ರಜೆ ಕಳೆದು ಎಂದಿನಂತೆ ಶಾಲಾ ದಿನಗಳು ಪುನರಾರಂಭವಾಗುತ್ತಿದೆ. ಪುಟ್ಟ ಮಕ್ಕಳಿಗೆ ಶಾಲೆಗೆ ಹೋಗುವ ಸಡಗರ. ಹೆತ್ತವರಿಗೆ ಕಳುಹಿಸುವ ಸಂಭ್ರಮ. ಶಾಲೆಗೆ ಹೋಗುವ ಮೊದಲು ಮಾಡಬೇಕಾದ ತಯಾರಿಗಳನ್ನು ಪ್ರತಿನಿತ್ಯವೂ ಅವಲೋಕಿಸುವುದು ಹಿರಿಯರಾದ ಹೆತ್ತವರ ಕರ್ತವ್ಯ. ಮಾತನಾಡುವುದು, ಬರೆಯುವುದು, ಓದುವುದರ ಮೇಲೆ ಸಣ್ಣ ಮಕ್ಕಳ ಬಗ್ಗೆ ಸದಾ ಕಣ್ಣಾಗಿರಬೇಕು. ತಪ್ಪು ಉಚ್ಚಾರಗಳನ್ನು ಗುರುತಿಸಲು ದೊಡ್ಡ ಧ್ವನಿಯಲ್ಲಿ ಓದಲು ೪-೫ ತರಗತಿಯವರೆಗೆ ಹೇಳಿಕೊಡುವುದು ಒಳ್ಳೆಯದು. ಸ್ಪಷ್ಟ ಹಾಗೂ ಸುಂದರ ಬರಹ ಸಣ್ಣದರಲ್ಲೇ ಆಗಬೇಕು. ಆಮೇಲೆ ಅಕ್ಷರಗಳು ತಿದ್ದಲಾರವು. ಕಲಿಯುವ ವಯಸ್ಸಿನಲ್ಲಿ ನೋವಾಗದ ಹಾಗೆ, ಶಿಕ್ಷೆ ಅನಿಸದ ಹಾಗೆ ಖಂಡಿತವಾಗಿಯೂ ತಿದ್ದಿ ಹೇಳಲೇಬೇಕು. ಹಿಂದೆ ಹಾಗಿತ್ತು, ಹೀಗಿತ್ತು ಹೇಳುವುದರಿಂದ ಪ್ರಯೋಜನವಾಗದು. ಪ್ರಸಕ್ತ ಕಾಲಘಟ್ಟ, ವ್ಯವಸ್ಥೆ ನಮ್ಮ ಮನದಲ್ಲಿರಬೇಕು. ಕಬ್ಬಿಣ ಘನವಾದರೂ ಬೆಂಕಿಗೆ ಹಾಕಿ ಕಾಯಿಸಿ ಬೇಕಾದಂತೆ ಆಕಾರ ಕೊಡ್ತೇವೆ ಅಲ್ವಾ? ಅದೇ ರೀತಿ 'ಗಿಡವಾಗಿ ಬಗ್ಗದ್ದನ್ನು ಬೆಳೆದ ಮರವಾದ ಮೇಲೆ ಹೇಗೆ ಬಗ್ಗಿಸುವುದು?' ಹೇಳುವ ರೀತಿ-ನೀತಿ ಮೃದುವಾಗಿರುವಂತೆ ನೋಡಿಕೊಳ್ಳೋಣ. ಮಗುವಿನ ಕೌಟುಂಬಿಕ ಹಿನ್ನೆಲೆಯ ಅರಿವು ಶಾಲಾ ಶಿಕ್ಷಕರಿಗೆ ಅಗತ್ಯವಾಗಿ ಇರಬೇಕು. ಬಾಯಿಪಾಠ ಸಂಸ್ಕೃತಿ ಮೆದುಳಿಗೆ ಮೇವನ್ನು ಕೊಡಲಾರದು. ಸಹಪಠ್ಯ ಚಟುವಟಿಕೆಗಳು, ಪ್ರಾತ್ಯಕ್ಷಿಗಳು, ಸ್ವ ಕಲಿಕಾ ವಿಧಾನಗಳು ಹೆಚ್ಚು ಹೆಚ್ಚು ಇದ್ದಷ್ಟೂ ಮಕ್ಕಳ ಕಲಿಕಾ ಸಾಮರ್ಥ್ಯಕ್ಕೆ ಪ್ರೋತ್ಸಾಹಿಸಿದಂತಾಗುತ್ತದೆ. ಜೊತೆಗೆ ಪುರಾಣ ಪುಣ್ಯ ಕಥೆಗಳು, ನೇಮನಿಷ್ಠೆ, ರಾಷ್ಟ್ರಭಕ್ತಿ, ಅಪಾಯವನ್ನು ಗೆಲ್ಲುವ ದೃಢತೆ, ಧೈರ್ಯ ಈ ಎಲ್ಲವೂ ಚಿಕ್ಕಂದಿನಿಂದಲೇ ಮಕ್ಕಳ ಕಲಿಕಾ ಹಾದಿಯಲ್ಲಿರಲಿ.
ಚಿಕ್ಕಮಕ್ಕಳು ಸುಳ್ಳು ಹೇಳುವುದು ಜಾಸ್ತಿ. ಅದನ್ನು ಗುರುತಿಸಿ, ಆ ಕ್ಷಣವೇ ಸರಿಯಾದ ಮಾರ್ಗದರ್ಶನ ಸಿಗಲಿ. ತಮಗೆ ತೋಚಿದಂತೆ, ತಮ್ಮ ಮನಸ್ಸಿಗೆ ಬಂದ ಹಾಗೆ ಭಾಷೆಯನ್ನು ಬರೆದು ಓದಿದರೆ ಮುಂದೆ ತಿದ್ದಲು ಕಷ್ಟವಿದೆ ಅಲ್ಲವೇ? ಶಾಲೆಯಲ್ಲಿ ದಾಖಲಾತಿಗೆ ಬಂದಾಗಲೇ ಎಲ್ಲವನ್ನೂ ಹೆತ್ತವರ ಗಮನಕ್ಕೆ ತರುವುದು ಒಳ್ಳೆಯದು. ಮಗು ಮನೆಯ ಮಾಣಿಕ್ಯ, ಅಮೂಲ್ಯ, ಒಮ್ಮೆ ಕಳಕೊಂಡರೆ ಮತ್ತೆ ಸಿಗರು.ಅವರಲ್ಲಿದ್ದ ಗುಣವಿಶೇಷಗಳನ್ನು ಗುರುತಿಸಿ ಬೆನ್ನು ತಟ್ಟೋಣ.ಎಲ್ಲರೂ ನೂರಕ್ಕೆ ನೂರು ತೆಗೆಯಬೇಕೆಂಬ ನಿರೀಕ್ಷೆ ಸಲ್ಲದು. ನಮ್ಮ ಬೆರಳುಗಳೇ ಒಂದೇ ಹಾಗಿಲ್ಲ, ಹಾಗೆಂದು ಐದೂ ಬೇಕಲ್ಲವೇ? ಮಕ್ಕಳನ್ನು ಶಾಲಾ ಶಿಕ್ಷಕರೊಂದಿಗೆ ಹೆತ್ತವರು ಸಹ ತಿದ್ದಲು ಸಹಕರಿಸಿ, ಉತ್ತಮ ಸುಸಂಸ್ಕೃತರನ್ನಾಗಿ ಮಾಡಬೇಕಾದ್ದು ಅತಿ ಅಗತ್ಯವಾಗಿದೆ.
ಕನಸುಗಳನ್ನು ಕಾಣುವ ಅಥವಾ ಕಟ್ಟುವ ಅಧಿಕಾರ ಪ್ರತಿ ಮಗುವಿಗೂ ಇದೆ. ಆದರೆ ಅದು ನನಸಾಗಲು ಆ ಮಗುವಿಗೆ ಒಂದಷ್ಟು ಪ್ರೋತ್ಸಾಹ ಬೇಕಾಗುತ್ತದೆ. ಅದಕ್ಕೆ ಗರಿಗಳನ್ನು ಕಟ್ಟಿ ಹಾರಾಡಲು ಪ್ರೋತ್ಸಾಹಿಸುವ ಕೆಲಸ ನಮ್ಮಿಂದಾಗಬೇಕು. ಅದನ್ನರಿತು ಹಿರಿಯರಾದ ನಾವು ವ್ಯವಹರಿಸಬೇಕಾಗುತ್ತದೆ. 'ಸಸಿಯೊಂದನ್ನು ನೆರಳನಡಿ ನೆಟ್ಟರೆ ಅದು ಸೂರ್ಯನ ಬಿಸಿಲಿರುವ ಕಡೆಗೆ ಬಾಗುವುದು ಸಹಜ. ಅಂತೆಯೇ ಶಿಕ್ಷಕರು, ಹೆತ್ತವರು ಈರ್ವರ ಸಹಕಾರವೂ ಮಗುವಿಗೆ ಅವಶ್ಯ. ಕಂಡ ಕನಸೆಲ್ಲ ನನಸಾಗುವುದೆಂಬ ಭ್ರಮೆಯಲ್ಲಿ ತೇಲಾಡದಂತೆ ಮಗುವಿನ ಮನಸ್ಸನ್ನರಿತು ಮಾರ್ಗದರ್ಶನ ನೀಡಬೇಕಾಗುತ್ತದೆ. ವಿಫಲವಾದಲ್ಲಿ ಹತಾಶೆಯೂ ಆಗಬಾರದು. ಬದುಕಿನ ಹಾದಿಯಲ್ಲಿ ಆಯ್ಕೆಗಳು ನೂರಾರಿದೆ. ಕೈಗೆಟಕುವುದನ್ನು ಆರಿಸಲು ಸಹಕರಿಸೋಣ. ಮಗುವಿನ ಪೂರ್ಣ ಬೆಳವಣಿಗೆ, ಆರೋಗ್ಯ, ಕಲಿಕೆ, ಗಟ್ಟಿತನ ಎಲ್ಲವೂ ಗುರುಹಿರಿಯರ ತಿದ್ದಿತೀಡುವಿಕೆಯಲ್ಲಿದೆ. ಸಂತಸಕ್ಕೆ ಹಿಗ್ಗದೆ, ದು:ಖಕ್ಕೆ ಕುಗ್ಗದೆ ಇರುವ ಮನೋಭಾವ ಮಗುವಿನಲ್ಲಿ ಹುಟ್ಟುಹಾಕಬೇಕು. 'ಏನೇ ಆದರೂ ಧೈರ್ಯಗೆಡಲಾರೆ ದಾಟಿಕೊಂಡು ಮುಂದೆ ಹೋಗುವೆ' ಎನ್ನುವ ಸಾಮರ್ಥ್ಯ ಅಗತ್ಯವಾಗಿ ಮೂಡುವಂತೆ ಮಾಡಬೇಕು. ಮನೆಮನೆಯ ಸಂಪತ್ತು, ದೇಶದ ಸಂಪತ್ತಾದ ಮಕ್ಕಳನ್ನು ಉತ್ತಮ ಹಾದಿಯಲ್ಲಿ ನಡೆಯುವಂತೆ ನಮ್ಮೆಲ್ಲರ ಪ್ರೋತ್ಸಾವಿರಲಿ.
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!