ಸಂಪದದ ಗೆಳೆಯರಿಗಾಗಿ ಈ ಬಾರಿ ಕನ್ನಡದ ಕವಿ ಡಾ|| ಜಿ ಎಸ್ ಶಿವರುದ್ರಪ್ಪನವರ ಸಂದರ್ಶನ. ತಾವು ಅನೇಕರು ಜಿ ಎಸ್ ಎಸ್ ಅವರ ಎಷ್ಟೋ ಕವಿತೆಗಳನ್ನು ಓದಿದ್ದೀರಿ, ಹಾಡುಗಳನ್ನ ಕೇಳಿದ್ದೀರಿ, ಕನ್ನಡದ ತುಂಬ ಜನ ಪ್ರೀತಿಯನ್ನು ಗಳಿಸಿಕೊಂಡಿರುವ, ನಮ್ಮ ಎಷ್ಟೋ ಭಾವನೆಗಳಿಗೆ ಮಾತನ್ನು ಕೊಟ್ಟಿರುವ ಬಹಳ ಮುಖ್ಯವಾದ ಕವಿ ಅವರು. ಮೊನ್ನೆ ತಾನೆ, ಅಂದರೆ ಫೆಬ್ರುವರಿ ೭ನೇ ತಾರೀಖು ನಮ್ಮ ಜಿ ಎಸ್ ಎಸ್ ಅವರಿಗೆ ೮೦ ವರ್ಷ ತುಂಬಿ, ಈಗ ೮೧ರ ಹರೆಯಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ನಡೆದ ಈ ಸಂದರ್ಶನದಲ್ಲಿ:

೧. ಕಾವ್ಯೋದ್ಯಮ ಶುರು ಮಾಡಿದ್ದು, ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಿದ್ದು, ಬಾಲ್ಯ

೨. ಕಾವ್ಯಗಳಲ್ಲಿ 'ಕತ್ತಲು ಬೆಳಕು' ಈ ಸಂಗತಿಗಳ ಬಗ್ಗೆ ನಮ್ಮೊಡನೆ ಸಂವಾದ ನಡೆಸಿದ್ದಾರೆ.

ಅಷ್ಟೇ ಅಲ್ಲದೆ, ಅಂತರಜಾಲದ ಕನ್ನಡಿಗರಿಗಾಗಿ ತಮ್ಮ ನೆಚ್ಚಿನ ಮೂರು ಕವನಗಳನ್ನೂ ಓದಿ, ತಮ್ಮ ಧ್ವನಿಯಲ್ಲೇ ನಮ್ಮೆಲ್ಲರೊಂದಿಗೆ ಹಂಚಿಕೊಂಡಿದ್ದಾರೆ.

>ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ.

(೨೮ MB) ಸಂದರ್ಶನದ ವೇಳೆ ತೆಗೆದ ಕೆಲವು ಫೋಟೋಗಳು:

___LINK_OPEN_href="/gss_oln"___gss-oln
___LINK_OPEN_href="/dr_g_s_shivarudrappa"___Dr G S Shivarudrappa

ಪ್ರಶ್ನೆ ೧
ಸರ್ ತಮ್ಮ ಕಾವ್ಯೋದ್ಯಮ ಮತ್ತು ಕಾವ್ಯಯಾನದ ಬಗ್ಗೆ ಸಂಪದದ ಗೆಳೆಯರಿಗೆ ಹೇಳಿ
ಉತ್ತರ
ಎಂಭತ್ತರ ಹಂತದಲ್ಲಿ ನಿಂತು ನಡೆದುಬಂದ ದಾರಿಯೆಡೆಗೆ ನೋಡುವ ಅವಕಾಶವನ್ನು ಮಾಡಿಕೊಟ್ಟ ಸಂಪದಕ್ಕೆ ನನ್ನ ಧನ್ಯವಾದಗಳು. ನನ್ನ ಕಾವ್ಯಯಾನ ಪ್ರಾರಂಭವಾದದ್ದು, ಅದಕ್ಕೆ ದೊರೆತ ಪ್ರೇರಣೆ ಮತ್ತು ನಾನು ಕವಿಯಾದದ್ದು ಹೇಗೆ? ಎಂಬ ವಿವರಗಳು ಸ್ವಾರಸ್ಯವಾಗಿವೆ. ಶ್ರೀ ರಾಮಕೃಷ್ಣ ಪರಮಹಂಸರ ದೃಷ್ಟಾಂತವೊಂದನ್ನ ಇಲ್ಲಿ ನೆನೆಸಿಕೊಳ್ಳಬೇಕಿದೆ. ಇರುವೆಯೊಂದು ಸಕ್ಕರೆಯ ಪರ್ವತದ ಬಳಿ ಹೋಯ್ತಂತೆ. ಒಂದು ಚೂರು ಸಕ್ಕರೆಯನ್ನ ಕಚ್ಚಿಕೊಂಡು ತನ್ನ ಗೂಡಿಗೆ ಮರಳಿಹೋಗುವ ಸಂದರ್ಭದಲ್ಲಿ ಅದು ಮನದಲ್ಲಿ ಅಂದುಕೊಳ್ತಂತೆ ’ ಈಗ ಸಕ್ಕರೆ ಬೆಟ್ಟದಿಂದ ಒಂದು ಚೂರು ಸಕ್ಕರೆಯನ್ನ ಒಯ್ದಿದ್ದೇನೆ ಮುಂದೆ ಇಡೀ ಪರ್ವತವನ್ನೇ ಸಾಗಿಸಿಬಿಡ್ತೀನಿ’ ಅಂತ.

ಜೀವನವನ್ನ ಕುರಿತು ಜನ ಹೀಗಂದುಕೊಳ್ತಾರೆ. ಅಗಾಧವಾದ ಜೀವನದ ಸವಿಯನ್ನ ಒಂದೇ ಚೂರು ಸವಿದು ಮುಂದೆ ಇಡೀ ಜೀವನದ ಸವಿಯನ್ನು ಸವಿಯುತ್ತೇನೆ ಎಂಬ ಭ್ರಮೆಯಲ್ಲಿ ಇರುತ್ತಾರೆ. ಸಾಹಿತ್ಯ ಬದುಕನ್ನು ಅರ್ಥಮಾಡಿಕೊಳ್ಳುವ, ಗ್ರಹಿಸುವ, ಅರಿವಿಗೆ ತಂದುಕೊಳ್ಳುವ ಒಂದು ವಿಧಾನ. ನನ್ನ ಕಾವ್ಯ ಜೀವನ ಅರಂಭವಾದ ಬಗೆಯನ್ನ ನೆನಪಿನ ಪ್ರತೀಕಗಳು ಎಂದು ಹೇಳಬಹುದಾದ ಪ್ರಸಂಗಗಳಿಂದ ಆರಂಭಿಸುತ್ತೇನೆ. ಒಂದು ನಾನು ಬಾಲ್ಯದಲ್ಲಿ ಕಂಡ ಕುಂಬಾರರ ಕೇರಿಯ ತಿರುಗು ಚಕ್ರ, ತಿರುಗುಚಕ್ರದ ಮಧ್ಯೆ ಇರುವ ಮಣ್ಣಿನ ಮುದ್ದೆ ಕುಂಬಾರನ ಕೈಚಳಕದಲ್ಲಿ ವಿವಿಧ ಸ್ವರೂಪಗಳನ್ನು ಪರಿವರ್ತಿತವಾಗುವುದನ್ನ ನೋಡಿದಾಗ ಕವಿತೆ ಹುಟ್ಟುವುದು ಹೀಗೆ ಅನ್ನಿಸಿತ್ತು. ವಸ್ತುದ್ರವ್ಯದಿಂದ ಕವಿಯ ಕಲ್ಪನೆಯಲ್ಲಿ ವಿವಿಧ ರೂಪಗಳಲ್ಲಿ ಹುಟ್ಟುವುದು ವಿಸ್ಮಯವಾಗಿ ಕಂಡಿತ್ತು. ಮತ್ತೊಂದು ನೆನಕೆ ನೇಕಾರರ ಮನೆಯಲ್ಲಿ ಉದ್ದಕ್ಕೂ ಹಾಸಿಕೊಂಡ ನೂಲಿನ ಎಳೆಗಳು ನೇಕಾರನ ಕೈ ಚಳಕದಿಂದ ಬಣ್ಣ ಬಣ್ಣದ ಬಟ್ಟೆಯಾಗಿ ಮಾರ್ಪಾಡುವ ಪವಾಡ ಆಕರ್ಷಕವಾಗಿ ತೋರಿತ್ತು. ಭಾವದ್ರವ್ಯ ವೊಂದು ನಮ್ಮ ಮನಸ್ಸಿನ ಮಗ್ಗದಲ್ಲಿ ಕಲ್ಪನೆಯ ಲಾಳಿಯಲ್ಲಿ ಪಡೆಯುವ ರೂಪ ಕವಿತೆಯ ಹುಟ್ಟು. ಮತ್ತೊಂದು ಪ್ರತೀಕ ತೆಂಗಿನ ಮರಗಳದ್ದು. ಉಳಿದ ಮರಗಳಂತೆ ಯಾವುದೇ ಋತುವಿಲಾಸಕ್ಕೆ ಒಳಪಟ್ಟದ್ದಲ್ಲ. ಮಾಗಿಯಕಾಲದಲ್ಲಿ ಎಲೆಯ ಉದುರುವಿಕೆ ಚೈತ್ರದಲ್ಲಿ ಚಿಗುರುವಿಕೆಯಂಥ ಪರಿಪಾಠಗಳಿಲ್ಲ. ತೆಂಗಿನ ಮರಗಳನ್ನು ನೋಡಿದಾಗಲೆಲ್ಲಾ , ಇನ್ನೇನು ಈಗಲೋ ಆಗಲೋ ಗರಿಬಿಚ್ಚಿ ಹಾರಲು ಸಿದ್ಧವಾದ ಒಂಟಿಕಾಲಿನ ಪಕ್ಷಿ ಅಂತ ಭಾಸವಾಗುತ್ತೆ, ಎತ್ತರಕ್ಕೆ ನಿಂತು ಗರಿಬಿಚ್ಚಿ ಕಾಯ್ಗಳನ್ನು ತುಂಬಿನಿಂತ ನಿಲುವು ಆಕರ್ಷಣೀಯವಾಗಿ ತೋರುತ್ತೆ. ಹಾರಲು ಸಿದ್ಧವಾಗಿ ನಿಂತ ನಿಲುವು ಬುದ್ಧ ಕ್ರಿಸ್ತರನ್ನು ನೆನಪಿಗೆ ತಂದು ದೇವರ ಕಲ್ಪನೆಯನ್ನು ನನ್ನಲ್ಲಿ ಹುಟ್ಟು ಹಾಕಿಬಿಡುತ್ತದೆ.

ಇನ್ನು ನನ್ನಲ್ಲಿ ಕವಿತೆ ಹುಟ್ಟಿಕೊಂಡದ್ದು ಹೇಗೆ ಅನ್ನೋ ಪ್ರಶ್ನೆಗೆ ಉತ್ತರ ನನಗೆ ಗೊತ್ತಿಲ್ಲ. ಎಳೆಯಂದಿನ ದಿನಗಳಲ್ಲಿ ಕುವೆಂಪು ಬೇಂದ್ರೆ ಕುಮಾರವ್ಯಾಸರ ಕಾವ್ಯಗಳನ್ನ ಕಿವಿಯ ಮೇಲೆ ಕೇಳಿದೆ. ಆ ಲಯ ಕಲ್ಪನೆ ನನ್ನಲ್ಲಿ ಕವಿತೆಯನ್ನು ಬರೆಯಲು ಪ್ರೇರೇಪಿಸಿರಬಹುದು. ಆಗ ಬರೆದದ್ದು ಇರುವೆಯೊಂದು ತನ್ನ ಮರಿಗೆ ಈಜು ಕಲಿಸಲು ಹೋದದ್ದನ್ನ ಕವಿತೆಯ ರೂಪದಲ್ಲಿ ಬರೆದೆ. ನಂತರ ತುಮಕೂರಿನ ಇಂಟರ್ಮೀಡಿಯೇಟ್ ತರಗತಿಯೊಳಗೆ ನಡೆದ ಒಂದು ಘಟನೆ, ಅಧ್ಯಾಪಕರೊಬ್ಬರು ಥಾಮಸ್ ಗ್ರೇ ನ ಒಂದು ಪದ್ಯವನ್ನ ಪಾಠ ಮಾಡ್ತಿದ್ರು ಅದರ ಹೆಸರು Elegy return on countries Church Yard (http://www.blupete.com/Literature/Poetry/Elegy.htm) ಅದರಲ್ಲಿನ ಒಂದು ಭಾಗ ನನ್ನನ್ನ ಬಹುವಾಗಿ ಆಕರ್ಷಿಸಿತು. ಕಾಡಿನಲ್ಲಿ ಅನೇಕ ಮುತ್ತು ರತ್ನಗಳು ಅಡಗಿವೆ ಹೂಗಳು ಅರಳಿ ಉದುರುತ್ತಿವೆ. ಹೀಗೆ ಅನೇಕ ಪ್ರತಿಭಾ ವಿಶೇಷಗಳು ವ್ಯರ್ಥವಾಗ್ತಿವೆ ಅನ್ನೋದು ಕವಿತೆಯಲ್ಲಿ ಕಂಡದ್ದು ಅದನ್ನು ನನಗೆ ಅನ್ವಯ ಮಾಡಿಕೊಂಡೆ ಆಗ ಬರೆದದ್ದು ಈ ಕವಿತೆ.

ಕಡಲಿನ ಕತ್ತಲ ಗವಿಯಲ್ಲಿ ಅಡಗಿವೆ ಎಷ್ಟೋ ರತ್ನಗಳು ಘೋರಾರಣ್ಯದ ತರುಗಳಲಿ ತುಂಬಿವೆ ಎಷ್ಟೋ ಕುಸುಮಗಳು ಎಸೆಯುವ ರನ್ನವ ತೆಗೆಯುವರಾರು ಕಡಲಿನ ಗವಿಯಿಂ ಹೊರತೆಗೆದು ಕುಸುಮದ ಕಂಪನು ಸೇವಿಪರಾರು ತುಂಬಿದ ಕಾನನ ಮಧ್ಯದಲಿ ಕನ್ನಡ ಸಾಹಿತ್ಯಾಬ್ಧಿಯಲಿ ಅಡಗಿವೆ ಎಷ್ಟೋ ರತ್ನಗಳು ಕನ್ನಡ ಭಾಷೆಯ ಕಾನನದಿ ತುಂಬಿವೆ ಕಬ್ಬಿದ ಕುಸುಮಗಳು

ಇದು ನಾನು ಮೊಟ್ಟ ಮೊದಲು ಬರೆದ ಪರಿಪೂರ್ಣ ಕವಿತೆ. ಈ ಕವಿತೆ ಹುಟ್ಟಿಕೊಂಡದ್ದು ಅನ್ಯದೇಶೀಯ ಪ್ರೇರಣೆಯಿಂದ. ನವೋದಯ ಸಾಹಿತ್ಯ ಹುಟ್ಟಿದ್ದೇ ಹೀಗೆ ಅಲ್ವೇ? ನಾನು ಅವೇ ಭಾಗಕ್ಕೆ ಸೇರಿದವನು. ಬಿ ಎಂ ಶ್ರೀ, ಕುವೆಂಪು ಅವರೆಲ್ಲಾ ಅನ್ಯದೇಶೀಯ ರೊಮಾಂಟಿಕ್ ಕವಿಗಳ ಪ್ರೇರಣೆಯಿಂದಲೇ ಬರೆದವರು. ನಂತರ ನಾನು ಬರೆದ ಈ ಕವಿತೆಯನ್ನ ಕಂಚಿನ ಕಂಠದ ಜಟ್ಟಿಯ ಮೈಕಟ್ಟಿನ ರಾಜರತ್ನಂ ಅವರಿಗೆ ತೋರಿಸಿದೆ, ಕವನವನ್ನ ಮೆಚ್ಚಿದ ಅವರು ಒಂದು ಪ್ರತಿ ಮಾಡಿಕೊಡುವಂತೆ ಕೇಳಿ ಅದನ್ನು ಮಾಸ್ತಿಯವರು ನಡೆಸುತ್ತಿದ್ದ ’ಜೀವನ’ ಎನ್ನುವ ಪತ್ರಿಕೆಯಲ್ಲಿ ಪ್ರಕಟಿಸಿದರು. ಪತ್ರಿಕೆಯಲ್ಲಿ ಪ್ರಕಟವಾದ ನಂತರ ನನಗೊಂದು ಪ್ರತಿ ಬಂದಿತ್ತು ಇನ್ನೊಂದು ಪ್ರತಿ ಶಾಲೆಯ ಸೂಚನಾ ಫಲಕದ ಮೇಲೆ ಹಾಕಿದ್ದರು. ಓದಿದ ಸ್ನೇಹಿತರು ನಮ್ಮವನೇ ಬರೆದ ಕವಿತೆಯೊಂದು ಪತ್ರಿಕೆಯಲ್ಲಿ ಪ್ರಕಟವಾಗಿದೆ ಎಂಬ ಸಂತೋಷವನ್ನು ಪ್ರಕಟಿಸುತ್ತಾ ಹೆಮ್ಮೆ ಪಡುತ್ತಿದ್ದರು. ಇದು ನನ್ನ ಮೊಟ್ಟ ಮೊದಲ ಪ್ರಕಟವಾದ ಕವಿತೆ. ನಂತರ ಒಂದೆರಡು ಸಂಕಲನ ಪ್ರಕಟವಾದ ನಂತರ ಮಾಸ್ತಿಯವರು ಇನ್ನೂ ಹೆಚ್ಚು ಆತ್ಮೀಯರಾದರು. ಸಿಕ್ಕಾಗಲೆಲ್ಲಾ ನನ್ನ ಹೆಗಲ ಮೇಲೆ ಕೈ ಹಾಕಿ ’ಶಿವರುದ್ರಪ್ಪನ ಮೊದಲ ಕವಿತೆ ಪ್ರಕಟ ಮಾಡಿದ್ದು ನಾನು’ ಅಂತ ಹೇಳ್ತಾ ಇದ್ರು. ಟ್ಯಾಗೋರ್ ಹೇಳಿದಂತೆ ಕವಿತೆ ಅಪರಿಚಿತವಾದ ಜಗತ್ತನ್ನಷ್ಟೇ ಅಲ್ಲ ಅಪರಿಚಿತ ಜನವನ್ನೂ ಕಾಣಿಸುತ್ತದೆ.

ನಂತರ ಕಾಲೇಜಿಗೆ ಬಂದ ನಂತರ ಕಾಡಿದವರು ಕುವೆಂಪುರವರು. ಅವರ ವ್ಯಕ್ತಿತ್ವ ಮತ್ತು ಕವಿತೆಗಳು ನನಗೆ ಆದರ್ಶವಾಗಿದ್ದವು. ಹಾಗಾಗಿ ಮೊಟ್ಟ ಮೊದಲ ಕವನ ಸಂಗ್ರಹ ಕುವೆಂಪುರವರ ಕವನಗಳ ಪಡಿಯಚ್ಚಿನ ಹಾಗೆ ಕಾಣುವುದರಲ್ಲಿ ಅಚ್ಚರಿಯಿಲ್ಲ. ಆ ಕಾಲದಲ್ಲಿ ನವ್ಯ ಕಾವ್ಯದ ಚಂಡೆ ಮದ್ದಲೆಯ ಅಬ್ಬರಗಳು ಹೆಚ್ಚಾಗಿದ್ದವು. ನನ್ನ ದಾರಿಯಾವುದು? ನವ್ಯ ಕಾವ್ಯದ ಅಬ್ಬರದ ಸಂದರ್ಭದಲ್ಲಿ ನಾನೆಲ್ಲಿದ್ದೇನೆ ಎಂಬ ಪ್ರಶ್ನೆ ಬಂದಾಗ ನಾನು ಯೋಚಿಸಿದ್ದು. ಮೂಲದ್ರವ್ಯವನ್ನು ಬಿಡದ ನವ್ಯಕಾವ್ಯವನ್ನು ಒಳಗೊಂಡ ಕವಿತೆಗಳನ್ನು ಬರೆಯುತ್ತಾ ಎರಡನ್ನೂ ಬೆಸೆಯುವ ಕೆಲಸವನ್ನು ಮಾಡಿದೆ. ಇದನ್ನ ತಪ್ಪಾಗಿ ತಿಳಿದ ಅನೇಕರು ನನ್ನನ್ನ ಸಮನ್ವಯ ಕವಿ ಅಂತ ಕೆಟ್ಟದಾಗಿ ಕರೆದದ್ದು ಹೌದು. ಅಲ್ಲಿಂದ ಮುಂದೆ ನನ್ನನ್ನು ವಿಮರ್ಶಕನನ್ನಾಗಿ ಬೆಳೆಸಿದ್ದು ತೀನಂಶ್ರೀರವರು ಮತ್ತು ಕುವೆಂಪುರವರು. ಕುವೆಂಪು ಅವರ ತರಗತಿಗಳಲ್ಲಿ ಅವರ ಬೋಧನಾ ಕ್ರಮ ತೌಲನಿಕವಾದದ್ದು. ಯಾವುದೋ ಒಂದು ಕನ್ನಡ ಕವಿತೆಯನ್ನು ಪಾಠ ಮಾಡುವಾಗ ಇಂಗ್ಲಿಷ್ ಸಾಹಿತಿಯ ಕವಿತೆಗಳನ್ನ ಉದಾಹರಿಸ್ತಾ ಇದ್ರು. ಇದರ ಉದ್ದೇಶ ಇಷ್ಟೇ ಜಾಗತಿಕ ಸಾಹಿತ್ಯದ ಪರಿಚಯ ಆಗಬೇಕು ಎನ್ನುವುದು. ಜಗತ್ತಿನ ಸಾಹಿತ್ಯವನ್ನು ಅರಿತಾಗ ಕನ್ನಡ ಸಾಹಿತ್ಯ ಅದರೊಟ್ಟಿಗೆ ಬೆಳೆದಾಗ ಕನ್ನಡ ಹೆಚ್ಚು ವಿಸ್ತಾರಗೊಳ್ಳುತ್ತದೆ ಎಂಬ ದೃಷ್ಟಿಕೋನವನ್ನು ಕೊಟ್ಟವರು ಕುವೆಂಪುರವರು. ತೀನಂಶ್ರೀ ಅವರು ನನಗೆ ಅಧ್ಯಾಪಕರಲ್ಲದಿದ್ದರೂ ಶಾಸ್ತ್ರ ವಿಷಯಗಳನ್ನು ಹೇಗೆ ಖಚಿತವಾಗಿ ಹೇಳಕ್ಕೆ ಸಾಧ್ಯ ಎನ್ನುವುದನ್ನ ವಿದ್ವತ್ತಿನ ಹಿನ್ನೆಲೆಯಲ್ಲಿ ತಿಳಿಸಿಕೊಟ್ಟವರು. ಹೀಗಾಗಿ ನನ್ನನ್ನ ಸ್ಕಾಲರ್ ಪೊಯೆಟ್ ಅಂತ ಕರೆದಿದ್ದಾರೆ ಅದು ಸರಿಯಾದ ಮಾತು. ಹೀಗೆ ನಾನು ಬೆಳೆದುಬಂದೆ. ನನ್ನ ಕವಿತೆಗಳ ಮುಖ್ಯ ನಿಲುವು ಅಂದ್ರೆ ಅಡ್ಡಗೋಡೆಗಳನ್ನ ಒಡೆದೆ ಬಾಂಧ್ಯವ್ಯದ ಸೇತುವೆಯನ್ನ ನಿರ್ಮಿಸುವುದು.

ಪ್ರಶ್ನೆ ೨
ನಿಮ್ಮ ಕವನಗಳಲ್ಲಿ ಹಣತೆ , ಕತ್ತಲು, ಬೆಳಕಿನ ಪ್ರಸ್ತಾಪ ಹೆಚ್ಚಾಗಿ ಕಂಡುಬರುತ್ತೆ. ಎಂದು ಬೆಳಕು ಬಂದೀತು ಅನ್ನೋ ನಿರೀಕ್ಷೆ ಕಂಡುಬರುತ್ತೆ. ಕತ್ತಲು ಬೆಳಕು ನಿಮ್ಮ ಕವನಗಳಲ್ಲಿ ಪ್ರಮುಖ ಪಾತ್ರ ವಹಿಸಿದಂತೆ ಕಂಡುಬರುತ್ತೆ ಇದರ ಬಗ್ಗೆ ನಿಮ್ಮ ಮಾತುಗಳನ್ನ ತಿಳಿಸಿ.
ಉತ್ತರ
ಕತ್ತಲೆ ಮುಚ್ಚುತ್ತೆ ಬೆಳಕು ತೆರೆಯುತ್ತೆ, ಕತ್ತಲನ್ನ ಋಣಾತ್ಮಕತೆಯ ಸಂಕೇತದಂತೆ ನಾನು ಭಾವಿಸಿಲ್ಲ, ಕಾರಣ ನಾವು ಬದುಕುತ್ತಿರುವ ಜಗತ್ತು ಕತ್ತಲೆ ಬೆಳಕಿನ ಜಗತ್ತು. ಮನುಷ್ಯನಲ್ಲೇ ಕತ್ತಲೆ ಬೆಳಕಿದೆ. ಈ ಕತ್ತಲೆ ಬೆಳಕಿನ ದ್ವಂದ್ವದಲ್ಲಿ ನಾವೇನನ್ನು ಕಂಡುಕೊಳ್ಳಲು ಯತ್ನಿಸುತ್ತಿದ್ದೇವೆ ಎಂಬುದು ಮುಖ್ಯವಾಗುತ್ತೆ. ನಮ್ಮ ಸುತ್ತ ಅನೇಕ ಗ್ರಹ ತಾರಾಮಂಡಲಗಳಿದ್ದರೂ ನಮಗೆ ಹಣತೆಯ ಅವಶ್ಯಕತೆಯಿದೆ. ಕಾರಣ ನಮಗೆ ಒಳಗಿನ ಬೆಳಕಿನ ಅವಶ್ಯಕತೆಯಿದೆ. ಹಾಗಾಗಿ ಈ ಕತ್ತಲೆಬೆಳಕಿನ ಸಂಘರ್ಷ ನನಗೆ ವಿಶೇಷವಾಗಿ ಕಾಣುತ್ತೆ.

ಪ್ರಶ್ನೆ ೩
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಆಮೂಲಕ ಅನೇಕ ಚಿಂತಕರನ್ನ ವಿಮರ್ಶಕರನ್ನ ಬೆಳೆಸಿ ಕನ್ನಡವನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದ್ರಿ. ಈ ಹಂತದಲ್ಲಿ ಹಿಂತಿರುಗಿ ನೋಡಿದಾಗ ಕನ್ನಡ ಯಾವ ಸ್ಥಾನದಲ್ಲಿದೆ? ಮುಂದಿನ ದಾರಿ ಹೇಗಿರಬಹುದು?
ಉತ್ತರ
ಕನ್ನಡ ಅಧ್ಯಯನ ಕೇಂದ್ರದಲ್ಲಿ ಮಾಡಿದ ಕೆಲಸವನ್ನ ದೊಡ್ಡ ಸಾಧನೆ ಎಂಬಂತೆ ಬಿಂಬಿಸಲಾಗ್ತಾ ಇದೆ. ಇರಬಹುದು ಅದು ಸಾಧನೆಯೇ, ಆದರೆ ಅದು ಚಾರಿತ್ರಿಕ ಆಕಸ್ಮಿಕ ಅಂತ ನಾನು ತಿಳಿದುಕೊಂಡಿದ್ದೇನೆ. ಆ ಕೆಲಸವನ್ನ ಇವತ್ತು ಮಾಡೋದು ಸುಲಭದ ಮಾತಲ್ಲ. ಚರಿತ್ರೆಯ ಕಾಲಘಟ್ಟದಲ್ಲಿ ಅದೃಷ್ಟಶಾಲಿಯಾದ ನನ್ನಂಥವನಿಗೆ ಅನೇಕ ಅವಕಾಶಗಳು ಒದಗಿ ಬರುತ್ವೆ. ಅದೇ ಅನುಕೂಲಗಳು ಇವತ್ತು ಒದಗಿ ಬರುತ್ತವೆ ಅಂತ ಹೇಳಲಾರೆ. ಆದರೆ ಇವತ್ತು ಆ ಕೆಲಸ ಬೇರೊಂದು ರೂಪದಲ್ಲಿ ಸ್ಥರದಲ್ಲಿ ಮುಂದುವರೀತಿದೆ ಅನ್ಸುತ್ತೆ. ಮೊದಲಿಗೆ ವಿಮರ್ಶೆ ಇನ್ನು ಬಾಲ್ಯಾವಸ್ಥೆಯಲ್ಲಿತ್ತು ಈಗ ಅದು ಹೆಮ್ಮರವಾಗಿ ವಿವಿಧ ರೀತಿಯಲ್ಲಿ ಬಿಳುಲುಗಳನ್ನ ಹರಡಿಕೊಂಡು ನಿಂತಿದೆ. ಇದರಿಂದ ನಾನು ನಿರಾಶೆ ಪಡುವ ಕಾರಣವಿಲ್ಲ. ಮೇಲ್ನೋಟಕ್ಕೆ ಕನ್ನಡದ ಬಗ್ಗೆ ಆಸಕ್ತಿ ಕಡಿಮೆಯಾಗ್ತಿದೆ ಎಂದು ಕಂಡರೂ ಬಿಡುಗಡೆಯಾಗುತ್ತಿರುವ ಪುಸ್ತಕಗಳನ್ನ ನೋಡಿದಾಗ ಸಂತೋಷವಾಗುತ್ತೆ. ಟಿವಿಗಳು ಬಂದಾಗ ಪುಸ್ತಕದ ಓದು ಕಡಿಮೆಯಾಗುತ್ತೆ ನಾಟಕಗಳು ಸೊರಗಿ ಹೋಗುತ್ತೆ ಎಂಬ ಮಾತಿತ್ತು ಅವ್ಯಾವುದೂ ನಿಜವಲ್ಲ. ಪ್ರತಿಯೊಂದು ಮಾಧ್ಯಮವೂ ತನ್ನದೇ ಆದ ದಾರಿಯಲ್ಲಿ ಹೋಗ್ತಾ ಇದೆ ಅಂತ ನನಗನ್ನಿಸುತ್ತೆ. ಕನ್ನಡದ ಓದುಗರ ಸಂಖ್ಯೆ ಕಡಿಮೆಯಾಗ್ತಿದೆ ಅನ್ನಿಸಿದ್ರೂ ಅನೇಕ ಪ್ರತಿಭಾವಂತರು ಸುತ್ತ ಇದ್ದಾರೆ ಹಾಗಾಗಿ ನಿರಾಶೆ ಪಡುವ ಅವಶ್ಯಕತೆಯಿಲ್ಲ.

ಜಿ ಎಸ್ ಎಸ್ ಅವರ ಸಂಪದಿಗರಿಗಾಗಿ ಎರಡು ಕವಿತೆಗಳನ್ನು ವಾಚಿಸಿದ್ದಾರೆ. ಅವರ ದನಿಯಲ್ಲಿ ಎರಡು ಕವಿತೆಗಳನ್ನು ಕೇಳಬಹುದು ೧) ಕತ್ತಲು ಬೆಳಕು. ೨)ದಾಟಿ ಬಾ ನಿರ್ಭಯದ ನಿಲುವಿಗೆ ೩) ಅಸ್ತಮಾನ (ಕೃಷ್ಣ ಕೊನೆಯ ದಿನ)

ನನ್ನ ಕಾವ್ಯ ಜೀವನದಲ್ಲಿ ಹಲವು ಹೆಜ್ಜೆಗಳನ್ನ ಹೇಳುವಾಗ ಬಹಳ ಮುಖ್ಯವಾದ ಘಟ್ಟವೆಂದರೆ ಮೈಸೂರಿನ ಮಹಾರಾಜ ಕಾಲೇಜಿಗೆ ಸೇರಿದ ಸಂದರ್ಭ. ಕುವೆಂಪು ಅವರ ಪ್ರಭಾವ ನನ್ನ ಕಾವ್ಯದ ಮೇಲಿರುವ ಹಾಗೆ, ನನ್ನನ್ನು ಬೆಳೆಸಿದ ಮತ್ತೊಬ್ಬ ಅಪೂರ್ವ ವ್ಯಕ್ತಿ ತ.ಸು. ಶ್ಯಾಮರಾಯರು. ನನ್ನ ಕಷ್ಟದ ದಿನಗಳಲ್ಲಿ ನನ್ನನ್ನು ಮನೆಯ ಮಗನಂತೆ ಬೆಳೆಸಿದ ವ್ಯಕ್ತಿ ಅವರು. ನಾನು ಬರೆದ ಪ್ರತಿಯೊಂದು ಕವನವನ್ನು ತಾಳ್ಮೆಯಿಂದ ಕೇಳಿ ಆನಂದಿಸಿ ತಲೆದೂಗಿ ಪ್ರೋತ್ಸಾಹಿಸಿದವರು ಅವರು. ಹೀಗೆ ಕಾವ್ಯವನ್ನು ಬರೆಯುವ ಸಂದರ್ಭದಲ್ಲಿ ಆಯಾಚಿತವಾಗಿ ಶ್ಯಾಮರಾಯರ ದೃಷ್ಟಿ ನನ್ನ ಮೇಲೆ ಬಿತ್ತು. ನಾನು ಬರೆದುದ್ದನ್ನ ಎದೆತುಂಬಿ ಕೇಳಿದವರು ಶ್ಯಾಮರಾಯರು. ಎದೆ ತುಂಬಿಹಾಡುವೆನು ಅಂದು ನಾನು ಅವರನ್ನು ಕುರಿತಾಗಿಯೇ ಬರೆದದ್ದು. ಕಾವ್ಯ ಜೀವನದಲ್ಲಿ ಶ್ಯಾಮರಾಯರು ನೆಲ ನೀರು ಎನ್ನುವುದಾದರೆ ಕುವೆಂಪುರವರು ಗಾಳಿ ಬೆಳಕು.