ಭಾರತದ ಲಕ್ಷಗಟ್ಟಲೆ ಮನೆಗಳ ಬಾಲಕ-ಬಾಲಕಿಯರಿಗೆ ಮಹಾಭಾರತ, ರಾಮಾಯಣ, ಪುರಾಣ ಹಾಗೂ ಇತಿಹಾಸದ ಕತೆಗಳನ್ನು ಮನಮುಟ್ಟುವಂತೆ ತಿಳಿಸಿದ “ಅಮರ ಚಿತ್ರ ಕಥಾ” ಪುಸ್ತಕಗಳ ಓದುಗರಿಗೂ ಅಭಿಮಾನಿಗಳಿಗೂ ಒಂದು ಆಘಾತಕಾರಿ ಸುದ್ದಿ: 1ಅಕ್ಟೋಬರ್ 2025ರಂದು ಆ ಪುಸ್ತಕ ಸರಣಿಯ ಸುಮಾರು ಆರು ಲಕ್ಷ ಪುಸ್ತಕಗಳು ಬೆಂಕಿ ಅವಘಡದಲ್ಲಿ ನಾಶವಾದವು.

ಮುಂಬಯಿಯ ಭಿವಂಡಿಯಲ್ಲಿರುವ “ಅಮರ ಚಿತ್ರ ಕಥಾ” ಉಗ್ರಾಣದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟಿನಿಂದಾಗಿ ಭುಗಿಲೆದ್ದ ಬೆಂಕಿಯ ಜ್ವಾಲೆಗಳು ಪುಸ್ತಕಗಳನ್ನು ಮಾತ್ರವಲ್ಲ, ಸುಮಾರು 200 ಮೂಲ ವರ್ಣ ಚಿತ್ರಗಳನ್ನೂ ಸುಟ್ಟು ಹಾಕಿದವು. ಅಗ್ನಿಶಾಮಕ ದಳದ ಸಿಬ್ಬಂದಿಗೆ ಆ ಬೆಂಕಿ ನಂದಿಸಲು ನಾಲ್ಕು ದಿನಗಳು ತಗಲಿದವು ಎಂದರೆ ಬೆಂಕಿಯ ವ್ಯಾಪಕತೆಯನ್ನು ನೀವು ಊಹಿಸಿಕೊಳ್ಳಬಹುದು.

ಅಮರ ಚಿತ್ರ ಕಥಾ ಸರಣಿಯ ಪುಸ್ತಕಗಳ ಪ್ರಕಟಣೆ ಆರಂಭವಾದದ್ದು 1967ರಲ್ಲಿ. ಈಗ ಆರು ದಶಕಗಳ ನಂತರವೂ ಈ ಸರಣಿಯ ಪುಸ್ತಕಗಳು ಜನಪ್ರಿಯತೆಯನ್ನು ಉಳಿಸಿಕೊಂಡಿರುವುದು ಗಮನಾರ್ಹ.

ಬೆಂಕಿಗೆ ಆಹುತಿಯಾದ ಪುಸ್ತಕಗಳಲ್ಲಿ, ಮಕ್ಕಳ ಅಚ್ಚುಮೆಚ್ಚಿನ ಚಿತ್ರಮಯ ಮ್ಯಾಗಝಿನ್ “ಟಿಂಕಲ್”ನ ಸಂಚಿಕೆಗಳು ಮತ್ತು ರಟ್ಟಿನ ಬಾಕ್ಸುಗಳಲ್ಲಿದ್ದ ವಿಶೇಷ ಸಂಪುಟಗಳೂ ಸೇರಿವೆ. 1960 ಮತ್ತು 1970 ದಶಕಗಳಲ್ಲಿ ಕೈಯಿಂದ ರಚಿಸಲಾದ ಸುಮಾರು 200 ವರ್ಣಚಿತ್ರಗಳಿಗೆ ಬೆಂಕಿಯಿಂದ ಹಾನಿಯಾಗಿರುವುದು ದೊಡ್ಡ ನಷ್ಟ. ಪಾರದರ್ಶಕ ಫಿಲ್ಮುಗಳಲ್ಲಿದ್ದ ಮೂಲ “ಪಾಸಿಟಿವ್”ಗಳೂ ನಾಶವಾಗಿವೆ.

“ಬಹುಪಾಲು ಪಾಸಿಟಿವ್-ಗಳನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಿಸಿ ಇಡಲಾಗಿದೆ. ಆದರೆ ಕೈಯಿಂದ ಚಿತ್ರಿಸಲಾದ ಮೂಲ ಆರ್ಟ್ ವರ್ಕ್-ಗಳನ್ನು ವೇರ್-ಹೌಸಿನಲ್ಲಿ ಇಡಲಾಗಿತ್ತು. ಅವು ನಾಶವಾಗಿವೆ. ಅವುಗಳಿಗೆ ಬೆಲೆ ಕಟ್ಟಲಾಗದು” ಎನ್ನುತ್ತಾರೆ ಅಮರ ಚಿತ್ರ ಕಥಾ ಪುಸ್ತಕಗಳು ಮತ್ತು ಟಿಂಕಲ್ ಮ್ಯಾಗಝಿನ್ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥೆ ದಾಮಿನಿ ಬಾತಂ.

“ಈಗಲೂ ಅಮರ ಚಿತ್ರ ಕಥಾ ಪುಸ್ತಕ ಕಂಡೊಡನೆ ಅದನ್ನು ಗುರುತಿಸಲು ಸಾಧ್ಯ. ಮಕ್ಕಳಲ್ಲಿ ಪುಸ್ತಕ ಪ್ರೀತಿ ಬೆಳೆಸುವಲ್ಲಿ ಈ ಪುಸ್ತಕಗಳು ಪಾತ್ರ ಬಹಳ ಮುಖ್ಯ. ಸರಳ ಭಾಷೆ ಮತ್ತು ಆಕರ್ಷಕ ಚಿತ್ರಗಳ ಮೂಲಕ ಈ ಪುಸ್ತಕಗಳು ಗ್ರಹಿಸಲು ಕಷ್ಟವಾದ ಕತೆಗಳನ್ನು ಸುಲಭ ಓದಿಗೆ ಒದಗಿಸಿದವು” ಎಂಬುದು ಬರಹಗಾರ ಮತ್ತು ಕಾಮಿಕ್ ಪುಸ್ತಕಗಳ ಅಭಿಮಾನಿ ಗಣೇಶ್ ಮಟ್ಕರಿ ಅವರ ಹೇಳಿಕೆ.

ಅಮರ ಚಿತ್ರ ಕಥಾ ಸರಣಿಯ ಪುಸ್ತಕಗಳನ್ನು ಆರಂಭಿಸಿದವರು ದಿವಂಗತ ಅನಂತ ಪೈ. ಅವರು ಟೈಮ್ಸ್ ಆಫ್ ಇಂಡಿಯಾ ಪತ್ರಿಕಾ ಕಚೇರಿಯಲ್ಲಿ ಜ್ಯೂನಿಯರ್ ಇಂಜಿನಿಯರ್ ಆಗಿದ್ದರು. ಆ ಪತ್ರಿಕೆಯ ಮಾಲೀಕತ್ವದ “ಇಂದ್ರಜಾಲ ಕಾಮಿಕ್ಸ್”ನಲ್ಲಿ ಅವರ ಉದ್ಯೋಗ. ಅದು, ಅಮೆರಿಕನ್ ಬರಹಗಾರ ಲೀ ಫಾಕ್ ರೂಪಿಸಿದ ಜನಪ್ರಿಯ ಕಾಲ್ಪನಿಕ ಹೀರೋಗಳಾದ ಫ್ಯಾಂಟಮ್ ಮತ್ತು ಮಾಂಡ್ರೆಕ್ ಅವರ ಕಾಮಿಕ್ ಪುಸ್ತಕಗಳನ್ನು ಪ್ರಕಟಿಸುತ್ತಿತ್ತು.

ಅನಂತ ಪೈ ಅವರಿಗೆ ಅಮರ ಚಿತ್ರ ಕಥಾ ಸರಣಿಯ ಐಡಿಯಾ ಮೂಡಿದ್ದು ಆಕಸ್ಮಿಕವಾಗಿ - ಡೆಲ್ಲಿಯ ಒಂದು ಟೆಲಿವಿಷನ್ ಮಾರಾಟ ಮಳಿಗೆಯಲ್ಲಿ ಟೆಲಿವಿಷನಿನಲ್ಲಿ ಪ್ರಸಾರವಾಗುತ್ತಿದ್ದ ಒಂದು ಕ್ವಿಜ್ ನೋಡುತ್ತಿದ್ದಾಗ. ಆಗ ಅವರು ಗಮನಿಸಿದ ಸಂಗತಿ: ಕ್ವಿಜ್-ನಲ್ಲಿ ಭಾಗವಹಿಸಿದ್ದ ಮಕ್ಕಳು ಗ್ರೀಕ್ ಪುರಾಣಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಆದರೆ ಭಾರತದ ಪುರಾಣಗಳು ಮತ್ತು ಮಹಾಕಾವ್ಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಆಗಲೇ ಅವರು ನಿರ್ಧರಿಸಿದರು: ಭಾರತದ ಪ್ರಾಚೀನ ಕತೆಗಳು ಮತ್ತು ದಂತಕಥೆಗಳನ್ನು ಆಧರಿಸಿದ ಕಾಮಿಕ್ ಪುಸ್ತಕಗಳನ್ನು ಪ್ರಕಟಿಸಬೇಕೆಂದು. (2012ರಲ್ಲಿ, ಅನಂತ ಪೈ ಅವರ ನಿಧನದ ಒಂದು ವರುಷದ ನಂತರ ಪ್ರಕಟವಾದ ಅವರ ಜೀವನಕಥೆಯಲ್ಲಿ ಈ ಸಂಗತಿ ದಾಖಲಿಸಲಾಗಿದೆ.)

ಮೊದಲ ಹತ್ತು ಪುಸ್ತಕಗಳಲ್ಲಿ ಪ್ರಕಟವಾದದ್ದು ಪಾಶ್ಚಾತ್ಯ ದಂತಕತೆಗಳಾದ ಸಿಂಡ್ರೆಲ್ಲಾ, ಸ್ನೋವೈಟ್ ಇತ್ಯಾದಿ ಕತೆಗಳು. ಸರಣಿಯ 11ನೇ ಪುಸ್ತಕದ ಕತೆ ಹಿಂದೂ ದೇವರಾದ ಶ್ರೀಕೃಷ್ಣನದು. ರಾಮ ವೀರ್-ಕರ್ ಚಿತ್ರಗಳನ್ನು ರಚಿಸಿದ್ದ  ಆ ಪುಸ್ತಕವು, ಅಮರ ಚಿತ್ರ ಕಥಾ ಸರಣಿಯ ಪುಸ್ತಕಗಳು ಹೇಗಿರಬೇಕು ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಒದಗಿಸಿತು.

ನಾಜೂಕಾದ ರೇಖೆಗಳು, ಭಾವತುಂಬಿದ ಮುಖಗಳು ಮತ್ತು ನಾಟಕೀಯ ಚಿತ್ರ ಸಂಯೋಜನೆಗಳಿದ್ದ ರಾಮ ವೀರ್-ಕಾರ್ ಅವರ ಚಿತ್ರಗಳು ಓದುಗಳ ಮನಗೆದ್ದವು. ಅನಂತರ ಅವರು ಅಮರ ಚಿತ್ರ ಕಥಾ ಸರಣಿಯ 90 ಪುಸ್ತಕಗಳಿಗೆ ಚಿತ್ರಗಳನ್ನು ಬರೆದರು!

ದ್ವಾಪರ ಯುಗದ ಶ್ರೀಕೃಷ್ಣನ ಪುಸ್ತಕದ ಯಶಸ್ಸು ಶ್ರೀರಾಮ, ಹನುಮಂತ, ಭೀಷ್ಮ, ಶಕುಂತಲೆ, ಸಾವಿತ್ರಿ, ಬುದ್ಧ, ಚಾಣಕ್ಯ, ಶಿವಾಜಿ ಮಹಾರಾಜ, ಅಶೋಕ ಹಾಗೂ ಇತರರ ಪೌರಾಣಿಕ ಮತ್ತು ಚಾರಿತ್ರಿಕ ಕತೆಗಳನ್ನು ಆಧರಿಸಿದ ಪುಸ್ತಕಗಳನ್ನು ಸರಣಿಯಲ್ಲಿ ಪ್ರಕಟಿಸಲೂ ಪ್ರೇರಣೆಯಾಯಿತು.

1970ರಲ್ಲಿ ಅನಂತ ಪೈ ಅವರು ಮಕ್ಕಳ ಸಚಿತ್ರ ಮ್ಯಾಗಝಿನ್ “ಟಿಂಕಲ್” ಶುರು ಮಾಡಿದರು. ಇದಂತೂ ಮಕ್ಕಳ ಅಚ್ಚುಮೆಚ್ಚಿನ ಮ್ಯಾಗಝಿನ್ ಆಗಿ ಜನಪ್ರಿಯವಾಯಿತು. ಅದರ ಕತೆಗಳ ಪಾತ್ರಗಳಾದ ಸುಪ್ಪಂಡಿ ಮತ್ತು ಶಿಕಾರಿ ಶಂಭು ಜನಜನಿತವಾದವು.

ಅಮರ ಚಿತ್ರ ಕಥಾ ಸರಣಿಯ ಪುಸ್ತಕಗಳು ಮತ್ತು ಟಿಂಕಲ್ ಮ್ಯಾಗಝಿನಿನ ಪ್ರಕಟಣೆ ಮುಂದುವರಿದಿದೆ. ಇವು ಇಂಗ್ಲಿಷ್, ಹಿಂದಿ, ತಮಿಳು, ಮಲೆಯಾಳಿ, ಬೆಂಗಾಲಿ ಹಾಗೂ ಇತರ ಹಲವು ಭಾಷೆಗಳಲ್ಲಿ ಪ್ರಕಟವಾಗುತ್ತಿವೆ. ಲಕ್ಷಗಟ್ಟಲೆ ಕುಟುಂಬಗಳು ಮತ್ತು ಸಾವಿರಾರು ಶಾಲೆಗಳು ಮಕ್ಕಳಿಗೆ ಭಾರತದ ಪರಂಪರೆಯನ್ನು ತಿಳಿಸಲು ಈ ಪುಸ್ತಕಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿವೆ. ಈಗ ಪ್ರತಿ ವರುಷ ಇವುಗಳ 45 ಲಕ್ಷ ಮುದ್ರಿತ ಪ್ರತಿಗಳು ಮಾರಾಟವಾಗುತ್ತಿವೆ. ಅದಲ್ಲದೆ, ಆಪ್-ಗಳ ಮೂಲಕ ಜಾಗತಿಕವಾಗಿ 5 ಲಕ್ಷ ಓದುಗರು ಈ ಪ್ರಕಟಣೆಗಳನ್ನು ಓದುತ್ತಿದ್ದಾರೆ.

“ನಾವು ಈ ಆಘಾತದಿಂದ ಚೇತರಿಸಿಕೊಂಡು ಪುಟಿದು ನಿಲ್ಲುತ್ತೇವೆ” ಎನ್ನುತ್ತಾರೆ ಅಮರ ಚಿತ್ರ ಕಥಾದ ಸಂಪಾದಕಿ ರೀನಾ ಪುರಿ. “1994ರಲ್ಲಿಯೂ ಇಂತಹದೇ ಬೆಂಕಿ ಅವಘಡದಿಂದಾಗಿ ನಮಗೆ ನಷ್ಟವಾಗಿತ್ತು. ಆಗ ಅಮರ ಚಿತ್ರ ಕಥಾ ಪುಸ್ತಕಗಳನ್ನು ಪ್ರಕಟಿಸುತ್ತಿದ್ದ ಇಂಡಿಯಾ ಬುಕ್ ಹೌಸಿನ ಮುಂಬಯಿಯ ಆಫೀಸಿನಲ್ಲಿದ್ದ 3,000 ರೆಫರೆನ್ಸ್ ಪುಸ್ತಕಗಳು ಮತ್ತು ಆರ್ಟ್ ವರ್ಕ್-ಗಳು ಬೆಂಕಿಯಿಂದ ನಾಶವಾಗಿದ್ದವು. ನಮ್ಮ ಓದುಗರ ಪ್ರೀತಿ ಮತ್ತು ಸಿಬ್ಬಂದಿ ತಂಡದವರ ಸಂಕಲ್ಪದಿಂದಾಗಿ ನಾವು ಆಗಿನ ಹಿನ್ನಡೆಯಿಂದ ಎದೆಗುಂದದೆ ಮುಂದೆ ಸಾಗಿ ಬಂದೆವು” ಎಂದು ಅವರು ವಿವರಿಸುತ್ತಾರೆ. ಇದೀಗ ಡಿಜಿಟಲ್ ಪ್ಲಾಟ್-ಫಾರಂಗಳ ಆವಿಷ್ಕಾರಗಳ ಮೂಲಕ ಮುನ್ನಡೆಯಲು ಒಂದು ಅವಕಾಶ ಒದಗಿದೆ ಎಂಬುದು ಅವರ ಅಭಿಪ್ರಾಯ.

ಇವೆಲ್ಲ ಬೆಳವಣಿಗೆಗಳು ಎಲ್ಲ ಪುಸ್ತಕ ಪ್ರಕಾಶಕರಿಗೂ ಒಂದು ಎಚ್ಚರಿಕೆಯ ಗಂಟೆ. ಅವರು ತಮ್ಮತಮ್ಮ ವೇರ್-ಹೌಸುಗಳಲ್ಲಿ ಆಧುನಿಕ ಹೊಗೆಪತ್ತೆ ಮತ್ತು ಬೆಂಕಿಪತ್ತೆ ಉಪಕರಣಗಳನ್ನು ಅಳವಡಿಸಿಕೊಳ್ಳಲೇ ಬೇಕು. ಎಲ್ಲ ಮೂಲಪ್ರತಿಗಳನ್ನು ಡಿಜಿಟಲ್ ರೂಪದಲ್ಲಿ  ಜೋಪಾನ ಮಾಡುವುದಂತೂ ಅನಿವಾರ್ಯ.

ಕೃಪೆ: ಕಥಾ ಪುಸ್ತಕಗಳ ಮುಖಪುಟಗಳು: ಅಮರ ಚಿತ್ರ ಕಥಾ ವೆಬ್-ಸೈಟ್