ಭಾರತದ ಸಂಸ್ಕೃತಿಯೊಂದಿಗೆ ಜೀವನದಲ್ಲಿ ನಾವು ಎಷ್ಟೊಂದು ಗುರುತಿಸಿಕೊಂಡಿದ್ದೇವೆ ಅಲ್ಲವೇ. ಬೆಳಿಗ್ಗೆಯಿಂದ ರಾತ್ರಿಯವರೆಗೆ ನಮ್ಮ ಆಚಾರ ವಿಚಾರ ಉಡುಗೆ ತೊಡುಗೆಗಳು ಆಹಾರ ಇತ್ಯಾದಿಯಾಗಿ ಎಲ್ಲವೂ ಒಂದು ನಿರ್ಧಿಶ್ಟ ಸಂಸ್ಕೃತಿಗೊಳಪಟ್ಟಿವೆ. ಇತ್ತೀಚೆಗೆ ರಾಷ್ಟ್ರ ಬಂಧು ರಾಜೀವ ದೀಕ್ಷಿತರು ಬೆಂಗಳೂರಿನಲ್ಲಿ ’ಆರೋಗ್ಯ ಭಾಗ್ಯ ಎಲ್ಲರಿಗೂ ಸಾಧ್ಯ’ ಎಂಬ ವಿಷಯವಾಗಿ ಉಪನ್ಯಾಸ ನೀಡುತ್ತಿದ್ದರು. ಬಹುಶಃ ಅವರು ಉತ್ತರ ಭಾರತದವರಿರಬೇಕು ಆದರೂ ಸ್ವಲ್ಪ ಮಟ್ಟಿಗೆ ಕನ್ನಡವನ್ನು ಕಲಿತಿದ್ದಾರೆ. ಅವರು ಬಹಳಷ್ಟು ಸಮಯ ಹಿಂದಿ ಮಿಶ್ರಿತ ಕನ್ನಡವನ್ನು ಬಳಸಿದ್ದರೂ ಅಲ್ಲಿದ್ದ ಯಾರಿಗೂ ಅರ್ಥಮಾಡಿಕೊಳ್ಳಲು ಗೋಜಲೆನಿಸಲಿಲ್ಲ. ಎಷ್ಟೊಂದು ಉಪಯುಕ್ತ ವಿಷಯಗಳನ್ನು ತಿಳಿಸಿಕೊಟ್ಟರು ಅವರು. ಆ ಸಮಯದಲ್ಲಿ ನಿಜಕ್ಕೂ ನಮ್ಮಲ್ಲಿರುವ ತ್ರಿಭಾಷಾ ಸೂತ್ರ ಸಾರ್ಥಕ ಎನಿಸಿತು. ಇದು ಹೇಗೆ ರಾಜ್ಯ ರಾಜ್ಯಗಳ ನಡುವಿನ ಭಾರತೀಯರ ನಡುವಿನ ಭಾಂಧವ್ಯವನ್ನು ಹೆಚ್ಚಿಸಬಲ್ಲದಲ್ಲವೇ. ಅವರು ಹೇಳುತ್ತಿದ್ದ ಸುಖಾಸನ, ಆಹಾರ, ಪದ್ದತಿ ಇತ್ಯಾದಿಗಳು ಉಪಯುಕ್ತ ಮಾಹಿತಿಗಳಾಗಿದ್ದವು.