ಮಹಾಲಯ ಅಮಾವಾಸ್ಯೆ(ಪಿತೃಪಕ್ಷ)ಯ ಆರಂಭದ ದಿನವಿಂದು. ನಮ್ಮ ಬಾಳನ್ನು ರೂಪಿಸಿ, ಬೆಳಕಾಗಿ, ಬೆನ್ನೆಲುಬಾಗಿ ನಿಂತು, ಸಾಧನೆಗೆ, ಜೀವನಕ್ಕೆ ಗುರಿಯನ್ನು ತೋರಿಸಿದ ನಮ್ಮೊಂದಿಗೆ ಇಂದು ಇಲ್ಲದ, ಭಗವಂತನ ಪಾದವನ್ನು ಸೇರಿದ ಹಿರಿಯರನ್ನು ನೆನೆಸುತ್ತಾ, ಕೃತಜ್ಞತೆ ನೀಡುವ ವಿಶೇಷ ದಿನವಿಂದು. ಇಂದು ನಮ್ಮೆಲ್ಲರ ಬದುಕಿನ ಹಾದಿ ಸಾಗುತ್ತಾ ಬಂದಿರುವುದೇ ಸಂಸ್ಕೃತಿ-ಸಂಸ್ಕಾರ, ಆಚಾರ ವಿಚಾರ, ಹಿರಿಯರ ಮಾರ್ಗದರ್ಶನದ ಮೇಲೆ. ಇಂದು ನಮ್ಮನ್ನಗಲಿದ ಎಲ್ಲಾ ಹಿರಿಯರಿಗೂ, ಅವರೊಡನೆ ಅಗಲಿದ ಇತರರಿಗೂ ಶ್ರದ್ಧಾ ಭಕ್ತಿಯಿಂದ, ಸ್ವಚ್ಛತೆಯಿಂದ ಆಹಾರ ನೀಡುವ ವಿಶೇಷ ದಿನ. ಪಿಂಡದಾನ, ತಿಲತರ್ಪಣ, ವಸ್ತ್ರದಾನ, ವಾಯಸಕ್ಕೆ ಬಲಿ, ಗೋಗ್ರಾಸ, ಸಾತ್ವಿಕ ಆಹಾರ ಭೋಜನ, ಫಲತಾಂಬೂಲ ದಕ್ಷಿಣೆ ಇತ್ಯಾದಿಗಳನ್ನು ಕುಲ ಪುರೋಹಿತರ ಮೂಲಕ ಅಗಲಿದ ಜೀವಗಳಿಗೆ ಕೃತಜ್ಞತೆ ಸಲ್ಲಿಸುತ್ತಾ, ಮೋಕ್ಷ ಸಿಗಲೆಂದು ಪ್ರಾರ್ಥಿಸುತ್ತಾ, ಮನೆಮಂದಿ, ಬಂಧು ಬಾಂಧವರು ಸೇರಿ ಅರ್ಥಪೂರ್ಣವಾಗಿ ಆಚರಿಸುತ್ತೇವೆ. ಪಿತೃಗಳ ಆತ್ಮಕ್ಕೆ ಶಾಂತಿ ಸಿಗಲೆಂದು ಕೇಳಿಕೊಳ್ಳುತ್ತೇವೆ. ಪೂರ್ವಜರ ಸ್ಮರಣೆಯನ್ನು ಅರ್ಥಪೂರ್ಣವಾಗಿ ವರುಷಕ್ಕೊಮ್ಮೆ ಮಾತ್ರ ಈ ರೀತಿಯಾಗಿ, ವಿಧಿ ವಿಧಾನಗಳಿಂದ ಆಚರಿಸುವುದೇ ಇಂದಿನ ವಿಶೇಷ. 'ರಾಗ ದ್ವೇಷ, ಅಸೂಯೆಗಳ ಬಿಟ್ಟು ಸಾತ್ವಿಕ ಮನಸ್ಸಿಂದ ಎಲ್ಲರೊಂದಾಗಿ ಬಾಳೋಣ'. ಹಿಂದೂಗಳ ಅತ್ಯಂತ ಶ್ರೇಷ್ಠ ಮತ್ತು ಪವಿತ್ರವಾದ ಆಚರಣೆಯಿದು. ಹಿಂದೂ ಕ್ಯಾಲೆಂಡರ್ ಪ್ರಕಾರ ಈ ಭೂಮಿಗೆ ಅಮಾವಾಸ್ಯೆಯ ಅನಂತರ ದೇವಿ ದುರ್ಗೆಯ ಆಗಮನಕ್ಕಾಗಿ ಆಹ್ವಾನ. ಸರ್ವರಿಗೂ ಒಳ್ಳೆಯದಾಗಲಿ.
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!