'ಕುಟುಂಬ'ವೆಂದರೆ ಅದೊಂದು 'ಆಲದಮರ'ವಿದ್ದಂತೆ. ಆಲದಮರದಿಂದಾಗುವ ಬಹುಪಯೋಗವನ್ನು ಅರಿತವರೇ ನಾವು. ಕಷ್ಟ-ಸುಖ, ನಗು, ಸಂತೋಷ, ಬೇನೆ-ಬೇಸರಿಕೆ, ಆರೋಗ್ಯ-ಅನಾರೋಗ್ಯ, ಊಟ-ತಿಂಡಿ, ಸಮಾರಂಭಗಳು, ಕೆಲಸಕಾರ್ಯಗಳಲ್ಲಿ ಕೈಜೋಡಿಸುವಲ್ಲಿ ಕುಟುಂಬ ಸದಸ್ಯರ ಹೊಂದಾಣಿಕೆ ಎಷ್ಟು ಚಂದವಾಗಿದ್ದ ಕಾಲವೊಂದಿತ್ತು. ಈಗ ಒಬ್ಬರು ಪೂರ್ವವಾದರೆ ಮತ್ತೊಬ್ಬರು ಪಶ್ಚಿಮ. ಹಾವು-ಮುಂಗುಸಿಗಳ ತರಹ ಆಗಿಬಿಟ್ಟಿದ್ದಾರೆ. ಬಹುತೇಕ ಮಂದಿಗೂ 'ನಾನು ನನ್ನ ಗಂಡ/ಹೆಂಡತಿ/ಮಕ್ಕಳಿದ್ದರೆ ಮಕ್ಕಳು ಮಾತ್ರ 'ಇರಬೇಕೆಂಬ ಪ್ರತ್ಯೇಕತೆಯಿಂದಾಗಿ ಅವಿಭಕ್ತ ಎನ್ನುವ ಪರಿಕಲ್ಪನೆಯೇ ಛಿದ್ರವಾಯಿತು. ಬಸುರಿ, ಬಾಣಂತಿ, ಸಣ್ಣ ಮಗುವಿರುವಾಗ, ಕೆಲಸಕ್ಕೆ ಹೋಗುವಾಗ, ಮನೆಯ ಹಿರಿಯ ಜೀವಗಳ ನೆನಪಾಗುವುದು. ಇಲ್ಲದಿದ್ದರೆ ಯಾರೂ ಬೇಡ ಎನುವಷ್ಟರ ಮಟ್ಟಿಗೆ ಸಂಬಂಧಗಳು ಬಂದು ನಿಂತಿತು. ಆ ಮೇಲೆ ಬೇಕು ಎಂದರೂ ಬರಲು ಯಾರೂ ಸಿಗದಾಯಿತು. ಹಿರಿಯರನ್ನು ಕಳಕೊಂಡಾಗ ಅವರ ಇರುವಿಕೆಯ ಬೆಲೆ ಅರಿವಿಗೆ ಬಂತು. ಏನು ಪ್ರಯೋಜನ? ರೈಲು ಹೋದ ಮೇಲೆ ಟಿಕೆಟ್ ತೆಗೆದಂತಾಯಿತು. ಈಗೀಗ ಇನ್ನೊಂದು ಆಘಾತಕಾರಿ ಮಾತುಗಳು ಕಿವಿಗೆ ಬೀಳುತ್ತಿದೆ. ವಿವಾಹದ ವಯಸ್ಸು ಮೀರುವುದು, ಜೊತೆಯಲ್ಲಿ 'ಮಕ್ಕಳೇ ಬೇಡವೆಂಬ' ನಿರ್ಧಾರ ಇದೆಲ್ಲ ಎಲ್ಲಿಗೆ ಹೋಗಿ ತಲುಪುವುದೋ ಗೊತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ 'ವಿಶ್ವ ಕುಟುಂಬ' ಆಚರಿಸುವ ಮೌಲ್ಯ ಕಂಡುಬಂತು. 'ವಸುದೈವ ಕುಟುಂಬಕಂ' ಸಾರಿದವರು ನಾವೇ. ಈ ಪ್ರಪಂಚವೇ ನಮ್ಮ ಕುಟುಂಬವೆಂದರಿತರೆ ಎಲ್ಲವೂ ಚಂದ. ಅರಿವವರು ಬೆರಳೆಣಿಕೆಯ ಮಂದಿ ಮಾತ್ರ. ಅವಿಭಕ್ತ ಕುಟುಂಬದಲ್ಲಿ ಬೆಳೆವ ಮಗು ಮನೆಯ ಹಿರಿಯರನ್ನು ಅನುಕರಣೆ ಮಾಡುವುದು, ತಾನಾಗಿ ಕಲಿಯುತ್ತದೆ, ಮುಂದೆ ದೊಡ್ಡ ಆದಾಗ ಕುಟುಂಬ ಮೌಲ್ಯ, ಆಚರಣೆ, ಸಂಪ್ರದಾಯ, ಬಾಂಧವ್ಯದ ಮಹತ್ವವನ್ನು ಎತ್ತಿ ಹಿಡಿಯಬಹುದು. ಕೆಟ್ಟ ಕೆಲಸಗಳನ್ನು ಖಂಡಿಸುವ, ಬುದ್ಧಿವಾದ ಹೇಳುವ ಹಿರಿಯರು ಬೇಕು. ಆಗಲೇ ಆ ಮಗುವಿನ ಎದೆಗಟ್ಟಿಯಾಗುವುದು. ಎದೆಗಟ್ಟಿಯಾಗದ, ಚಂಚಲ ಮನಸ್ಸಿನ, ತಾನು ಹೇಳಿದ್ದೇ ಆಗಬೇಕೆನ್ನುವ, ನೋವನ್ನು ಸಹಿಸುವ ಮನೋಬಲವಿಲ್ಲದ ಮಕ್ಕಳೇ ಇಂದು ಅನಾಹುತ ಮಾಡಿಕೊಳ್ಳುವುದು. ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ ಕಷ್ಟವನ್ನು ಎದುರಿಸುವ ಸಾಮರ್ಥ್ಯದ ಕೊರತೆಯಿಂದಲೇ ಉಸಿರಿಗೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಒಗ್ಗಟ್ಟಿನ ಶಕ್ತಿ ಒಟ್ಟು ಕುಟುಂಬದಿಂದ ಸಿಗಲು ಸಾಧ್ಯ. ಪುಸ್ತಕ ನೀಡದ ಬದುಕಿನ ಹಾದಿ ಜೀವನ ಶಿಕ್ಷಣ ನೀಡಬಹುದು. ಪಾಠ ಕಲಿತರೆ ಸಾಲದು, ಜೀವನಕ್ಕೆ, ಬದುಕಿಗೆ ಅಳವಡಿಸಲು ಕಲಿಯಬೇಕು. ಜಾಗೃತಿ ಮೂಡಿಸುವ ಕೆಲಸ ಈ ವಿಶ್ವ ಕುಟುಂಬ ದಿನಾಚರಣೆಯ ಮುಖ್ಯ ಗುರಿ. ಪಾಶ್ಚಾತ್ಯರ ಅನುಕರಣೆ ನಮಗೆ ಬೇಡ. ನಮ್ಮ ಪರಂಪರೆ, ಸಂಸ್ಕೃತಿ ನಮ್ಮದು. ಅತ್ಯಂತ ಸಂತೋಷದಾಯಕವಾದ ಕುಟುಂಬ ಜೀವನ ಅನುಭವಿಸೋಣ. ಹಿರಿಯರ ಹೆಜ್ಜೆಗಳ ಮರೆಯದಿರೋಣ. ನಗರೀಕರಣದ ಆಧುನಿಕತೆಗೆ ಮಾರು ಹೋಗದಿರೋಣ. ಆದದ್ದು ಆಗಲಿ, ಮುಂದೆ ಎಚ್ಚೆತ್ತುಕೊಳ್ಳೋಣ. ಇಂದಿನ ಕಾಲಘಟ್ಟದಲ್ಲಿ ಇಬ್ಬರ ದುಡಿಮೆ ಅನಿವಾರ್ಯ, ಆದರೂ ಸ್ವಲ್ಪ ಸಮಯ ಕುಟುಂಬ ಸದಸ್ಯರಿಗಾಗಿ ಮೀಸಲಿಡೋಣ. ಸಮಾರಂಭಗಳ ಸಂದರ್ಭವಾದರೂ ಎಲ್ಲರೂ ಒಂದೆಡೆ ಸೇರಿದರೆ ಆ ಆನಂದ ವರ್ಣಿಸಲಸದಳ. ಈಗೀಗ ಬೆಳೆದು ನಿಂತ ಸಂಪಾದನೆಗೈಯುತ್ತಿರುವ ಕೆಲವು ಮಕ್ಕಳಿಗಂತೂ ಹಣವೇ ಮುಖ್ಯ, ಬಾಂಧವ್ಯ ಬೇಡ, ಭಾಗವಹಿಸಿದರೆ ಏನು ಸಿಗುತ್ತದೆ? ಸಮಯ ಹಾಳು ಎನ್ನುವಷ್ಟರ ಮಟ್ಟಿಗೆ ಯೋಚನೆಗಳು ಹರಿದಾಡುತ್ತಿದೆ. ಇದನ್ನೆಲ್ಲ ಹೆತ್ತವರೇ ಹೇಳಿ ಸರಿಪಡಿಸಬೇಕಲ್ಲವೇ? ಕುಟುಂಬವೆನ್ನುವ ಬೃಹತ್ ಆಲದ ಮರದ ನೆರಳಿನಡಿಯಲ್ಲಿ, ಇರುವಷ್ಟು ದಿನ ನೆಮ್ಮದಿಯ ಜೀವನ ಸಾಗಿಸೋಣ.

'ಅಂತರಾಷ್ಟ್ರೀಯ ಕುಟುಂಬ' (ಮೇ ೧೫) ದಿನದಂದು ಕುಟುಂಬದ ‌ಸೊಗಸನ್ನು, ಒಟ್ಟಾಗಿ ಇರುವಿಕೆಯನ್ನು ನೆನಪಿಸಿಕೊಳ್ಳೋಣ.

-ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ