ಒಂಟಿ ಜೀವ ನಾನು ಜೊತೆ ಇಲ್ಲ ಯಾರೂ
ನನ್ನವರಿದ್ದರೂ ಈಗ ನನ್ನವರಲ್ಲ ಯಾರೂ
ಯಾಕಿದೆ ಸತತ ನಿರೀಕ್ಷೆ ನನ್ನ ಈ ಮನದಿ
ಯಾರದೆಂದು ನಿರ್ದಿಷ್ಟ ಹೇಳಲಾಗದ ತೆರದಿ
ಪ್ರಕೃತಿಯ ಪ್ರತಿಯೊಂದು ದೃಶ್ಯ ನೋಡುವಾಗ
ಕಾಣುವುದು ಆ ಅಸ್ಪಷ್ಟ ಮುಖವೆನಗೆ ಈಗೀಗ
ಕೂತಲ್ಲಿ ಕೂರಲಾಗದಂತಹ ಅವ್ಯಕ್ತ ಚಡಪಡಿಕೆ
ನಿಂತು ಹೋದಂತಿದೆ ಈಗ ನನ್ನೆಲ್ಲ ಚಟುವಟಿಕೆ
ಯಾರ ಮಾತನ್ನೂ ಈಗ ಕೇಳುವ ವ್ಯವಧಾನವಿಲ್ಲ
ಯಾರೇನಂದರೂ ಮನಕೆ ಸಮಾಧಾನವೇ ಇಲ್ಲ
ನನ್ನ ಮಾತು ಮನದೊಳಗೇ ಹುದುಗಿ ಹೋಗಿದೆ
ಮೌನವೇ ಮಾತಾಗಿ ಮನವ ಕದಡಿ ಹೋಗಿದೆ
ಯಾವುದೋ ಕಡೆಯಿಂದ ಯಾರೋ ಕರೆದಂತೆ
ಯಾರದೋ ಬರವಿಗಾಗಿ ನಾನು ಕಾದಿರುವಂತೆ
ಯಾರು ಬರುವರು ನನ್ನ ಮನವನರಿಯಲೆಂದು
ಎಂದು ಬರುವರು ಈ ದುಗುಡ ಕಳೆಯಲೆಂದು
ನನ್ನ ಮೌನಕ್ಕೊಂದು ಅರ್ಥ ಕೊಡುವವರು ಬೇಕು
ಈ ಮನದ ಮಿಡಿತದ ಜೊತೆಗೆ ಮಿಡಿವವರು ಬೇಕು
ಕಾಯುವೆನು ಕಾಯುವೆನು ಹೀಗೇ ಇಲ್ಲೇ ಅನವರತ
ಬಂದು ಸಾರಥಿಯಾಗಿ ಮುನ್ನಡೆಸಲಿ ನನ್ನ ಮನೋರಥ
-ಆಸು ಹೆಗ್ಡೆ
(ನಾನ್ಯಾಕೆ ಹಿಂದುಳಿಯಲಿ?)
ಪ್ರತಿಕ್ರಿಯೆ (2)