ಆಹಾರ ತಯಾರಿಸುವುದು ಎಂದಾಗೆಲ್ಲ ಬೆಂಕಿಯಲ್ಲಿ ಬೇಯಿಸಿ ಆಹಾರ ತಯಾರಿಸುವುದು ತಟ್ಟನೆ ನೆನಪಾಗುತ್ತದೆ. ಆದರೆ, ಬೆಂಕಿಯಿಲ್ಲದೆ ಆಹಾರ ತಯಾರಿಸುವುದರ ಬಗ್ಗೆ ನಮಗೆಲ್ಲರಿಗೂ ಗೊತ್ತಿದೆ, ಅಲ್ಲವೇ? ಯಾಕೆಂದರೆ, ಅವಲಕ್ಕಿ, ಸಲಾಡ್, ತಂಬುಳಿಗಳು, ಮೊಸರವಲಕ್ಕಿ, ಮೊಸರು ಸಲಾಡ್, ಹಣ್ಣಿನ ರಸಗಳು, ಪಾನಕಗಳು ಇವನ್ನೆಲ್ಲ ನಾವು ಚಪ್ಪರಿಸಿ ತಿಂದಿದ್ದೇವೆ.
ಮಕ್ಕಳಿಗೆ ಬಾಲ್ಯದಲ್ಲಿಯೇ ಇವನ್ನು ತಯಾರಿಸುವುದನ್ನು ಕಲಿಸಿದರೆ, ಅವರ ಜೀವನದುದ್ದಕ್ಕೂ ಇದು ಸಹಾಯಕ್ಕೆ ಬರುತ್ತದೆ. ಈಗಿನಂತೆ (ಫೆಬ್ರವರಿ 2026ರಿಂದ) ಅಡುಗೆ-ಅನಿಲ ಮತ್ತು ಕಚ್ಚಾ ತೈಲದ ಸರಬರಾಜಿಗೆ ಯುದ್ದದಿಂದಾಗಿ ತೊಂದರೆ ಆದಾಗ, ಅಡುಗೆ ಅನಿಲದ ಕೊರತೆ ಉಂಟಾದರೆ ನಾವೆಲ್ಲರೂ ಅಡುಗೆ-ಅನಿಲದ ಬಳಕೆ ಕಡಿಮೆ ಮಾಡಲೇ ಬೇಕಾಗುತ್ತದೆ. ಆಗಂತೂ ಅಗ್ನಿರಹಿತ ಆಹಾರ ತಯಾರಿಯ ಜ್ಞಾನ ವರವಾಗುತ್ತದೆ, ಅಲ್ಲವೇ? (ಹೆಣ್ಣು-ಮಕ್ಕಳಿಗೂ, ಗಂಡು-ಮಕ್ಕಳಿಗೂ)
ಪ್ರಕೃತಿದತ್ತವಾದ ಮತ್ತು ತಾಜಾ ಹಣ್ಣು-ತರಕಾರಿ, ಮೊಸರು, ಮಜ್ಜಿಗೆ ಇತ್ಯಾದಿಗಳಿಂದ ಬೆಂಕಿಯ ಸಹಾಯವಿಲ್ಲದೆ ತಯಾರಿಸಿದ ಇವು ನಮ್ಮ ಆರೋಗ್ಯಕ್ಕೂ ಉತ್ತಮ. ಇಂತಹ ಕೆಲವು ಅಗ್ನಿರಹಿತ ಆಹಾರದ ತಯಾರಿ ವಿಧಾನ ತಿಳಿದುಕೊಳ್ಳೋಣ.
ಅ)ಮೊಸರು ಅವಲಕ್ಕಿ: ಅವಲಕ್ಕಿಯಲ್ಲಿ ಎರಡು ವಿಧ: ಗಟ್ಟಿ-ಅವಲಕ್ಕಿ ಮತ್ತು ತೆಳು-ಅವಲಕ್ಕಿ. ಮೊಸರವಲಕ್ಕಿ ಮಾಡಲು ಗಟ್ಟಿ ಅವಲಕ್ಕಿ ಸೂಕ್ತ. ಇದನ್ನು ನೀರಿನಲ್ಲಿ ತೊಳೆದು, ಸುಮಾರು 10-15 ನಿಮಿಷ ಅಂದರೆ ಅದು ಮೆತ್ತಗಾಗುವ ವರೆಗೆ ನೀರಿನಲ್ಲಿ ನೆನಸಿಡಬೇಕು. ಇದಕ್ಕೆ ಗಟ್ಟಿ ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಹಸಿಶುಂಠಿ ತುಂಡುಗಳು ಮತ್ತು ಹಸಿ ಮೆಣಸಿನಕಾಯಿ ಸೇರಿಸಬೇಕು. ಇವನ್ನೆಲ್ಲ ಚೆನ್ನಾಗಿ ಬೆರೆಸಿದರೆ, ರುಚಿಯಾದ ಮೊಸರವಲಕ್ಕಿ ತಯಾರು.
ಆ)ಅವಲಕ್ಕಿ: ಇದಂತೂ ಭಾರತದ ಹಲವೆಡೆಗಳಲ್ಲಿ ಜನಪ್ರಿಯ ಆಹಾರ. ಹಿಂದಿಯಲ್ಲಿ ಅವಲಕ್ಕಿಗೆ “ಪೋಹಾ” ಎನ್ನುತ್ತಾರೆ. ಇದರ ತಯಾರಿ ಬಹಳ ಸುಲಭ. ಒಂದು ದುಂಡಗಿನ ಪಾತ್ರೆಯಲ್ಲಿ ಸಾಕಷ್ಟು ತೆಳು-ಅವಲಕ್ಕಿ ಹಾಕಿ. (ಎಲ್ಲವನ್ನೂ ಚೆನ್ನಾಗಿ ಕೈಯಿಂದ ಬೆರೆಸಲು ದುಂಡಗಿನ ಪಾತ್ರೆ ಅನುಕೂಲ.) ಇದಕ್ಕೆ ತುರಿದ ತೆಂಗಿನಕಾಯಿ ಹಾಕಿ, ಕೈಯಿಂದ ಚೆನ್ನಾಗಿ ನುರಿಯಬೇಕು. ಆಗ ತೆಂಗಿನಕಾಯಿಯ ಹಾಲಿನಂಶದೊಂದಿಗೆ ತೆಳು-ಅವಲಕ್ಕಿ ಬೆರೆತು ಮೆತ್ತಗಾಗುತ್ತದೆ. ನಂತರ ಈರುಳ್ಳಿ ತುಂಡುಗಳು, ಹಸಿಶುಂಠಿ ತುಂಡುಗಳು, ಅರ್ಧ-ತುಂಡು ನಿಂಬೆಹಣ್ಣಿನ ರಸ, ರುಚಿಗೆ ತಕ್ಕಷ್ಟು ಉಪ್ಪು - ಇವನ್ನು ಹಾಕಿ, ಚೆನ್ನಾಗಿ ಬೆರೆಸಬೇಕು. ಈಗ ರುಚಿರುಚಿಯಾದ ಅವಲಕ್ಕಿ ತಿನ್ನಲು ತಯಾರು.
ಇ)ಮೊಳಕೆ ಕಾಳು, ತರಕಾರಿ ಚೂರುಗಳ ಮಿಶ್ರಣ: ಮೊಳಕೆ ಬರಿಸಿದ ಹೆಸರು ಕಾಳು ಅಥವಾ ನಿಮ್ಮ ಆಯ್ಕೆಯ ಬೇರೆ ಮೊಳಕೆ ಕಾಳುಗಳನ್ನು ಒಂದು ದುಂಡಗಿನ ಪಾತ್ರೆಯಲ್ಲಿ ಹಾಕಬೇಕು. ಇದಕ್ಕೆ ಎರಡು ಟೊಮೆಟೊ, ಎರಡು ಕ್ಯಾರೆಟ್ ಮತ್ತು ಒಂದು ಸೌತೆಕಾಯಿ ತುಂಡುತುಂಡು ಮಾಡಿ ಸೇರಿಸಬೇಕು (ಕ್ಯಾರೆಟ್ ತುರಿದು ಹಾಕಬಹುದು.) ನಂತರ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ-ತುಂಡು ನಿಂಬೆಹಣ್ಣಿನ ರಸ ಮತ್ತು ಎರಡು ಚಿಟಿಕೆ ಜೀರಿಗೆ ಪುಡಿ ಬೆರೆಸಬೇಕು. ಒಂದು ಮುಷ್ಟಿ ದಾಳಿಂಬೆ ಹಣ್ಣಿನ ಕಾಳುಗಳನ್ನು ಸೇರಿಸಿದರೆ ಇನ್ನೂ ಚೆನ್ನ. ಇವನ್ನೆಲ್ಲ ಚೆನ್ನಾಗಿ ಬೆರೆಸಿದರೆ ತಾಜಾ ಆಹಾರ ತಯಾರು.
ನಿಮ್ಮ ಅಜ್ಜಿ ಅಥವಾ ಹಿರಿಯರ ಜೊತೆ ಕುಳಿತು ಕೇಳಿದರೆ ಸುಮಾರು 50 - 60 ಇಂತಹ ಅಗ್ನಿರಹಿತ ಆಹಾರ ತಯಾರಿಸುವ ವಿಧಾನವನ್ನು ಖಂಡಿತವಾಗಿ ತಿಳಿಸುತ್ತಾರೆ. ಅವನ್ನು ಒಂದು ಟಿಪ್ಪಣಿ-ಪುಸ್ತಕದಲ್ಲಿ (ನೋಟ್-ಬುಕ್) ಬರೆದಿಟ್ಟುಕೊಳ್ಳಿ.
ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗ (ರಿ.) 2026ರ ಆರಂಭದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ “ಅಗ್ನಿರಹಿತ ಆಹಾರ ತಯಾರಿ ಸ್ಪರ್ಧೆ”ಇಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು 20 ವಿವಿಧ ಅಗ್ನಿರಹಿತ ಆಹಾರಗಳನ್ನು ತಯಾರಿಸಿದ್ದರು. ಆದ್ದರಿಂದ, ಎಲ್ಲ ವಿದ್ಯಾರ್ಥಿಗಳು ಇವುಗಳ ತಯಾರಿ ವಿಧಾನವನ್ನು ಈ ಬೇಸಗೆ ರಜೆಯಲ್ಲಿ ಸುಲಭವಾಗಿ ಕಲಿಯಬಹುದು.
25 ಅಗ್ನಿರಹಿತ ಆಹಾರಗಳ ಪಟ್ಟಿ:
(1 - 5) ಹಣ್ಣುಗಳ ಸಲಾಡ್, ಬಾಳೆಹಣ್ಣು-ಜೇನುತುಪ್ಪ ಮಿಶ್ರಣ, ಟೊಮೆಟೊ-ಸೌತೆಕಾಯಿ ಸಲಾಡ್, ತುರಿದ ತೆಂಗಿನಕಾಯಿ-ಬೆಲ್ಲ ಮಿಶ್ರಣ, ಮೊಳಕೆ ಕಡಲೆ-ಸೌತೆಕಾಯಿ ಸಲಾಡ್,
(6 - 10) ಶೆಂಗಾ-ಬೆಲ್ಲ ಮಿಶ್ರಣ, ಟೊಮೆಟೊ-ಈರುಳ್ಳಿ ಸಲಾಡ್, ಒಣ-ಹಣ್ಣುಗಳ ಲಾಡು (ಒಣ-ದ್ರಾಕ್ಷಿ, ಖರ್ಜೂರ, ಗೇರುಬೀಜ ಇತ್ಯಾದಿ), ಶೆಂಗಾ-ಸೌತೆಕಾಯಿ ಸಲಾಡ್, ಕ್ಯಾರೆಟ್-ಕೊತ್ತಂಬರಿ ಸಲಾಡ್,
(11 - 15) ಸೇಬು-ಬಾಳೆಹಣ್ಣು ಸಲಾಡ್, ಪಪ್ಪಾಯಿ-ಕಲ್ಲಂಗಡಿ ಸಲಾಡ್, ಮೊಳಕೆ ಹೆಸರುಕಾಳು-ಹಣ್ಣುಗಳ ಸಲಾಡ್, ಕ್ಯಾರೆಟ್-ಬೀಟ್ರೂಟ್ ತುಂಡುಗಳ ಸಲಾಡ್, ಬಾಳೆಹಣ್ಣು-ಅನಾನಸ್-ಪಪ್ಪಾಯಿ ಸಲಾಡ್,
(16 - 20) ನೆನಸಿದ ಓಟ್ಸ್-ಮೊಸರು, ಮೊಳಕೆ ಮಟಕಿ ಸಲಾಡ್, ಗೇರುಬೀಜ - ನೆನಸಿದ ಬಾದಾಮಿ - ನೆನಸಿದ ನೆಲಗಡಲೆ ಮಿಶ್ರಣ, ಆಲೂಗಡ್ಡೆ-ಶೇಂಗಾ ಸಲಾಡ್, ಕರಬೂಜ ಹಣ್ಣಿನ ಸಲಾಡ್,
(21 - 25) ಬೇಲ್-ಪುರಿ, ಮೊಸರು (ದಹಿ) ಪುರಿ, ಸೇವ್-ಪುರಿ, ಮಜ್ಜಿಗೆ (ವಿವಿಧ ರುಚಿಗಾಗಿ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಇತ್ಯಾದಿ ಬೆರಸಬೇಕು.), ವಿವಿಧ ಪಾನಕಗಳು (ಲಿಂಬೆ ಇತ್ಯಾದಿ)
ಫೋಟೋ 1: ಮೊಳಕೆಕಾಳು - ತರಕಾರಿಗಳ ಸಲಾಡ್
ಫೋಟೋ 2: ಮೊಳಕೆ ಬರಿಸಿದ ಹೆಸರುಕಾಳು
ಫೋಟೋ 3: ಈರುಳ್ಳಿ - ಟೊಮೊಟೊ -ಸೌತೆಕಾಯಿ - ಸೊಪ್ಪುಗಳ ಸಲಾಡ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!