ಉಣ್ಣುವುದಕ್ಕೆ, ಉಡುವುದಕ್ಕೆ ಒಂದು ನಿಯಮ, ರೀತಿ-ನೀತಿಯೆಂಬುದಿದೆ. ನಮ್ಮ ಹಿರಿಯರಿಗೆ ಈಗಿನ ಹಾಗೆ ಮೂರು ಮೂರು ಪದವಿಗಳಿರಲಿಲ್ಲ. ಶಾಲೆಯ ಮೆಟ್ಟಿಲು ಹತ್ತಿದವರು ಬಹಳ ಕಡಿಮೆ. ಆದರೆ ಬದುಕಿನ ಹಾದಿಯಲ್ಲಿ ಅಚ್ಚುಕಟ್ಟಾದ ಕ್ರಮವಿತ್ತು. ಎಲ್ಲಿಯೂ ತಾಳತಪ್ಪುತ್ತಿರಲಿಲ್ಲ. ಬೆವರಿಳಿಸುವ ಕಠಿಣ ದುಡಿಮೆ ಅವರದಾಗಿತ್ತು. ಶ್ರಮ ಜೀವಿಗಳಾಗಿದ್ದರು. ಮನೆಗೆ ಬೇಕಾದ ಸೊಪ್ಪು ತರಕಾರಿ, ಗಡ್ಡೆಗೆಣಸು, ಹಸಿರು ತರಕಾರಿಗಳನ್ನು, ಬಾಳೆ ಇತ್ಯಾದಿಗಳನ್ನು ತಮ್ಮ ಮನೆಯ ಸುತ್ತಮುತ್ತ ಬೆಳೆಸುತ್ತಿದ್ದರು. ಈಗಿನಂತೆ ಕ್ರಿಮಿನಾಶಕಗಳನ್ನು ಸಿಂಪಡಿಸುತ್ತಿರಲಿಲ್ಲ. ಗಿಡಮರಗಳಿಗೆ ಹಟ್ಟಿಗೊಬ್ಬರವನ್ನೇ ಬಳಸುತ್ತಿದ್ದರು. ನಾವಿಂದು ವಿಷವನ್ನೇ ತಿಂದುಂಡು ಜೀರ್ಣಿಸಿಕೊಳ್ಳುತ್ತಿದ್ದೇವೆ. ಹಾಗಾಗಿ ಸ್ವಲ್ಪ ಜಾಗ್ರತೆ ಬೇಕು. ಹೆಚ್ಚಿನವರಿಗೂ ಪೇಟೆ ತರಕಾರಿಯೇ ಗತಿ. ಇಂದಿನ ವಾತಾವರಣದಲ್ಲಿ, ಕೀಟ, ಪ್ರಾಣಿಗಳ ಹಾವಳಿ, ಅಕಾಲದಲ್ಲಿ ಸುರಿವ ಮಳೆ, ಬಿಸಿಲಿನ ಬೇಗೆಗೆ ತರಕಾರಿ ಕೈಗೆ ಸಿಗುವುದೇ ಕಷ್ಟವಾಗಿದೆ. ಹೊರಗಿನಿಂದ ಖರೀದಿಸಿ ತಂದ ವಸ್ತುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಬಳಸುವುದು ಅಷ್ಟೇ ಮುಖ್ಯ. ಉಪ್ಪು ,ಅರಶಿನ ಮಿಶ್ರಿತ ನೀರಿನಲ್ಲಿ ತೊಳೆದೇ ಬಳಸಬೇಕು. ಹಸಿ ತರಕಾರಿ ಸೇವಿಸುವಾಗ ತುಂಬಾ ಜಾಗ್ರತೆ ಬೇಕು. ಉಣ್ಣಲು ಬೇಕಾದ ಅಕ್ಕಿಯನ್ನೂ ವಿಷಯುಕ್ತಮಾಡುತ್ತಾರೆಂದರೆ ದುರಂತವೇ ಸರಿ. ಆಹಾರ, ಔಷಧ, ಹಾಲು ಮುಂತಾದವುಗಳು ವಿಷಮಯವಾದರೆ ನಮ್ಮ ಶರೀರದ ಗತಿಯೇನು? ಸಿಕ್ಕಿತೆಂದು ಅತಿಯಾದ ಆಹಾರ ಸೇವನೆಯಿಂದ ರೋಗ ಬರಬಹುದು. ಮೂರು ಹೊತ್ತು ಗಂಜಿಯನ್ನೇ ಉಂಡರೆ ಸಾರಯುಕ್ತವಾದ ಜೀವಸತ್ವಗಳೂ ಬೇಡವೇ? ಪೋಷಕಾಂಶಗಳಿಂದ ಕೂಡಿದ ಆಹಾರ ನಮಗೆ ಆರೋಗ್ಯಕ್ಕೆ ಬೇಕು.
ಅನಾರೋಗ್ಯಂ ಅನಾಯುಷ್ಯಂ ಅಸ್ವರ್ಗ್ಯಂ ಜಾತಿಭೋಜನಂ/
ಅಪುಣ್ಯಂ ಲೋಕವಿದ್ವಿಷ್ಟಂ ತಸ್ಮಾತ್ ತತ್ ಪರಿವರ್ಜ ಯೇತ್//
ವಿಪರೀತವಾಗಿ ಆಹಾರವನ್ನು ಸೇವಿಸುವುದು ಅನಾರೋಗ್ಯಕ್ಕೆ ದಾರಿ.ಆಯುಷ್ಯವೂ ಕಡಿಮೆ.ಗಬಗಬನೆ ಉಣ್ಣುವುದು ಸರಿಯಲ್ಲ. ಕೆಲವನ್ನು ಚೆನ್ನಾಗಿ ಜಗಿದು ನುಂಗಬೇಕು. ನಮ್ಮ ಪಾಲಿನದನ್ನು ಮಾತ್ರ ನಮಗೆ ಉಣ್ಣುವ ಹಕ್ಕಿರುವುದು. ಹಿರಿಯರು ಹೇಳುವುದು ಕೇಳಿದ್ದೇನೆ'ಪ್ರತಿಯೊಂದು ಅಕ್ಕಿಯ ಮೇಲೂ ಉಣ್ಣುವವರ ಹೆಸರು ಬರೆದಿರುತ್ತಾನಂತೆ ಆ ಭಗವಂತ.'ಲೆಕ್ಕದಿಂದ ಹೆಚ್ಚು ಸೇವಿಸಿದರೆ ಯಾರದೋ ಉದರಕ್ಕೆ ಸೇರಬೇಕಾದ ಆಹಾರವನ್ನು ನಾವು ತಿಂದಂತಾಗುವುದು, ಇದು ಪಾಪಕಾರ್ಯ ಸಹ .ವೈವಿಧ್ಯ ರೋಗಗಳಿಗೆ ತುತ್ತಾದರೆ ಸಿಕ್ಕಿಸಿಕ್ಕಿದ್ದನ್ನು ಸಿಕ್ಕಿತೆಂದು ಉಂಡವರೇ ಅನುಭವಿಸಬೇಕು. ಆಹಾರ ಸೇವನೆಯಲ್ಲಿ ಹಿತ-ಮಿತವಿರಲಿ, ಅವರವರ ಉದರ ತುಂಬಲು ಎಷ್ಟು ಬೇಕೋ ಅಷ್ಟೇ ತಿನ್ನಬೇಕು, ಉಣ್ಣಬೇಕು.ಇದು ಸಭ್ಯತೆ ಸಹ.ಹಿತಮಿತ-ರೋಗ ದೂರ.
(ಶ್ಲೋಕ:ಮನುಸ್ಮೃತಿ)
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!