, ನೋಡಿ, ಕೇಳಿ, ಅನುಭವದ ಮೂಲಕ 'ಉತ್ತಮವ ಚಿತ್ತದೊಳ್ ಸಂಗ್ರಹಿಸಿದರೆ' ಸಕಾಲಕ್ಕೆ ಉಪಯೋಗವಾಗಬಹುದು.

ಮನಸಾ ಚಿಂತಿತಂ ಕಾರ್ಯಂ ವಚನಾ ನ ಪ್ರಕಾಶಯೇತ್ 

ಅನ್ಯ ಲಕ್ಷಿತ ಕಾರ್ಯಸ್ಯ ಯತಃ ಸಿದ್ಧಿಃ ನಜಾಯತೆ 

ಮನಸ್ಸಿನಲ್ಲಿ ಇರುವ ಚಿಂತೆಗಳನ್ನು ದೂರಮಾಡಿ, ಖಾಲಿಯಾದ ಜಾಗಕ್ಕೆ ಚಿಂತನೆಗಳನ್ನು ತರೋಣ. ಅದನ್ನು ಎಲ್ಲರಲ್ಲೂ ಹೇಳಿಕೊಂಡು ಬರುವ ಅಗತ್ಯವಿಲ್ಲ. ಒಳ್ಳೆಯ ಯೋಚನೆಗಳನ್ನು ಕಾರ್ಯರೂಪಕ್ಕೆ ತಂದಾಗ ಮನದ ಗೊಂದಲ ನಿವಾರಣೆಯಾಗಬಹುದು. ಆರೋಗ್ಯವೂ ಚೆನ್ನಾಗಿರಬಹುದು. ಬಾಳ ಹಾದಿಯಲ್ಲಿ ಕ್ಷೇಮವೂ, ಸೌಖ್ಯವೂ ಸಿಗಬಹುದು.

(ಶ್ಲೋಕ:ಸರಳ ಸುಭಾಷಿತ)

(ಸಂಗ್ರಹ) ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ