"ದೀವಾರ್" ಹಿಂದಿ ಸಿನೆಮಾದ ಸೂಪರ್ ಹಿಟ್ ಡಯಲಾಗ್-

 "ಮೇರೆ ಪಾಸ್ ಗಾಡಿ ಹೈ, ಬಂಗ್ಲಾ ಹೈ.... ತುಮಾರೆ ಪಾಸ್ ಕ್ಯಾ ಹೈ?" ಅಮಿತಾಬ್ ಪ್ರಶ್ನೆಗೆ, ಶಶಿಕಪೂರ್ "ಮೇರೆ ಪಾಸ್ ಮಾ ಹೈ" ಅನ್ನುವನು.

ತಂದೆತಾಯಿ ನನ್ನ ಜತೆ ಇದ್ದುದು ನನಗೆ ಹೆಮ್ಮೆಯ ವಿಷಯವಾಗಿತ್ತು. ದಿನವೂ ಬೆಳಗ್ಗೆ ತಂದೆ ತಾಯಿಯವರ ಜತೆ ಹರಟೆ ಹೊಡೆಯುತ್ತಾ ನಾಷ್ಟಾ ಮಾಡಿ, ಅವರ ಆಶೀರ್ವಾದ ಪಡೆದು ಕೆಲಸಕ್ಕೆ ಹೊರಡುತ್ತಿದ್ದೆ. ೨ ತಿಂಗಳ ಮೊದಲು  ಒಂದು ಬೆಳಗ್ಗೆ ನನ್ನ ತಾಯಿಗೆ ಎದೆನೋವು (ಹೃದಯದ ತೊಂದರೆಗೆ ಎರಡು ಬಾರಿ ಅಡ್ಮಿಟ್ ಆಗಿದ್ದರು) ಕಾಣಿಸಿದಾಗ ಕೂಡಲೇ ಆಸ್ಪತ್ರೆಗೆ ಸೇರಿಸಿದ್ದೆ.

ಮುಖಕ್ಕೆ ಆಕ್ಸಿಜನ್ ಮಾಸ್ಕ್, ಅಲ್ಲಲ್ಲಿ ವೈರ್‌ಗಳನ್ನು ಸಿಕ್ಕಿಸಿ ಕೈಯನ್ನೂ ಅಲ್ಲಾಡಿಸಲಾಗದ ಸ್ಥಿತಿಯಲ್ಲಿ ICU ನಲ್ಲಿದ್ದರು.

ಕೇವಲ ಬೆಳಗ್ಗೆ ಮತ್ತು ಸಂಜೆ ೫-೫ ನಿಮಿಷ ಭೇಟಿಯಾಗಲು ಬಿಡುತ್ತಿದ್ದರು. ತಾಯ ಕಣ್ಣೀರು ಒರಸಿ, ದುಃಖ ನುಂಗಿಕೊಂಡು "ಇನ್ನೇನು ರಿಪೋರ್ಟ್ ಸಿಕ್ಕಿದ ಕೂಡಲೇ ಇನ್ನೆರಡು ದಿನದಲ್ಲಿ ಡಿಸ್ಚಾರ್ಜ್ ಮಾಡುತ್ತಾರೆ" ಎಂದು ಹೇಳುವಷ್ಟರಲ್ಲಿ ನರ್ಸ್ ಅಥವಾ ಗೇಟ್ ಕೀಪರ್ ನಮ್ಮನ್ನು ಹೊರಕರೆಯುತ್ತಿದ್ದ. ಕೆಲಸಕ್ಕೆ ಹೋಗುವ ಸಮಯ ಬಿಟ್ಟು, ಹಗಲೂ, ರಾತ್ರಿಯೂ ಅಲ್ಲೇ ಹೊರಗೆ ಕಾದು ಕುಳಿತು/ಮಲಗಿ ಕಳೆದಿದ್ದೆ. ಅಲ್ಲಿದ್ದ ೧೬ ದಿನಗಳಲ್ಲಿ ಒಂದು ಅರ್ಧ ಘಂಟೆಯೂ ತಾಯಿ ಜತೆ ಕಳೆದಿರಲಿಲ್ಲ.

ಇದು ಪ್ರೈವೇಟ್ ಸ್ಪೆಷಾಲಿಟಿ ಆಸ್ಪತ್ರೆ.

ಇನ್ನು ಯೋಚಿಸಿ- ಸರಕಾರಿ ಆಸ್ಪತ್ರೆಯಲ್ಲಿ ಮೊದಲೇ ಜನಸಾಮಾನ್ಯರ ಬಗ್ಗೆ ನಿರ್ಲಕ್ಷ್ಯ ಜಾಸ್ತಿ. ಅಲ್ಲಿನ ICUಗೆ ಮಂತ್ರಿ, ಅವರ ಪಟ್ಲಾಮ್, ಪೋಲೀಸರು ಬಂದು ಸೇರಿದಾಗ ಹೇಗಿರಬಹುದು?

  ಸರಕಾರದ ಕಷ್ಟನೂ ನನಗರ್ಥವಾಗುತ್ತದೆ.

ಅದಕ್ಕೊಂದು ಪರಿಹಾರವಿಲ್ಲಿದೆ:-

ಹೈಕೋರ್ಟ್ ಹಿಂಬದಿಯಲ್ಲಿ ಕಬ್ಬನ್ ಪಾರ್ಕ್ ಇದೆಯಲ್ಲಾ. ಅಲ್ಲೊಂದು ಏ.ಸಿ., ಪಬ್, ಟಿ.ವಿ., ಸರ್ಟಿಫಿಕೇಟ್ ಕೊಡುವ ಡಾಕ್ಟ್ರುಗಳು, ಇತ್ಯಾದಿ ಇತ್ಯಾದಿಗಳಿಂದ ಸುಸಜ್ಜಿತವಾದ "ICU ಆಸ್ಪತ್ರೆ" ನಿರ್ಮಿಸುವುದು.

ಅದರ ಸುತ್ತಲೂ ಗಿಡ ಮರಗಳಿಗೆ ತೊಂದರೆಯಾಗದಂತೆ ಅಂಡರ್‌ಗ್ರೌಂಡ್‌ನಲ್ಲಿ ಗೂಂಡಾ ಭವನ. ಪಕ್ಕದಲ್ಲಿ ಚೇಲಾ ಪೋಲೀಸ್ ಕಚೇರಿ. ICU ನಿಂದ ಹೈಕೋರ್ಟ್‌‍ಗೆ ಹೋಗಲು ನೆಲದಡಿಯಲ್ಲಿ ದಾರಿ.(ಪತ್ರಕರ್ತರು,ಫೋಟೋಗ್ರಾಫರ್‌‍ಗಳ ಕಾಟ ತಪ್ಪಿಸಲು). ಪ್ರೆಸ್ ಕ್ಲಬ್ ತೆಗೆದು ಅಲ್ಲೊಂದು ಲಘು ವಿಮಾನ ನಿಲ್ದಾಣ.( ತೀರಾ ಅರೆಸ್ಟ್ ಆಗುವಂತಹ ಪರಸಂಗ ಬಂದರೆ ತಪ್ಪಿಸಿಕೊಳ್ಳಲು).

ಬಾಲಭವನ, ಮಕ್ಕಳ ಪಾರ್ಕ್, ಪ್ರೆಸ್ ಕ್ಲಬ್‌ಗಳಿಗೆ ಬೆಂಗಳೂರಿಂದ ೧೦೦ ಕಿ.ಮೀ.ಹೊರಗೆ ಸ್ಥಳ ಕಾದಿರಿಸಿದರಾಯಿತು.

-ಗಣೇಶ.