ನಾನು ಮೆಚ್ಚಿದ ಕವಿತೆ ತಮ್ಮೊಂದಿಗೆ ಹಂಚಿಕೊಳ್ಳುವಾಸೆ. ತಾವು ಈ ಕವಿತೆ ಓದಿರಬಹುದು, ಕೇಳಿರಬಹುದು ಆದರು ಮತ್ತೊಮ್ಮೆ ಓದಿ ನೋಡಿ ಮನಮುಟ್ಟುತ್ತದೆ.

ಹಚ್ಚೇವು ಕನ್ನಡದ ದೀಪ
ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವಾ ದೀಪ

ಬಹುದಿನಗಳಿಂದ ಮೈಮರವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸ-
ಲಲ್ಲಲ್ಲಿ ಕರಣ ಚಾಚೇವು
ನಡು ನಾಡೆ ಇರಲಿ, ಗಡಿ ನಾಡೆ ಇರಲಿ
ಕನ್ನಡದ ಕಳೆಯ ಕಚ್ಚೇವು
ಮರತೇವು ಮರವ, ತೆರೆದೇವು ಮನವ, ಎರೆದೇವು ಒಲವ-ಹಿಡಿ ನೆನಪ
ನರನರವನೆಲ್ಲ ಹುರುಗೊಳಿಸಿ ಹೊಸೆದು ಹಚ್ಚೇವು ಕನ್ನಡದ ದೀಪ:

ಕಲ್ಪನೆಯ ಕಣ್ಣು ಹರಿವರಕ ಸಾಲು
ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯ ರೂಪ
ಅಚ್ಚಳಿಯದಂತೆ ತೋರೇವು
ಒಡಲೊಡಲ ಕೆಚ್ಚಿನಾ ಕಿಡಿಗಳನ್ನು
ಗಡಿನಾಡಿನಾದೆ ತೂರೇವು
ಹೊಮ್ಮಿರಲು ಪ್ರೀತಿ ಎಲ್ಲಿಯದು ಭೀತಿ? ನಾಡೊಲವೆ ನೀತಿ ಹಿಡಿ ನೆನಪ
ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ.

ಕರುನಾಡಿನರಿವ ನೆರೆತೀವಿ ಭಾವ-
ದಲಿ ಜೀವನಾಡಿ ನುಡಿಸೇವು
ತೆರೆತೆರೆದ ಕಣ್ಣಿನಲಿ ನೇಹವೆರೆದು
ನವ ಜ್ಯೋತಿಯನ್ನೆ ಮುಡಿಸೇವು
ನಮ್ಮನ್ನವುಂಡು ಅನ್ಯಾಯಗೈಯು-
ವಂಥವರ ಹುಚ್ಚ ಬಿಡಿಸೇವು
ಇಹುದೆಮಗೆ ಛಲವು, ಕನ್ನಡರ ಒಲವು ಕನ್ನಡದ ಒಲವು-ಹಿಡಿನೆನಪ
ನೆಮ್ಮೆದೆಯ ಕೆಚ್ಚುನೆಚ್ಚುಗಳನೂಡಿ ಹಚ್ಚೇವು ಕನ್ನಡದ ದೀಪ.

ನಮ್ಮವರು ಗಳಿಸಿದಾ ಹೆಸರ ಉಳಿಸ-
ಲೆಲ್ಲಾರು ಒಂದುಗೂಡೇವು
ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ
ಮಾತೆಯನ್ನು ಪೂಜೆ ಮಾಡೇವು
ನಮ್ಮುಸಿರು ತೀಡುವೀ ನಾಡಿನಲ್ಲಿ
ಮಾಂಗಲ್ಯ ಗೀತೆ ಹಾಡೇವು
ತೊರೆದೇವು ಮರುಳ, ಕಡೆದೇವು ಇರುಳ, ಪಡೆದೇವು ತಿರುಳ-ಹಿಡಿನೆನಪ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ.

ಡಿ.ಎಸ್.ಕರ್ಕಿ (ದುಂಡಪ್ಪ ಸಿದ್ದಪ್ಪ ಕರ್ಕಿ)