ನಿನ್ನಿಂದ ಭೂಮಿಗೆ ಬಂದೆ ನಾನಂದು
ನಿನ್ನ ಋಣವ ತೀರಿಸಲು ಆಗದು ಎಂದೆಂದು
ನವಮಾಸ ನೀ ನನ್ನ ಹೊತ್ತು ನಡೆದೆ
ಒಳಗಿದ್ದು ನಾ ನಿನಗೊದ್ದು ಇನ್ನಷ್ಟು ನೋವ ನೀಡಿದೆ
ನೋವಲ್ಲೂ ತಾಯಾಗೊ ನಲಿವಿನಲ್ಲಿ ನೀನಿದ್ದೆ
ಏನೂ ತಿಳಿಯದೆ ಅಳು ಅಳುತ್ತಾ ನಾ ಹೊರಗೆ ಬಿದ್ದೆ
ನನ್ನ ಅಳುವಿನಲ್ಲೂ ನೀನಾದಿನ ನಕ್ಕಿರುವೆಯಂತೆ
ನಿನ್ನ ಅಳುವನ್ನು ಅಡಗಿಸಿ ನನ್ನ ನಗುವಿನಲ್ಲಿ ನೀ ಮರೆತೆ ಚಿಂತೆ
ಅದೆಷ್ಟೋ ಸಲ ನೀನುಣದೆ ಉಪವಾಸವಿದ್ದೆ
ನಾ ತುಂಬಿದ ಹೊಟ್ಟೆಯಲ್ಲಿ ಇದನ್ನರಿಯದೆ ಮಲಗಿದ್ದೆ
ಹಗಲೆಲ್ಲ ನೀ ದುಡಿದು ನನ್ನ ಓದಿಸಿದೆ
ಎಲ್ಲ ತಿಳಿದವನಂತೆ ಏನೇನೋ ಹೇಳುತ್ತಾ ನಾ ನಿನ್ನ ನಿಂದಿಸಿದೆ
ಏನೂ ಓದದೆಯೂ ನೀನೆಲ್ಲ ಅರಿತಿದ್ದೆ
ನನ್ನ ಓದು ಅತಿಯಾಗಿ ಎಲ್ಲಾ ತಿಳಿದಿರುವೆ ಎಂಬ ಅಮಲಿನಲ್ಲಿದ್ದೆ
ನನಗಾಗಿ ನೀ ದುಡಿದು ನಿನ್ನ ಬದುಕು ಸವೆದಿದೆ
ನಿನಗೇನೂ ನಾನು ಮಾಡದೆ ದೂರದಿ ನಿನ್ನ ಇರಿಸಿದೆ
ಕಲ್ಮಶವಿರದ ಪ್ರೀತಿ ನಿನ್ನ ಮನಸ್ಸಿನಲ್ಲಿ ಇರುವುದು
ಇದನ್ನರಿಯದೆ ನಾನೇಕೆ ಹೊರಗದನ್ನು ಹುಡುಕುತ್ತಿದ್ದೆನು
ನನ್ನ ತಪ್ಪು ಅರಿವಾಗಿ ಕಣ್ಣಲ್ಲಿ ನೀರು ಬರುತ್ತಿರುವುದು
ತಿಳಿದಿದೆ ನನಗೆ ನೀನು ಅತ್ತು ಅತ್ತು ನಿನ್ನ ಕಣ್ಣ ಕೊಳ ಬತ್ತಿರುವುದು
ಸುಡಲಿ ನನ್ನ ಮನಸ್ಸು ಪಶ್ಚಾತ್ತಾಪದ ಉರಿಯಲ್ಲಿ
ಮುಗಿಯದ ಋಣ ಭಾರವ ನಾನೇ ಹೊರುವೆ ಮುಂದಿನ ಜನ್ಮದಲ್ಲಿ
-ಕೆಕೆ (ಕೀರ್ತನ್ ಕೆ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!