'ತಾರೆಗಳ ಮೇಳವಿಸಿ ಬಂದು ಬಿಟ್ಟಿಹ ಬೀಡು ನಮ್ಮ ಕನ್ನಡ ನಾಡು

ತಾರೆಗಳ ಬುಡಹುಟ್ಟು ತಾರೆಗಳ ಒಡನಾಡಿ

ನಮ್ಮ ಕನ್ನಡದ ಹಾಡು

ಭೂಪತಿಯು ಕವಿಯಾಗಿ ಕವಿ ಚಮೂಪತಿಯಾಗಿ

ಮೆರೆದಿರುವ ನಮ್ಮ ನಾಡು'

ಸಾಹಿತಿ, ಕವಿ, ಲೇಖಕ ಡಾ ವಿ.ಕೃ ಗೋಕಾಕರ ಈ ಕನ್ನಡದ ಕುರಿತಾದ ಅಭಿಮಾನದ ಹಾಡಿನ ಸಾಲುಗಳು ಎಷ್ಟೊಂದು ಸೊಗಸು. ಕನ್ನಡ ಭಾಷೆ, ಕನ್ನಡ ನಾಡಿನ ಬಗ್ಗೆ ವಿಚಾರ ಪೂರಿತ ಭಾವನೆಗಳ ಓಘವೇ ಇದರಲ್ಲಿ ಅಡಗಿದೆ. ಕರ್ನಾಟಕದಲ್ಲಿ 'ಕನ್ನಡ ಶಿಕ್ಷಣ ಮಾಧ್ಯಮವಾಗಬೇಕು 'ಈ ಹಿರಿಯರ ಆಶಯ ಮತ್ತು ಕಳಕಳಿ. ಕವಿ ಅರಿತು ಬರೆಯಬೇಕೆಂದು ಕಿವಿ ಮಾತನ್ನು ಹೇಳಿದವರು. ಕನ್ನಡ ಎಂದರೆ ಸಾಲದು, ಭಾಷೆ ಬದುಕಿನ ಹೋಳಿಗೆಯ ಹೂರಣವಾಗಬೇಕು ಅಲ್ಲವೇ? ಕೇವಲ ಭಾವನೆ ಪ್ರಾಧಾನ್ಯತೆಯನ್ನೇ ನೋಡದೆ ಅದನ್ನೂ ಮೀರಿದ ಜೀವನ ರಹಸ್ಯದ ಸೃಷ್ಟಿ ಬರಹದಲ್ಲಿ ಬರೆಯಲ್ಪಟ್ಟು ಪ್ರಭಾವ ಬೀರಬೇಕೆಂದು ಆಶಿಸಿದವರು. ದೇಶದ ಸಂಸ್ಕೃತಿ ನಾಡಿನ ಜನರ ಆಚಾರ ವಿಚಾರಗಳಲ್ಲಡಗಿದೆ, ಇದನ್ನು ಅರಿತವ  ಉತ್ತಮ ಕವಿಯಾಗಬಲ್ಲ, ನಾಡು ನುಡಿಯ ಬಗ್ಗೆ ಅನ್ಯರಿಗೆ ಮನಮುಟ್ಟುವಂತೆ ತಿಳಿಸಬಲ್ಲ. ಈ ಕೆಲಸ ತಾಯ್ನಾಡಿಗೆ ಸಲ್ಲಿಸುವ ಸೇವೆಯೆಂದು ಭಾವಿಸಬೇಕು. 'ದೃಷ್ಟಿಯಲ್ಲಿ ಸೃಷ್ಟಿಯಡಗಿರಬೇಕು', ಕಟ್ಟುಪಾಡು ಬೇಡ, ಆದರೆ ಬಡಿದೆಬ್ಬಿಸುವಂತಿರಬೇಕು, ಏನನ್ನಾದರೂ ಸಾಧಿಸಬೇಕೆಂಬ ಮನೋಭಾವ ಮೂಡಿದರೆ ಸಾರ್ಥಕ. ಕನ್ನಡ ಕನ್ನಡ ಎಂದು ಅಲವತ್ತುಕೊಂಡರೆ,ಬೊಬ್ಬಿಟ್ಟರೆ ಸಾಲದು, ನಮ್ಮಿಂದಾದ ಸಹಕಾರ, ಪ್ರೋತ್ಸಾಹವಿರಬೇಕು. ಸಾಹಿತ್ಯ ಪ್ರಕಾರದ ವಿವಿಧ ಶಿಬಿರಗಳನ್ನು ಶಾಲೆಗಳಲ್ಲಿ, ಸಂಘಸಂಸ್ಥೆಗಳಲ್ಲಿ ಏರ್ಪಡಿಸಿ ಮಾಹಿತಿ ನೀಡಬಹುದು. ಹೆತ್ತವರು ತಮ್ಮ ಮಕ್ಕಳಿಗೆ ಮನೆಯಲ್ಲಿ ತಮ್ಮ ಮಾತೃಭಾಷೆಯ ಜೊತೆಜೊತೆಗೆ ಕನ್ನಡವನ್ನು ಸಹ ಕಲಿಯುವಂತೆ(ಓದು,ಬರಹ) ಪ್ರೋತ್ಸಾಹ ನೀಡುವುದರ ಮೂಲಕ ಕನ್ನಡಮ್ಮನ, ಈ ಮಣ್ಣಿನ ಸೇವೆಯನ್ನು ಮಾಡಬಹುದು. ಕನ್ನಡದ ಬಂಧುಗಳೇ, ನಮ್ಮಿಂದಾದ ಕಿಂಚಿತ್ ಸೇವೆ ಸಲ್ಲಿಸೋಣ.

(ಸಂಗ್ರಹ):ಹಿರಿಯ ಸಾಹಿತಿಗಳ ನುಡಿಮುತ್ತುಗಳು

-ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ