'ಭಗವಂತನಲ್ಲಿ ನಾವು ಕಷ್ಟವೇ ಕೊಡಬೇಡ, ನಿತ್ಯವೂ ಸುಖ ಸಂತೋಷವನ್ನೇ ಕೊಡು' ಎಂದು ಕೇಳುವುದು ಸರಿಯಲ್ಲ. ಈ ಬದುಕಿನ ಹಾದಿ ಕಷ್ಟ-ಸುಖಗಳ ಆಡೊಂಬಲ. ಕಷ್ಟ ಬರಬಾರದೆಂದರೆ ಹೇಗೆ? ದಾರಿಯಲ್ಲಿ ನಡೆಯುವಾಗ ಕಲ್ಲುಮುಳ್ಳು ಸಹಜ ಅಲ್ಲವೇ? ಅದನ್ನು ಬದಿಗೆ ಸರಿಸಿ ಹೋಗುವ ಜಾಣ್ಮೆ ನಮಗಿರಬೇಕು. 'ಬಂದ ಕಷ್ಟವನ್ನು ಸಹಿಸುವ, ಎದುರಿಸುವ ಶಕ್ತಿ,ತಾಳ್ಮೆ ಕೊಡು' ಎಂದು ದೇವರಲ್ಲಿ ಕೇಳಿಕೊಳ್ಳೋಣ. ನಿನ್ನೆ ಅಂರ್ಜಾಲದಲ್ಲಿ ಒಂದು ಕಾಣಿಕೆಡಬ್ಬಿ ಕದಿಯುವ ದೃಶ್ಯ ನೋಡಿದೆ. ದಿನನಿತ್ಯ ಈ ರೀತಿಯ ಅಧರ್ಮ, ಅನ್ಯಾಯ, ಅನಾಚಾರ, ಅತ್ಯಾಚಾರ, ವೃದ್ಧರ ಮೇಲೆ ಹಲ್ಲೆ ಆಗುತ್ತಿರುತ್ತದೆ. ಭಗವಂತನ ಸಾನಿಧ್ಯದಲ್ಲಿರುವ, ಭಕ್ತರು ಶ್ರದ್ಧಾಭಕ್ತಿಯಿಂದ ಏನೋ ನಿವೇದಿಸಿಕೊಂಡು ನೀಡಿದ ಕಾಣಿಕೆ ಡಬ್ಬಿಯನ್ನು ಕದಿಯುವ ಕಳ್ಳನಿಗೆಷ್ಟು ಧೈರ್ಯ ಬೇಕು ಎಂದು ಆಲೋಚಿಸಿದೆ. ದೇವರ ಹೊನ್ನನ್ನೂ ಬಿಡದ ಪಾಪಿಗಳಿದ್ದಾರೆ. ಇದನ್ನೆಲ್ಲ ನೋಡಿಕೊಂಡು ದೇವರ್ಯಾಕೆ ಮೌನವಾಗಿದ್ದಾರೆ? ಎನುವ ಪ್ರಶ್ನೆಯೂ ಕಾಡುತ್ತದೆ. ಹೌದು, ಶಿಶುಪಾಲನ ನೂರು ತಪ್ಪುಗಳು  ಆದಾಗ ಮುರಾರಿ, ಅಸುರಾರಿ, ಭಕ್ತಜನಸುರಧೇನು, ದೇವಕಿ ಕಂದ ಭಗವಾನ್ ಶ್ರೀಕೃಷ್ಣ ಶಿಶುಪಾಲನಿಗೆ ಶಿಕ್ಷೆ ಕೊಟ್ಟ, ಜೊತೆಗೆ ಆತನ ಸಹೋದರರಿಗೆ, ಸಹಚರರಿಗೆ ಸಹ. ಈ ಕಥೆ ಮಹಾಭಾರತದಲ್ಲಿ ಓದಿದವರೇ ನಾವು. ಹಾಗಾದರೆ ಕೆಟ್ಟದನ್ನು ಪ್ರೋತ್ಸಾಹಿಸುವುದು ಸಹ ಅಪರಾಧವೇ ಆಗಿದೆ ಎಂಬ ಪಾಠವಿದು. ಕಳ್ಳ ಖದೀಮರ 'ಪಾಪದ ಕೊಡ 'ತುಂಬಬೇಕಲ್ಲ? ಅದಕ್ಕಾಗಿ ದೇವನು ಮೌನ ವಹಿಸಿರಬಹುದು. ಭಗವಂತನು ಇದ್ದಾನೋ ಇಲ್ಲವೋ ಹೇಳುವ ಅಧಿಕಾರ ನಮಗಿಲ್ಲ. ಕಾಣದ ಶಕ್ತಿಯೊಂದು ಈ ಪ್ರಪಂಚದ ಆಗುಹೋಗುಗಳನ್ನು ಮುನ್ನಡೆಸುತ್ತದೆಂಬುದು ಸತ್ಯ. ಮತ್ತೆ ಆತನ ಇರುವಿಕೆ ಅವರವರ ನಂಬಿಕೆ ಮತ್ತು ವಿಶ್ವಾಸದ ಮೇಲೆ ನಿಂತಿದೆ. ನಮ್ಮ ಶರೀರದ ಆರೋಗ್ಯಕ್ಕೆ, ಮಾನಸಿಕ ನೆಮ್ಮದಿಗೆ ಭಗವಂತನ ಆರಾಧನೆ ಪ್ರೇರಕ ಶಕ್ತಿ. ಹೇಗೆ ನೀರಿನ ಒಂದೊಂದು ಹನಿಯೂ ಸೇರಿ ಮಳೆನೀರು ತುಂಬಿ ಹರಿಯುವುದೋ ಹಾಗೆಯೇ ಭಗವಂತನಿಗೆ ಸಲ್ಲಿಸುವ ಪ್ರಾರ್ಥನೆಯ ಫಲವು ದಿನದಿನ ಸಲ್ಲುವುದು. ಆತನ ದಿನಚರಿಯಲ್ಲಿ ಸಂಗ್ರಹವಾಗುವುದು. ತೋರಿಕೆ, ಬೂಟಾಟಿಕೆ ಸಲ್ಲದು. ಅಂತರಾಳದ ನಿವೇದನೆ, ಏಕಾಗ್ರತೆ, ನಿಷ್ಠೆಯಿಂದ ಕೂಡಿರಬೇಕು. ಅನ್ಯರನ್ನು ಮೆಚ್ಚಿಸುವ ಕೆಲಸಕಾರ್ಯವಾಗಬಾರದು. ಹಸಿರು ಗಿಡಮರಗಳು ಕತ್ತರಿಸಿದಷ್ಟು ಮತ್ತೆ ಮತ್ತೆ ಚಿಗುರುವುದು. ನಾವು ಚಿಗುರಲಾರೆವು. ಆದರೆ ಭಗವಂತನ ಅಸ್ಥಿತ್ವವನ್ನು ಅರಿತು ಮತ್ತೆ ಮತ್ತೆ ನೆನಪಿಸಬಹುದು, ಧರ್ಮ ಕಾರ್ಯಗಳು ಸಹ ದೇವನ ಸೇವೆಯೇ ಆಗಿದೆ. 'ಒಂದೆಡೆ ಕುಳಿತೇ ಆತನ ಧ್ಯಾನ ಗೈಯ್ದು ಸೇವೆ ಮಾಡಬೇಕಾಗಿಲ್ಲ. ಉತ್ತಮೋತ್ತಮ ಕೆಲಸಗಳೇ ಭಗವಂತನಿಗರ್ಪಿಸುವ ಸೇವೆ .ಸಾಗುವ ದಾರಿಯಲ್ಲಿ ಅಡೆತಡೆಗಳನ್ನು ನಿವಾರಿಸುವ ಶಕ್ತಿ ಕೊಡೆಂದು ನಿವೇದಿಸಿಕೊಳ್ಳೋಣ. ಈ ಕ್ಷಣಿಕವಾದ ಸಂಸಾರ ಸಾಗರದಲ್ಲಿ ಮೃಗಜಲವ ಅರಸುವ ಭ್ರಮೆಗೆ ಒಳಗಾಗದಂತೆ ನಮ್ಮನ್ನು ರಕ್ಷಿಸೆಂದು ಪ್ರಾರ್ಥಿಸಿಕೊಳ್ಳೋಣ.

-ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ