ಸ್ವಚ್ಛ ಮನಸ್ಸು ಹೊಂದಿದವರು ಮಾಡಿದ ತಪ್ಪನ್ನು ಒಪ್ಪಿ ಮುಂದೆ ಹೋಗುವ ಜಾಯಮಾನದವರು. ಅವರು ಉದ್ಧಟತನವನ್ನು ಎಂದೂ ತೋರಿಸಲಾರರು. ಹಾಗೆಂದು ಅವರ ತಲೆ ಮೇಲೆ ಗೂಬೆಕೂರಿಸಲು ಬಂದರೆ ಯಾವತ್ತೂ ಬಿಡಲಾರರು. ಮನಸ್ಸಿಗೆ ಘಾಸಿಯನ್ನು ನೀಡಿದವರನ್ನು ಮತ್ತೆ ಎಂದೂ ಸ್ವೀಕರಿಸಲಾರರು. ಒಂದು ವೇಳೆ ಅನಿವಾರ್ಯ ಸಂದರ್ಭದಲ್ಲಿ ಹತ್ತಿರ ಮಾಡಬೇಕೆಂದಾದರೆ ತೋರಿಕೆಯ ಮುಖವಾಡವಷ್ಟೆ. ನಿರ್ಮಲ, ಸ್ವಚ್ಛ ಅಂತಃಕರಣ, ಸಹಾಯಹಸ್ತ ನೀಡುವ, ಪರೋಪಕಾರಿಗಳಾಗಿರುವರು. ಸ್ವಾಭಿಮಾನವ ಕೆರಳಿಸಿದರೆ ಸಹಿಸಲಾರರು. ಸುಮ್ಮ ಸುಮ್ಮನೆ ಕೆಣಕುವುದು ಸರಿಯಲ್ಲ. ಅವರವರ ಪಾಡು ಅವರವರಿಗೆ. ಅನಗತ್ಯ ಒಬ್ಬರ ಜೀವನದಲ್ಲಿ ಪ್ರವೇಶಿಸಿ ಹುಳಿ ಹಿಂಡುವ ಕೆಲಸ ತರವಲ್ಲ. ಮನಸ್ಸು ಸ್ವಚ್ಛವಾಗಿದ್ದಷ್ಟೂ ಆರೋಗ್ಯಕರವಾಗಿರಬಹುದಲ್ಲವೇ?

ಆದರೆ ಮನಸ್ಸು ಸ್ವಚ್ಛವಾಗಿಲ್ಲದವರು ತಪ್ಪಿನ ಮೇಲೆ ತಪ್ಪು ಮಾಡುತ್ತಾ, ಇನ್ನೊಬ್ಬರ ಬಗ್ಗೆ ಆಡಿಕೊಳ್ಳುತ್ತಾ, ಹಂಗಿಸಿ ಹೀಯಾಳಿಸುತ್ತಾ, ತಾವೇ ತುಂಬಾ ತಿಳಿದವರು ಎಂಬ ಹಾಗೆ ಗೋಮುಖ ವ್ಯಾಘ್ರಗಳಂತೆ ನಟಿಸುತ್ತಾ, ಏನು ಹೇಳಲೂ ಹೇಸದೆ, ತಮ್ಮ ಮನಸ್ಸನ್ನೂ ಕೆಡಿಸಿಕೊಳ್ಳುತ್ತಾ, ಅನಾರೋಗ್ಯಕ್ಕೆ ತುತ್ತಾಗುವರು. ತಮ್ಮ ಬದುಕಿನ ದಿನಗಳು ಕಡಿಮೆಯಾಗುತ್ತಿರುವುದು ಅರಿವಿಗೆ ಬರುವುದೇ ಇಲ್ಲ. ಕಡೆಗೆ ಸೋತು ಬಾಳು ಮೂರಾಬಟ್ಟೆಯಾಗಿ ಒಂದು ದಿನ ಹೊಂಡಕ್ಕೆ ಬೀಳುವರು. ಆಗ ಅವರನ್ನು ವಿಚಾರಿಸಲು, ಕೈ ನೀಡಿ ಮೇಲೆತ್ತಲು, ಯಾರೂ ಬರಲಾರರು. ಹಾಗಾಗಿ ಇರುವಷ್ಟು ದಿನ ನಮ್ಮಿಂದ ಕೂಡಿದಷ್ಟು ಉತ್ತಮ ಕೆಲಸಕಾರ್ಯಗಳನ್ನು ಮಾಡಿಕೊಂಡು ಇರೋಣ. ಉಪಕಾರ ಮಾಡದಿದ್ದರೂ ತೊಂದರೆಯಿಲ್ಲ. ಉಪದ್ರ ಮಾಡುವುದು ಬೇಡ.

-ರತ್ನಾ ಭಟ್ ತಲಂಜೇರಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ