ನಿಲ್ಲದ ತುಂತುರು ನೀನು
ಮಳೆಯಲ್ಲಿ ನಾ ನೆನೆಯಲೇನು ?
ಕಾಣುವ ದೇವತೆ ನೀನು
ನಾ ನಿನ್ನ ಧ್ಯಾನಿಸಲೇನು ?
ಬಲು ಮೋಹಕ ರೂಪಸಿ ನೀನು
ನಿನ್ನ ನಾ ಮೋಹಿಸಲೇನು ?
ಅತಿ ಕೋಪಿಸಿಕೊಳ್ಳುವೆ ನೀನು
ನಾ ನಿನ್ನ ಮುದ್ದಿಸಲೇನು ?
ಧರೆಗಿಳಿದ ರತಿ ದೇವಿಯೇ ನೀನು
ನಾ ನಿನ್ನ ಮನ್ಮಥನಾಗಲೇನು ?
ಬತ್ತದ ಮಕರಂದದ ಹೂವು ನೀನು
ದುಂಬಿಯಾಗಿ ಹೀರಲು ಬರಲೇನು ?
ಜಿಂಕೆಯ ಕಣ್ಣೋಳು ನೀನು
ನಿನ್ನ ನಾ ಹಿಂಬಾಲಿಸಲೇನು ?
ಕೋಗಿಲೆಯ ದನಿಯೋಳು ನೀನು
ಮಾತಿನ ಮಾಧುರ್ಯಕ್ಕೆ ತನ್ಮಯನಾಗಲೇನು ?
ಕುಣಿಯುವ ನವಿಲು ನೀನು
ನಟರಾಜ ನಾನಾಗಲೇನು ?
ಮರುಭೂಮಿಯ ಮರೀಚಿಕೆ ನೀನು
ನಿನಗಾಗಿ ನಾ ಅಲೆಯಲೇನು ?
ಹಗಲಲ್ಲಿ ಸಿಗಲಾರೆ ನೀನು
ಇರುಳ ಕನಸಲ್ಲಿ ನಿನ್ನ ಕಾಣಲೇನು ?
ಸಿಹಿ ಪದಗಳ ಕವಿಗೆ ನೀಡಿದೆ ನೀನು
ಪ್ರೇಮಾಮೃತವ ನಾ ಬೇಡಲೇನು ?
- ಕೆಕೆ (ಕೀರ್ತನ್ ಕೆ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!