ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರನ ಚರಿತೆಯನ್ನು ಲೋಕಮುಖಕ್ಕೆ ಆಚಂದ್ರಾರ್ಕಪರ್ಯಂತ ನೀಡಿದ ಮಹರ್ಷಿ ವಾಲ್ಮೀಕಿಯ ಜಯಂತಿಯಿಂದು ನಿತ್ಯ ವಂದಿಪನಾದ ಮಹರ್ಷಿ ವಾಲ್ಮೀಕಿ.
ಕಾಡಿನಲ್ಲಿ ತನ್ನ ಕುಲವೃತ್ತಿಯನ್ನು (ಹಿರಿಯರಿಂದ ಬಂದದ್ದು) ಮಾಡಿಕೊಂಡಿದ್ದ ಬೇಡನೊಬ್ಬ, ದೇವ ಋಷಿ ನಾರದರ ಮಾತಿನಂತೆ, ಏಕೋನಿಷ್ಠೆಯಿಂದ ತಪಸ್ಸನ್ನಾಚರಿಸಿ, ರಾಮಧ್ಯಾನದಲ್ಲಿ ತಲ್ಲೀನನಾಗಿ, ತನ್ನ ಹೆಸರನ್ನೇ ಅನ್ವರ್ಥಗೊಳಿಸಿದ, ಪ್ರಭು ಶ್ರೀರಾಮಚಂದ್ರನನ್ನು ಹಾಡಿಹೊಗಳಿದ, ರಾಮಾಯಣವೆಂಬ ಮಹಾಕಾವ್ಯವನ್ನು ಬರೆದ ಮಹಾನುಭಾವ. ಅಮರನಾದ ಮಹರ್ಷಿ ವಾಲ್ಮೀಕಿಯನ್ನು ನಾವು ಸ್ಮರಿಸಿಕೊಳ್ಳಲೇಬೇಕು, ನಮ್ಮ ಕರ್ತವ್ಯವದು. ಏಕಾಗ್ರತೆ, ಧ್ಯಾನ, ಮೌನ, ಹಠ, ಛಲ, ಮನಸ್ಸು, ಆತ್ಮಾಭಿಮಾನ, ಪ್ರಾಮಾಣಿಕತೆ, ಸತ್ಯಸಂಧತೆ, ನಯವಿನಯ, ಗುರುಹಿರಿಯರಲ್ಲಿ ಭಯ-ಭಕ್ತಿ- ಗೌರವ, ಆರ್ದ್ರತೆಗೆ ಸಾಕ್ಷಿಯಾಗಿ ಇಂದಿಗೂ, ಎಂದೆಂದಿಗೂ ಜನಮಾನಸದಲ್ಲಿ ನೆಲೆನಿಂತ 'ಮಹರ್ಷಿ'. ಲೋಕಮುಖಕ್ಕೆ ಜೀವನಗಾಥೆ ಪಾಠದಂತೆ.ಹೇಗಿದ್ದವರು ಸತತ ಪರಿಶ್ರಮದಿಂದ ಹೇಗೂ ಆಗಬಹುದೆಂಬುದಕ್ಕೆ ಉದಾಹರಣೆ. ಆದರ್ಶಗಳನ್ನು ಸ್ವೀಕರಿಸೋಣ.
***
ಸುಮಾಲಿಯ ಪುತ್ರ ರತ್ನಾಕರ ಬೇಡನು
ಮಿಥುನ ಹಕ್ಕಿ ಜೋಡಿಯ ಸಾವಿಗೆ ಕಾರಣನಾದನು
ದೇವ ಋಷಿ ನಾರದರ ಸಲಹೆ ಸ್ವೀಕರಿಸಿದನು
ಪತಿತನಾಗಲು ವಲ್ಮ ಬೆಳೆದು ವಾಲ್ಮೀಕಿಯಾದನು
ರಾಮಾಯಣ ಬರೆದು ಲೋಕವಿಖ್ಯಾತನಾದನು
ಜೀವನದ ಹಾದಿಯ ಸಾರ್ಥಕ್ಯ ಮಾಡಿಕೊಂಡನು
ಅಶ್ವಯುಜ ಶುದ್ಧ ಪೌರ್ಣಿಮೆ ವಾಲ್ಮೀಕಿ ಜಯಂತಿಯ ಶುಭದಿನ
ಆಚಂದ್ರಾರ್ಕಪರ್ಯಂತ ಅಮರನಾದನು ಮಹರ್ಷಿ ನಿತ್ಯವಂದಿಪನು
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!