" ಸಾಧ್ಯವಾಗುವುದಾದರೆ, ಅವಕಾಶವಿರುವುದಾದರೆ ದೊಡ್ಡ ಕೆಲಸಗಳನ್ನು ದೊಡ್ಡದಾಗಿಯೇ ಮಾಡಿ. ಅದು ಸಾಧ್ಯವಾಗದಿದ್ದರೆ ಸಣ್ಣ ಕೆಲಸಗಳನ್ನು ದೊಡ್ಡದಾಗಿ ಮಾಡಿ... " ಭಾರತ ರತ್ನ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಸಂತ ಮದರ್ ತೆರೆಸಾ.
ಗೌರಿಬಿದನೂರಿನ ಬಳಿಯ ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದೇ ಹೆಸರಾದ ವಿದುರಾಶ್ವಥದಲ್ಲಿ ಡಿವೈಎಫ್ಐ ಅವರ ಜಾಥಾದ ಉದ್ಘಾಟನಾ ಕಾರ್ಯಕ್ರಮ, ರಾಯಚೂರು ಜಿಲ್ಲೆ ಜಾಲಹಳ್ಳಿಯಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಪ್ರಶಸ್ತಿ ವಿಜೇತ ಶಿಕ್ಷಕರಸನ್ಮಾನ ಕಾರ್ಯಕ್ರಮ, ಕೊಡಗು ಜಿಲ್ಲೆಯ ಕುಶಾಲನಗರದ ಸಮಾಜ ಸೇವಕರು, ಆತ್ಮೀಯ ಮಿತ್ರರು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀ ವಿ. ಪಿ. ಶಶಿಧರ್ ಅವರ ಸನ್ಮಾನ ಕಾರ್ಯಕ್ರಮ, ಬಿಜಾಪುರ ಜಿಲ್ಲೆ ಮುದ್ದೇಬಿಹಾಳದ ಬಿದರಕುಂದಿಯ ನಾಯ್ಕೋಡಿ ಶಿಕ್ಷಕ ಸಂಸ್ಥೆಯ ಶ್ರೀ ಅಬ್ದುಲ್ ರೆಹಮಾನ್ ಬಿದರಕುಂದಿ ಅವರು ಪ್ರತಿ ವರ್ಷದಂತೆ ಈ ವರ್ಷವೂ ಅಕ್ಟೋಬರ್ ಎರಡರಂದು ಆಯೋಜಿಸಿದ್ದ ನಿವೃತ್ತ ಶಿಕ್ಷಕರ ಸನ್ಮಾನ, ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಈ ರೀತಿ ನಿರಂತರ ಕಾರ್ಯಕ್ರಮಗಳ ಕಾರಣದಿಂದ ಎರಡು ವಾರಗಳಿಂದ ಶ್ರಮದಾನ ಮಾಡಲು ಸಾಧ್ಯವಾಗಿರಲಿಲ್ಲ.
ನಿನ್ನೆ ಅಂದರೆ ದಿನಾಂಕ 4.10. 2026ರ ಭಾನುವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪಂಡಿತಪುರ ಗ್ರಾಮದಲ್ಲಿ ಶ್ರಮದಾನ 6 ಕಾರ್ಯಕ್ರಮ ಮಾಡಲಾಯಿತು. ದೇವನಹಳ್ಳಿಯ ಮಾಜಿ ಶಾಸಕರು, ನನ್ನ ಹಿತೈಷಿಗಳು, ಇತ್ತೀಚಿನ ಕೆಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮಾನ್ಯ ಶ್ರೀ ಪಿಳ್ಳ ಮುನಿಶಾಮಪ್ಪ ಅವರ ಹುಟ್ಟೂರು ಪಂಡಿತಪುರದಲ್ಲಿ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ, ಊರಿನ ಸ್ವಚ್ಛತಾ ಕಾರ್ಯಕ್ರಮ ಮತ್ತು ಅವರು ಇತ್ತೀಚೆಗೆ ಪ್ರಾರಂಭಿಸಿರುವ ನೊವಾರ ಸೀನಿಯರ್ ಲಿವಿಂಗ್ ಎಂಬ ವೃದ್ಧಾಶ್ರಮದಲ್ಲಿ ಒಂದಷ್ಟು ಮಾತುಕತೆ. ಹೀಗೆ ಇಡೀ ದಿನ ಶ್ರಮಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು.
ಪಂಡಿತಪುರದ ಕೆಲವು ಜನ ಹಿರಿಯರ ಸಮ್ಮುಖದಲ್ಲಿ ಕಾರ್ಯಕ್ರಮ ಪ್ರಾರಂಭವಾಯಿತು. ತಮ್ಮ ಊರಿನ ಐವತ್ತು ವರ್ಷಗಳ ಹಿಂದಿನ ಜನಜೀವನ ಬೆಳೆದು ಬಂದ ಬಗೆಯನ್ನು ಶ್ರೀ ಪಿಳ್ಳ ಮುನಿಶಾಮಪ್ಪನವರು ನೆನಪು ಮಾಡಿಕೊಂಡರು. ಅವರು ಶಾಸಕರಾಗಿದ್ದಾಗ ನಮ್ಮ ಸ್ವಂತ ಊರಿಗೆ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಈಗಿನ ವ್ಯವಸ್ಥೆ ಸಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ನಂತರ ಮಾನವಿಯ ಮೌಲ್ಯಗಳ ಕುಸಿತ, ಯುವ ಜನಾಂಗದ ದಾರಿ ತಪ್ಪುವಿಕೆ, ಮುಂದೆ ಕೈಗೊಳ್ಳಬೇಕಾದ ಕ್ರಮಗಳು, ಆರೋಗ್ಯದ ಬಗ್ಗೆ ಕಾಳಜಿ, ಊರಿನ ಸ್ವಚ್ಛತೆಯ ಬಗ್ಗೆ ಒಂದಷ್ಟು ಹಿತನುಡಿಗಳನ್ನು ಹೇಳಿದೆನು. ತದನಂತರ ಪರಿಸರ ಮತ್ತು ನೀರಿನ ಬಗ್ಗೆ ಹಲವಾರು ವರ್ಷಗಳಿಂದ ಜಾಗೃತಿ ಮೂಡಿಸುತ್ತಿರುವ ಹಿರಿಯರಾದ ದೊಡ್ಡಬಳ್ಳಾಪುರದ ಶ್ರೀ ಗುರುದೇವ್ ಅವರು ತುಂಬಾ ಮಾರ್ಮಿಕವಾಗಿ ಪರಿಸರ ಸಂರಕ್ಷಣೆಯ ಬಗ್ಗೆ ಮಾತನಾಡಿದರು.
ತದನಂತರ ಊರಿನ ದೇವಸ್ಥಾನದ ರಸ್ತೆ, ಶಾಲಾ ಆವರಣ ಸ್ವಚ್ಛತಾ ಕಾರ್ಯಕ್ರಮವನ್ನು ಗ್ರಾಮದ ಕೆಲವು ಯುವಕರು ಮತ್ತು ಹತ್ತಿರದಲ್ಲೇ ಇದ್ದ ಕೆಲವು ಕಾರ್ಮಿಕರ ನೆರವಿನಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಎಲ್ಲರಿಗೂ ಈ ಕೆಲಸ ತೃಪ್ತಿ ನೀಡಿತು. ತಿಂಗಳಲ್ಲಿ ಒಂದು ಬಾರಿಯಾದರೂ ಊರಿನ ಜನ ತಮ್ಮ ಊರನ್ನು ಸ್ವಚ್ಛಗೊಳಿಸಿಕೊಳ್ಳುವ ಸಲಹೆ ನೀಡಲಾಯಿತು. ಹೀಗೆ ಪ್ರತಿ ಊರಿನ ಜನರು ತಮ್ಮ ವಾಸ ಸ್ಥಳಗಳನ್ನು ಪ್ರತಿ ತಿಂಗಳಿಗೊಮ್ಮೆ ಕೇವಲ ಎರಡು ಮೂರು ಗಂಟೆಗಳನ್ನು ವ್ಯಯಿಸಿ ಸ್ವಚ್ಛ ಮಾಡುವುದಾದರೆ ನಿಜಕ್ಕೂ ದೇಶದ ನೈಜ ಅಭಿವೃದ್ಧಿಯಲ್ಲಿ ಇದೂ ಒಂದು ಭಾಗವಾಗಬಹುದು. ತದನಂತರ ಎಲ್ಲರಿಗೂ ಒಳ್ಳೆಯ ಊಟವನ್ನು ಶ್ರೀ ಪಿಳ್ಳ ಮುನಿಶಾಮಪ್ಪನವರು ಏರ್ಪಡಿಸಿದ್ದರು. ನಂತರ ಅವರೊಂದಿಗೆ ಚರ್ಚಿಸುತ್ತಾ ನಿನ್ನೆಯ ಶ್ರಮಧಾನ ಮುಗಿಸಿದೆವು.
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!