'ಅಪರಂಜಿ' ಎಂದು ನಂಬಿದವರು 'ಕಾಗೆ ಬಂಗಾರ' ಎಂದು ಅರಿವಿಗೆ ಬಂದ ಮೇಲೆ ಅವರನ್ನು ನಂಬುವುದಾದರೂ ಹೇಗೆ? ಪ್ರತಿಯೋರ್ವರ ಬದುಕಿನಲ್ಲಿ ಒಂದಿಲ್ಲೊಂದು ಈ ರೀತಿಯ ಅನುಭವ ಇದ್ದೇ ಇರುತ್ತದೆ. ಮೊದಲೆಲ್ಲ ಕಷ್ಟವೋ ಸುಖವೋ ದಂಪತಿಗಳು ಪರಸ್ಪರ ಅನುಸರಿಸಿಕೊಂಡು ಹೋಗುತ್ತಿದ್ದರು, ನಾವೆಲ್ಲ ಈ ಗುಂಪಿನವರೇ. 'ಪತಿಯೇ ದೇವರೆ'ನುವುದಿತ್ತು. ತನ್ನವರನ್ನೆಲ್ಲ ತೊರೆದು ಪತಿಯ ಮನೆ ನನ್ನದೇ ಮನೆ, ಇವರೆಲ್ಲರ ಶ್ರೇಯಸ್ಸೇ ತನ್ನ ಜೀವನದ ಹಾದಿ ಎಂದು ಬಂದ ಹೆಣ್ಣುಮಗಳು ಕೈಹಿಡಿದವನು ಕುಡುಕನೋ, ಕುಂಟನೋ, ಹೊಡೆದು ಬಡಿದು ಉಪವಾಸ ಕೆಡಹಿದರೂ ತನ್ನ ಗಂಡ, ಮನೆ, ಮಕ್ಕಳನ್ನು ತೊರೆದು ಹೋಗುತ್ತಿರಲಿಲ್ಲ. ಕೆಲವು ಮನೆಗಳಲ್ಲಿ 'ಅತ್ತೆ' ಎನಿಸಿಕೊಂಡ ಹಿರಿಯರಿಂದ ಹಿಂಸೆ ಅನುಭವಿಸಿದ್ದನ್ನು ನಾನು ಮೊದಲು ಹೇಳುವುದು ಕೇಳಿದ್ದೇನೆ. ಅಂಗಳದ ಕಂಬಕ್ಕೆ ಸೊಸೆಯನ್ನು ಕಟ್ಟಿ ಹಾಕಿ ಗಂಡ, ಮೈದುನರು ಹತ್ತಿರ ಅತ್ತೆಯಾದವರೇ ನಿಂತು ಹೊಡೆಸಿದ್ದು ಸಹ ಉಂಟಂತೆ.(ಈಗ ಎಲ್ಲ ಉಲ್ಟಾ ಆಗಿದೆ) ಹಿರಿಯರು ಹೇಳುವುದನ್ನು ಕೇಳಿದ್ದೇನೆ.(ಇದು ಒಂದು ರೀತಿಯ ಕ್ರೌರ್ಯವೇ ಆಗಿದೆ) ಹಾಗಾಗಿ ಗುಜರಿ, ಹಳೆಯ ಕುರ್ಚಿ, ರಾಹು-ಕೇತು ಪದಗಳ ಪಟ್ಟಿ ಬಂದದ್ದೋ ಏನೋ. ಅಬ್ಬಾ! ಈಗ ಮಾತನಾಡುವುದು ಬಿಡಿ, ಕಣ್ಣು ಹೊಳಪಿದರೆ ಸಾಕು ಪರಸ್ಪರ ವಿಚ್ಛೇದನವೇ ಗತಿ, ಮಕ್ಕಳು, ಹೆತ್ತವರು, ಮನೆಯ ವೃದ್ಧರು ಬೀದಿ ಪಾಲಾದರೂ ಚಿಂತೆಯಿಲ್ಲ. ದಾಂಪತ್ಯಜೀವನದ ರೀತಿ-ನೀತಿಯಲಿ ಬದಲಾವಣೆ,ತೆರೆದ ಪುಸ್ತಕವಾಗಿ ಮತ್ತು ಆ ಸಂಬಂಧದ ಬಿರುಕು ನಾಲ್ಕು ಗೋಡೆಯ ಮಧ್ಯೆಯಿಂದ ಹೊರ ಬಂದು ಬಹಳ ವರುಷಗಳೇ ಸಂದಿತು. ಪತಿಯಾದವನಿಗೂ ಅಕ್ಕರೆ ಬೇಕು. ಪತ್ನಿಗೂ ಬೇಕು. ಗೊತ್ತಿಲ್ಲದ ವ್ಯವಹಾರಗಳು ದಾಂಪತ್ಯದ ಮೇಲೆ ಪರಿಣಾಮ ಬೀರುವುದು ಸಹಜ. ಆತ್ಮಾವಲೋಕನಕ್ಕೆ ಪುರುಸೊತ್ತಿಲ್ಲ. ಇತರರ ಮಾತುಗಳು ರುಚಿಸದು. ನಂಬಿಕೆ, ವಿಶ್ವಾಸಕ್ಕೆ ದ್ರೋಹವಾಗಿ ಒಮ್ಮೆ ಹೃದಯ ಕಲ್ಲಾದರೆ ಮತ್ತೆಂದೂ ಮೃದುವಾಗದು. ಮೃದುವಾಗಿಸಲು ಪ್ರಯತ್ನಿಸಿದರೂ 'ಒಡೆದ ಕನ್ನಡಿಯಂತೆ'. ಅಹಮಿನ ಪರದೆ ಸರಿಸಲು ಯಾರೂ ತಯಾರಿಲ್ಲ. ತನ್ನದೇ ಸರಿ ಎನ್ನುವ ವಾದ, ಅದನ್ನು ಬೆಂಬಲಿಸುವ ಹೆತ್ತವರನ್ನು ನೋಡುತ್ತಿದ್ದೇವೆ.(ಈಗಿರುವ ಒಂದೆರಡು ಮಕ್ಕಳೆಂಬ ವ್ಯಾಮೋಹ, ಕಳಕೊಂಡರೆ ಸಿಗರೆಂಬ ಯೋಚನೆಯೂ ಇರಬಹುದು) ಸ್ವಲ್ಪ ಸ್ವಾತಂತ್ರ್ಯವೂ ಹೆಚ್ಚಾಗಿ,ಆ ಜಾಗಕ್ಕೆ ಏನು ಮಾಡಿದರೂ ಕೇಳುವವರಿಲ್ಲ ಎನ್ನುವ ಭಾವನೆ ಪ್ರವೇಶಿಸಿದೆ.
ಬಂಧುಗಳೇ, ಇರುವುದೊಂದೇ ಜನುಮ, ಭಗವಂತನ ಕೃಪೆಯಿಂದ ಬಂದಿದ್ದೇವೆ, ವೈಯಕ್ತಿಕ ಮತ್ತು ಸಾಮಾಜಿಕ ಬದುಕನ್ನು ಆನಂದವಾಗಿಸುವುದು ನಮ್ಮ ನಮ್ಮ ಕೈಯಲ್ಲೇ ಇದೆ,ಅರಿತು ಬಾಳೋಣವೇ?
(ಸಂಗ್ರಹ) ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!