ಮುಖದಲ್ಲಿ ಹಾಗೆಯೆ ಮುಗುಳು ನಗೆ ಮೂಡುವುದು

ನಾ ನಿನ್ನ ಸನಿಹವಿರುವಂತೆ ಕಲ್ಪಿಸಿಕೊಂಡು

ನನ್ನ ಕಣ್ಣ ಕಾಂತಿ ಹೆಚ್ಚಾದಂತೆ ಕಾಣುವುದು

ದಿನವೂ ನೀನು ನನ್ನ ಕನಸಿನಲ್ಲಿ ಕಾಣಿಸಿಕೊಂಡು

ಉಸಿರಾಟವೇಕೋ ಏರುಪೇರಾದಂತಿದೆ

ನಿನ್ನ ಉಸಿರು ನನಗೆ ಸೋಕದೆ

ಹೃದಯ ಬಡಿತವೇ ಆಗಾಗ ನಿಲ್ಲುತ್ತಿದೆ

ನಿನ್ನ ಹೃದಯದ ಮಿಡಿತ ಕೇಳಿಸದೆ

ಕನಸಿನಲ್ಲಿ ನೀನು ಜೊತೆಗಿರಲು ನಾನು ಒಂಟಿತನ ಮರೆತೆ

ಮಂದಹಾಸದಿ ಪ್ರಾಸ ನೀಡುವ ನೀನೊಂದು ಪ್ರೇಮ ಚರಿತೆ

ಕಣ್ಣ ರೆಪ್ಪೆಯು ಮುಚ್ಚಲೊಲ್ಲೆ ಎನ್ನುತ್ತಿದೆ

ನಿನ್ನ ನೋಟದ ಊಟ ಸಿಗದೆ

ಮನದಲ್ಲಿ ವಿರಹದ ಕಿಡಿ ಕಿಚ್ಚಾಗಿ ಉರಿದಿದೆ

ನಿನ್ನ ಸಲುಗೆಯ ಸರಸವಿರದೆ

ನೆನೆಯುತ್ತ ನಿನ್ನ ಬರೆಯುತ್ತಿರುವೆ ಪ್ರೇಮದ ಕವಿತೆ

ಕಲ್ಪನೆಯ ಚಿತ್ತಾರಕ್ಕೆ ಕಾಡಿದೆ ನೀನಿರದ ಕೊರತೆ

-ಕೆಕೆ (ಕೀರ್ತನ್ ಕೆ)