ಶೋಕ, ದುಃಖ, ಚಿಂತೆಗಳು ನಮ್ಮ ಧೈರ್ಯವನ್ನು ನಾಶಮಾಡುತ್ತವೆ. ನಮ್ಮಲ್ಲಿರುವ ಪಾಂಡಿತ್ಯವನ್ನು ಹಾಳುಮಾಡುವುದು. ನಮ್ಮ ಸರ್ವಸ್ವವೂ ಹಾಳಾಗಬಹುದು. ಎಲ್ಲವೂ ಹೋದ ಮೇಲೆ ನಾವು ಬದುಕಿ ಏನು ಪ್ರಯೋಜನವಿಲ್ಲ. ಇಡೀ ದಿನ ನಾವು ಸಿಟ್ಟಲ್ಲಿಯೇ ಬುಸುಗುಟ್ಟುತ್ತಾ, ಯೋಚಿಸುತ್ತಾ ಇದ್ದರೆ ನಮಗೆ ರಕ್ತದೊತ್ತಡ ಸಕ್ಕರೆ ಕಾಯಿಲೆ ಅಥವಾ ಇನ್ಯಾವುದೋ ರೋಗ ಬರಲು ನಾವೇ ಆಹ್ವಾನ ಕೊಟ್ಟ ಹಾಗೆ ಆಗಬಹುದು. ಏನೂ ಬೇಕಾದರೂ ಆಗಲಿ ಎಂದು ಆದಷ್ಟೂ ಸರಿಯಾದ ದಾರಿಯಲ್ಲಿ ನಡೆಯಲು ಪ್ರಯತ್ನಿಸಿ, ಸರಿಯಾದ್ದನ್ನು ಮಾತ್ರ ಸ್ವೀಕರಿಸಿ ಮುಂದಕ್ಕೆ ಹೆಜ್ಜೆ ಊರಲು ಪ್ರಯತ್ನಿಸಿದರೆ ಸ್ವಲ್ಪ ದಿನ ನೆಮ್ಮದಿಯಲ್ಲಿರಬಹುದು. ನಗು ಎನ್ನುವುದು ಅಮೃತವಿದ್ದ ಹಾಗೆ. ಒಂದಷ್ಟು ಪುಸ್ತಕಗಳನ್ನು ಓದಿದಾಗ ಮನಸ್ಸು ಹಗುರವಾಗಬಹುದು. ಆತ್ಮೀಯರೊಡನೆ ಸಂಭಾಷಣೆ ಹರಟೆ ನಗು ಸಹ ದೇಹಕ್ಕೆ ಟಾನಿಕ್ ಇದ್ದಂತೆ. ಆದಕಾರಣ ಚಿಂತೆಯನ್ನು ಮಾಡುತ್ತಾ, ಕೋಪವನ್ನು ಗೆಳೆಯನನ್ನಾಗಿ ಮಾಡದೆ ಆಯುಷ್ಯ ಕಳೆಯುವುದು ಬೇಡ. ಸಿಟ್ಟು, ರಾಗ, ದ್ವೇಷವೆಂಬ ವಿಷಕಾರಿಗಳನ್ನು ತ್ಯಜಿಸೋಣ. ಸುಭಾಷಿತವೊಂದರಲ್ಲಿ ನಾವು ಈ ರೀತಿ ಓದಬಹುದು.

*ಶೋಕೋ ನಾಶಯತೇ ಧೈರ್ಯಂ* *ಶೋಕೋ ನಾಶಯತೇ* *ಶ್ರುತಮ್|*

*ಶೋಕೋ ನಾಶಯತೇ ಸರ್ವಂ ನಾಸ್ತಿ ಶೋಕಸಮೋ ರಿಪುಃ||*

ನಮ್ಮ ಉತ್ತಮ ಗುಣಗಳನ್ನು ಗಾಳಿಗೆ ನಾವೇ ತೂರುವುದು ಸರಿಯಲ್ಲ. ಕೋಪದ ಕೈಗೆ ಬುದ್ಧಿಯನ್ನು ಕೊಡದಿರೋಣ. ಯಾವುದೂ ಇಲ್ಲದ ಮೇಲೆ ನಾವಿದ್ದು ಪ್ರಯೋಜನವೇನು? ನಮ್ಮನ್ನು ನೋಡಿ ಇತರರು ಆಡಿಕೊಳ್ಳದಂತೆ ಜೀವಿಸಿದರೆ ಚಂದವಲ್ಲವೇ? ಶೋಕವೆಂಬ ಮಹಾಶತ್ರು ಹತ್ತಿರ ಸಹ ಬಾರದಂತೆ ಜಾಗ್ರತೆ, ಜಾಗೃತಿ ಎರಡೂ ವಹಿಸೋಣ.

-ರತ್ನಾ ಭಟ್ ತಲಂಜೇರಿ 

ಶ್ಲೋಕ: ಸರಳ ಸುಭಾಷಿತದಿಂದ