ಕಣ್ಣ ಅಂಚಲ್ಲಿ ನಿಂತ ಕಂಬನಿ
ಕೇಳುತ್ತಿದೆ ಜಾರಿ ಬಿಡಲೇ ?
ಇಲ್ಲ ಒಳಗೆ ಇಂಗಿ ಬಿಡಲೇ ?
ತುಟಿ ಅಂಚಿಗೆ ಬಂದ ಪದವ
ಜೋರಾಗಿ ಹೇಳಿ ಬಿಡಲೇ ?
ಇಲ್ಲ ತುಟಿಗಚ್ಚಿ ಸುಮ್ಮನಿರಲೇ ?
ಜಾರುವ ಕಣ್ಣ ಹನಿಯ ಒರೆಸಲು
ಕೈಗಳಿಗೂ ಯಾಕೋ ಬೇಸರ
ಆಡುವ ಮಾತು ಕೇಳಿಸಿಕೊಳ್ಳಲು
ಕಿವಿಗಳಿಗೂ ಬಂದಿದೆ ಬರ
ಮನದ ಪುಸ್ತಕದಿ ಮೂಡಿದ ವಾಕ್ಯಗಳ
ತಿಳಿಯಲು ಗಾಢವಾಗಿ ಯೋಚಿಸಲೇ ?
ಇಲ್ಲ ಅರಿಯಲಾಗದೆಂದು ಬಿಟ್ಟು ಬಿಡಲೇ ?
ಸಮಚಿತ್ತಕ್ಕೆ ಕತ್ತಿ ಮಸೆಯುತ್ತಿರುವ ಭಾವನೆಗಳ
ವಿರುದ್ಧವೀಗ ಏಕಾಂಗಿಯಾಗಿ ಹೋರಾಡಲೇ ?
ಇಲ್ಲ ಭಯದಿ ಮೊದಲೇ ಶರಣಾಗಲೇ ?
ಯೋಚಿಸಿದರೂ ಆಲೋಚಿಸಿದರೂ
ಮುಗಿಯದಷ್ಟು ಕಾಡಿದೆ ಅರ್ಥವಿರದ ಬರಹ
ಗೆದ್ದರೂ ಕ್ಷಣಿಕವೆಂಬಂತಿದೆ
ಕೊನೆಯಿರದ ಭಾವನೆಗಳ ಕಲಹ
-ಕೆಕೆ (ಕೀರ್ತನ್ ಕೆ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!