ದಾರಿ ಯಾವುದಯ್ಯಾ ವೈಕುಂಠಕೆ ದಾರಿ ತೋರಿಸಯ್ಯಾ 

ದಾರಿ ಯಾವುದಯ್ಯಾ ವೈಕುಂಠಕೆ ದಾರಿ ತೋರಿಸಯ್ಯಾ

ಆಧಾರ ಮೂರುತಿ ನಿನ್ನ ಪಾದ ಸೇರುವುದಕ್ಕೆ

ದಾರಿ ಯಾವುದಯ್ಯಾ ದಾರಿ ತೋರಿಸಯ್ಯಾ

ಎಂಥ ಅರ್ಥಗರ್ಭಿತ ದಾಸವಾಣಿಯನ್ನು ಸಾಹಿತ್ಯ ಲೋಕದ ದಾಸಶ್ರೇಷ್ಠರಾದ ಪುರಂದರದಾಸರು ನಮಗೆ ನೀಡಿದ್ದಾರೆ.

ದಾಸವಾಣಿಯನ್ನು  ಭಜನೆಯಲ್ಲಿ ಹಾಡುತ್ತೇವೆ. ಬಾಯಿಯಲ್ಲಿ ಅವಕಾಶ ಸಿಕ್ಕಾಗ ಹೇಳುತ್ತಿರುತ್ತೇವೆ. ಹಾಡಿದ ಮೇಲೆ ನಮ್ಮೆಲ್ಲ ವರ್ತನೆಯಲ್ಲಿ ಅರಿಷಡ್ವರ್ಗಗಳೇ ರಾರಾಜಿಸಿದರೆ ಹಾಡಿದ ಭಜನೆಗೆ, ಹೇಳಿದ್ದಕ್ಕೆಲ್ಲ ಅರ್ಥವಿದೆಯೇ? ಹೇಳುವುದು ಒಂದು ಮಾಡುವುದು ಇನ್ನೊಂದು ಆಗದೇ? ಪರಿಪೂರ್ಣರು ಆಗಲು ಕಷ್ಟವಿದೆ. ಆದರೆ ಅಲ್ಪಸ್ವಲ್ಪ ಬದಲಾವಣೆ ಜೀವನಶೈಲಿಯಲ್ಲಿ ಮಾಡಿಕೊಂಡರೆ ‘ವೈಕುಂಠದ ದಾರಿ' ತಾನಾಗಿ ಸಿಗಬಹುದೆಂಬ ನಂಬಿಕೆ. 'ನೀನು ವೈಕುಂಠ  ನೋಡಿರುವೆಯಾ?' ಎಂದು ಲೇವಡಿ ಮಾಡಿದವರೂ ಇದ್ದಾರೆ. "ಹೌದು, ದಿನನಿತ್ಯದ ವ್ಯವಹಾರ, ಕೆಲಸಕಾರ್ಯಗಳಲ್ಲಿ, ಮತ್ತೆ ಯಕ್ಷಗಾನದ ವೇದಿಕೆಯಲ್ಲಿ ಸ್ವತ: "ಎಂದು ನಗುತ್ತಾ ಹೇಳಿದ್ದೇನೆ. ಮತ್ತೇನು ಹೇಳಲಿ? ಲೇವಡಿ ಸುಲಭ ಅದನ್ನು ಅರಗಿಸಿಕೊಳ್ಳುವುದು ಕಷ್ಟ. ಒಂದಲ್ಲ ಒಂದು ದಿನ ಹೇಳಿದವನಿಗೆ ತಿರುಗಿ ಆ ಸ್ಥಿತಿ ಬರಬಹುದೆಂಬ ಪ್ರಜ್ಞೆಯಿರಲಿ. ಇದು ಕಲಿಯುಗ. 'ಇಲ್ಲಿಯೇ ಲಾಟರಿ ಇಲ್ಲಿಯೇ ಡ್ರಾ, ಇಲ್ಲಿಯೇ ಬಹುಮಾನ'. ವೈಕುಂಠಕ್ಕೆ ಹೋದವರು ಮರಳಿ ಬಂದ ಉದಾಹರಣೆ ಇಲ್ಲವಲ್ಲ. ಧಾರಾವಾಹಿಗಳಲ್ಲಿ ಕಾಣಬಹುದಷ್ಟೆ. ನಿಯತಕಾಲಿಕೆಯಲ್ಲೂ' ಸತ್ತೇ ಹೋದ ಎಂದು ತಿಳಿದವ ಈಗ ಬಂದಿದ್ದಾನೆ' ಓದಿದ್ದಿದೆ. ಯಾರೋ ಓರ್ವ ದಾರಿಹೋಕ ಮನೆ ಬಾಗಿಲಿಗೆ ಬಿಸಿಲಿನ ಝಳಕ್ಕೆ ಬಂದು ಬಾಯಾರಿಕೆಗೆ ನೀರು ಕೇಳಿದಾಗ ಅವನನ್ನು ಸೂಕ್ಷ್ಮವಾಗಿ ಅವಲೋಕಿಸಿ ಕುಡಿಯಲು ನೀರೋ ಅಥವಾ ಉದರಕ್ಕೆ ಅನ್ನವೋ ನೀಡುವುದು ಧರ್ಮ. ಅದನ್ನು ಮಾಡದೆ ಓಡಿಸುವವರು ನಮ್ಮ ಸುತ್ತಮುತ್ತ ಇದ್ದಾರೆ. ಹಸಿವು, ಬಾಯಾರಿಕೆ ಎಲ್ಲರಿಗೂ ಒಂದೇ ಅಲ್ಲವೇ? ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಕೇಳಿಕೊಂಡು ಬರುವವರು ೧೦ ವರ್ಷಗಳ ಹಿಂದೆ ಇತ್ತು, ಆಗ ನಮ್ಮಿಂದಾದ ಸಹಕಾರ ಮಾಡಿದರೆ ಅದೇ ವೈಕುಂಠಕೆ ದಾರಿ. ಈಗ ಇಲಾಖೆಯಿಂದ ಸಾಕಷ್ಟು ಪ್ರೋತ್ಸಾಹ, ಉಚಿತ ಕೊಡುಗೆಗಳು (ಸರಕಾರಿ, ಅನುದಾನಿತ ) ಶಾಲೆಗಳಿಗೆ ದೊರೆಯುತ್ತದೆ. ಆದರೆ ಬಹುತೇಕ ಪೂರ್ತಿ ಖಾಸಗಿ, ಅದೂ ಆಂಗ್ಲಮಾಧ್ಯಮಕ್ಕೆ ಸೇರಿಸುವವರೇ ಹೆಚ್ಚು. ಮೊದಲಿನ ಹಾಗೆ ೮-೧೦ ಮಕ್ಕಳು ಯಾವ ದಂಪತಿಗಳಿಗೂ ಇಲ್ಲ, ಎರಡೇ ಇಲ್ಲ ಒಂದೇ ಮಗು. ಆಗ ನಿರೀಕ್ಷೆ ಬಹಳ ದೊಡ್ಡದಿರುತ್ತದೆ. ಪ್ರಾಣಿ ಪಕ್ಷಿಗಳಲ್ಲೂ ದಯೆಯಿರಲಿ. ವಿಪರೀತ ಬಿಸಿಲಿನ ಖಾರವಿದೆ. ಅವಕಾಶ ಸಿಕ್ಕಾಗ ಮನೆಯ ಸುತ್ತಮುತ್ತ ನೀರಿಡೋಣ, ಕಾಳುಗಳನ್ನು ಹಾಕೋಣ. ಮೂಕಪ್ರಾಣಿಗಳ ಬಗ್ಗೆ ಕನಿಕರವಿರಲಿ. ಕೈಗೊಳ್ಳುವ ಚಟುವಟಿಕೆಗಳಲ್ಲಿ ವೈಕುಂಠವಾಸಿಯ ಧ್ಯಾನವಿರಲಿ. ಎಲ್ಲರೂ ನಮ್ಮ ಹಾಗೆ ಮನುಷ್ಯರು, ಜೀವವಿರುವುದೆಲ್ಲ ಜೀವಿಗಳು ಎಂದು ಅರ್ಥೈಸಿಕೊಂಡರೆ ‘ವೈಕುಂಠದ ಹಾದಿ' ಸುಲಭದಲ್ಲಿ ಸಿಗಬಹುದು. 'ಬದಲಾವಣೆ ಜಗದ ನಿಯಮ' ಸ್ವಲ್ಪವಾದರೂ ಬದುಕಿನ ಹೆಜ್ಜೆಗಳಲಿ ಪರಿವರ್ತನೆ ಮಾಡಿಕೊಳ್ಳಲು ಪ್ರಯತ್ನಿಸೋಣ.

-ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ