ಮೋಡ ಕವಿದ ಮಾತ್ರಕ್ಕೆ

ಸೂರ್ಯ ಮರೆಯಾಗಿ ಹೋಗುವನೆ?

ಕತ್ತಲು ಕವಿದ ಮಾತ್ರಕ್ಕೆ

ಚಂದ್ರ ಬೆಳಕ ನೀಡದಿರುವನೆ?

ಕತ್ತಲು ಬೆಳಕಿನ ಆಟವು

ನಿತ್ಯ ನಡೆಯುತ್ತಿರುವುದು

ಸೋಲು ಕಲಿಸಿದ ಪಾಠವು

ಅರಿತು ಮುಂದೆ ಸಾಗುವುದು

ಸುಖವೊಂದೇ ಬೇಕೆಂದರೆ ಹೇಗೆ ಇಲ್ಲಿ

ಕಷ್ಟದ ಚುಚ್ಚು ಮದ್ದು ಬೇಕು ಜೀವನದಲ್ಲಿ

ಉರಿಯಲ್ಲಿ ಬೆಂದ ಭೂಮಿಯೂ ಕೂಡ

ಮಳೆಯಲ್ಲಿ ತಣ್ಣಗಾಗುವುದು

ಚಳಿಯಲ್ಲಿ ಬರಿದಾದ ಮರವೂ ಕೂಡ

ವಸಂತದಲ್ಲಿ ಮತ್ತೆ ಚಿಗುರೊಡೆಯುವುದು

ಸೋಲು ಗೆಲುವು ಎರಡು

ಜೀವನ ರೈಲಿನ ಕಂಬಿ

ಆದರೂನೂ ಬದುಕು ಬರಡು

ಸಾಗಲಿ ಗುರಿ ಕಡೆ ಜೀವನದ ಬಂಡಿ

ನೋವಿನ ಕಹಿಗೆ ಕೊರಗುತ್ತ ಕುಂತರೆ ವ್ಯರ್ಥವಿಲ್ಲಿ

ನಂಬಿಕೆಯ ಅಮೃತವ ಸವಿಯಲು ತಿಳಿ ಜೀವನದಲ್ಲಿ

-ಕೆಕೆ (ಕೀರ್ತನ್ ಕೆ)