ಹಣವೇ ನಿನ್ನಯ ಗುಣವೆಷ್ಟು ಹಿರಿದು! ದಾಸರ ನುಡಿ, ಒಂದು ರೀತಿಯ ವ್ಯಂಗ್ಯವೂ ಹೌದು. ಹಣದಿಂದ ಎಲ್ಲವನ್ನೂ ಪಡೆಯಬಹುದೆಂಬ ತಪ್ಪು ಕಲ್ಪನೆಯಿದೆ. ಕಛೇರಿ ಕೆಲಸ ಹಣವಿದ್ದವರಿಗೆ ಬಹಳ ಬೇಗ ಆಗುವುದು. ಹಣವಿಲ್ಲದ ಬಡವ ಬಾಗಿಲ ಬಳಿಯೇ ಕುತ್ತಿಗೆ ಉದ್ದ ಮಾಡಿ, ತನ್ನ ಸರದಿಗಾಗಿ ನೋಡಿದರೂ ಗಮನಿಸುವವರಿಲ್ಲ. 'ಪಾಪಪ್ರಜ್ಞೆ 'ನಶಿಸಿ ವರ್ಷವೆಷ್ಟೋ ಸಂದಿತು. ಜೀವನಕ್ಕೆ ಹಣ ಬೇಕು. ಸಕಾಲದಲ್ಲಿ ಸಹಕರಿಸದವಗೆ ಹಣ ಎಷ್ಟಿದ್ದರೇನು?(ಹಳ್ಳಿಯಲ್ಲಿ ಒಂದು ಮಾತಿದೆ,ಕಷ್ಟಕ್ಕೆ ನೆರವಾಗದ ಹಣ ಶ್ವಾನದ ಮೈಮೇಲಿನ ಜಿಗಣೆಗೆ ಸಮವಂತೆ) ಸತ್ಪಾತ್ರರ ಕಷ್ಟಕ್ಕೆ ಮರುಗುವ,ಸಹಕರಿಸುವ ಗುಣವಿರಲಿ.ಪಡಕೊಂಡ ಹಣವನ್ನು ತಪ್ಪದೇ ಹಿಂದಿರುಗಿಸುವ ಬುದ್ಧಿಯಿರಲಿ.ಕೊಡುವವರು 'ಬೇಡ'ಎಂದರೆ ಸರಿ. ದೊಡ್ಡ ಮೊತ್ತವಾದರೆ. ಕೊಡುವವರೂ ಏನೋ ಒಂದು ಮಾಡಿ ಒಗ್ಗೂಡಿಸಿ ಕೊಟ್ಟಿರುತ್ತಾರೆಂಬ ಪ್ರಜ್ಞೆಯಿರಬೇಕು. ಇತ್ತೀಚೆಗೆ 'ಹಣ ಮತ್ತು ಗುಣ'ವನ್ನು ಒಂದೇ ತಕ್ಕಡಿಯಲ್ಲಿಟ್ಟರೆ ಹಣಕ್ಕೆ ತೂಕ ಹೆಚ್ಚು. "ಗುಣವೇನು ಅನ್ನ ಕೊಡುವುದೇ?" ಕೇಳುವವರೂ ಇದ್ದಾರೆ. ಯಾರು ಯಾರ ಉದರಕ್ಕೆ ಬಡಿದ ಹಣ 'ಪಾಪದ ಗಂಟು'. ಒಮ್ಮೆಗೆ ಸಂಪಾದಿಸಿದೆ ಎಂದು ಕಂಡರೂ ವಿಷಯ ಗೊತ್ತಾದಾಗ ತಲೆತಗ್ಗಿಸುವ ಹಾಗಾಗಬಹುದು. ಈಗಂತೂ ಮಾಧ್ಯಮಗಳಲ್ಲಿ ತಕ್ಷಣ ಪ್ರಸಾರ, ಪ್ರಚಾರ ಎರಡೂ ಆಗಿಬಿಡುತ್ತದೆ. ಬಹಳ ಬೇಗ ವಿಷಯ ಹಬ್ಬುತ್ತದೆ. ನಾವೆಲ್ಲ ಸಣ್ಣವರಿದ್ದಾಗ ಮನೆ ಮನೆಗಳಲ್ಲಿ ಅಥವಾ ನೆರೆಯವರನ್ನೆಲ್ಲ ಸೇರಿಸಿ ಶನಿವಾರ, ಭಾನುವಾರ ಸಂಜೆಯ ಹೊತ್ತು ರಾಮಾಯಣ, ಮಹಾಭಾರತ, ಭಾಗವತ ವಾಚನ ಮತ್ತು ವ್ಯಾಖ್ಯಾನ ಮಾಡಿಸುವ ಕ್ರಮವಿತ್ತು. ಹಲವಾರು ಉಪಕಥೆಗಳನ್ನು ಆಯಾಯ ಸಂದರ್ಭಕ್ಕೆ ಸೇರಿಸಿ ಹೇಳುತ್ತಿದ್ದರು. ಸಂಪಾದಿಸಿದ್ದರಲ್ಲಿ ಸ್ವಲ್ಪ ಇಲ್ಲದವರಿಗೆ ಕೊಡಬೇಕೆಂದು ಹೇಳಿದ ಮಾತು ಇಂದಿಗೂ ಜ್ಞಾಪಕವಿದೆ. ಮಗ್ಗಿ, ವಾರದ ದಿನಗಳು, ನಕ್ಷತ್ರಗಳು, ತಿಂಗಳುಗಳು, ಸಂವತ್ಸರಗಳು, ನಿತ್ಯಶ್ಲೋಕಗಳನ್ನು ನಿತ್ಯವೂ ಓದುತ್ತಿದ್ದೆವು. ಭಜನೆಯಿತ್ತು. ಇದರಿಂದ ಸಾತ್ವಿಕತೆ, ನೆನಪುಶಕ್ತಿ, ಕಲಿಯಬೇಕೆಂಬ ಹಂಬಲ, ಸರಾಗ ಓದಿಗೆ ಸಹಕಾರಿಯಾಗುತ್ತಿತ್ತು. ಈಗ ಇದೆಲ್ಲ ಅಪರೂಪ ಎನ್ನಬಹುದು. ಮನೆಯ ವಾತಾವರಣ ಮಗುವಿನ ಬುದ್ಧಿ ವಿಕಸನ, ಸ್ವಂತಿಕೆಗೆ ಪೂರಕವಾಗಿರುವಂತಿದ್ದರೆ ಮಾತ್ರ ಆ ಮಗು ಸಹ 'ಗುಣಗಳ ಗಣಿ' ಆಗಬಹುದು. ಹಣ ಗಳಿಕೆಯೊಂದಿಗೆ ಆರೋಗ್ಯವನ್ನೂ ಕಾಪಾಡಿಕೊಳ್ಳೋಣ.
(ಸಂಗ್ರಹ) ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!