ಎರಡು ಕೈಗಳನ್ನು ಆ ಭಗವಂತನು ನಮಗೆ ಕೊಟ್ಟಿದ್ದಾನೆ ಎಂದರೆ ಬರಿಯ ತಿಂದುಣ್ಣಲು ಮಾತ್ರವಲ್ಲ. ಕಷ್ಟ ಕಾಲದಲ್ಲಿ  ಒಳ್ಳೆಯ ಹೃದಯವಂತರಿಗೆ ನೆರವಾಗುವುದು ಮನಸ್ಸು ಮತ್ತು ಕೈಗಳಿಂದ. ಕಾಯಕದ ಮಹತ್ವ ಸಾರಿದರೆ ಸಾಕೇ? ಸಾಲದು ಕೆಲಸ ಮಾಡಲು ಕೈಗಳು ಬೇಕು. ಬೆವರಿಳಿಸಿ ಸಂಪಾದಿಸಿದ್ದರಲ್ಲಿ ಕೊಂಡು ಸಂತೋಷದಿಂದ ಉಂಡು ತೃಪ್ತಿಗೊಳ್ಳಲು ಕೈ ಬೇಕು. ಯಾರಿಗೋ ಹಿಂಸೆ ನೀಡಲು, ಕಡಿ ಬಡಿ ಕೊಲ್ಲಲು ಕೈಗಳನ್ನು ಬಳಸಬಾರದು. ಅದೆಲ್ಲ ಕೆಟ್ಟ, ನೀಚ ಕೆಲಸಗಳು. 'ಶರಣಾಗತರ ರಕ್ಷಣೆ ಅತ್ಯಂತ ಪವಿತ್ರ ಕಾರ್ಯವಂತೆ'ಭಗವಂತ ನಮಗೆ ಅಭಯವನ್ನು ನೀಡುತ್ತಾನೆಂಬ ನಂಬಿಕೆ. ಶಿವಶಂಕರನ ಕೈಯ ತ್ರಿಶೂಲ, ವಿಷ್ಣುವಿನ ಕೈಯ ಸುದರ್ಶನ ಚಕ್ರ ದುಷ್ಟರ ಧಮನಕ್ಕಾಗಿ .ಶಿಷ್ಟರ ರಕ್ಷಣೆ, ದುಷ್ಟರ ನಿಗ್ರಹ ಭಗವಂತನ ಕೈಯಲ್ಲಿದೆ. ಸಮಯ, ಸಂದರ್ಭ ನೋಡಿ ಮಾಡಬೇಕಾದ್ದನ್ನು ಮಾಡಿಯೇ ತೀರುತ್ತಾನೆ. ನಮಗೆ ತಡೆಯುವ ಶಕ್ತಿಯಿಲ್ಲ ಅಲ್ಲವೇ? ಈ ಜಗತ್ತೇ ಭಗವಾನ್ ಮಯ. ಹೇಗೆ? ಎಲ್ಲಿಂದ ಬಂತೆಂಬುದು ನಮಗೆ ಬೇಡ. ನಾವು ಇಲ್ಲಿ ಜನಿಸಿದ ಮೇಲೆ ನಮ್ಮದಾದ ಕರ್ತವ್ಯ ಮಾಡಬೇಕು. ಬದುಕಿ ಬಾಳಲು ದುಡಿಮೆ ಬೇಕೇ ಬೇಕು. ಕೈಕಾಲುಗಳು ಗಟ್ಟಿಮುಟ್ಟಾಗಿ, ಆರೋಗ್ಯವಾಗಿರುವಾಗ ಅನ್ಯರತ್ತ ಕೈಚಾಚಬಾರದು. 'ನಮ್ಮ-ನಮ್ಮ ಊಟ.' ಕೈಗಳು -ನಮ್ಮ ದುಡಿಮೆ. ಸಾಗರದ ಅಲೆ ಎಂದೂ ಬೇಸರ ಮಾಡದೆ ತನ್ನ ಕೆಲಸವನ್ನು ನಿರಂತರ ಮಾಡುವುದಲ್ಲವೇ? ಬಿಸಿಲು, ಮಳೆ, ಚಳಿಗಂಜಲಾರದದು. 'ಅಂಜಿ ಕುಳಿತವ ಕೆಟ್ಟ' ಮಾತಿದೆ. 'ಧೈರ್ಯವೇ ಸರ್ವತ್ರ ಸಾಧನಂ' ಭಯ, ಅಂಜಿಕೆ ಎಲ್ಲ ನೆಪ ಮಾತ್ರ,ಇರುವಷ್ಟು ದಿನ ದೇವನಿತ್ತ ಕೈಗಳಿಂದ ದುಡಿದು ಊಣ್ಣೋಣ, ಏನಾದರೂ ಸಾಧಿಸೋಣ. 

-ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ