ಒಳ ಚಡ್ಡಿಗೆ ಬದಲಾಗಿ ಸೀರೆಯ ಕೊಡುವೆ ಎಂಬರು
ಚಡ್ಡಿಯನೇ ಬಿಚ್ಚಿ ಕೊಟ್ಟವರು ಸೀರೆ ಏಕೆ ಕೊಂಬರು?

ದೇಶದ ಮಾನ ಮರ್ಯಾದೆಯನೆಲ್ಲ ಹಾಕಿ ಹರಾಜು
ಇವರೇಕೆ ಮಾಡಲು ಹೊರಟಿದ್ದಾರೆ ಹೀಗೆ ಮೋಜು?

ನಿರುದ್ಯೋಗಿಗಳು ಈ ನಾಡಿನಲಿ ದಿನದಿನವೂ ಹೆಚ್ಚಲು
ಈ ದೊಂಬರಾಟ ನಡೆಸುತ್ತಾರೆ ನಾಲ್ಕು ಜನ ಮೆಚ್ಚಲು

ಹೊರ ಆತಂಕವಾದಿಗಳಿದಿರು ಯಾರೂ ಕಾದಾಡಲಾರರು
ತಮ್ಮವರಿಗೆ ಕೀಟಲೆ ಕೊಟ್ಟು ತೀಟೆ ತೀರಿಸಿಕೊಳ್ಳುತಿಹರು

ಎಲ್ಲರ ಮನದಲ್ಲೂ ನಾಯಕನಾಗುವ ಆಸೆ ತುಂಬಿಹುದು
ಜನೋಪಕಾರಿ ಕಾರ್ಯ ಒಂದೂ ತಲೆಗೆ ಹೊಳೆಯದಿಹುದು

ಸುಪ್ರಸಿದ್ಧನಾಗದಿದ್ದರೆ ಏನಂತೆ ಕುಪ್ರಸಿದ್ಧನಾಗಿಯಾದರೂ
ಸುದ್ದಿಯಲ್ಲಿ ಇರಲೇಬೇಕು ಜನರಿಂದ ಬೈಸಿಕೊಂಡಾದರೂ

ಪ್ರೀತಿ ಮಾಡುವವರಿಂದ ದೇಶಕ್ಕೆ ಇಲ್ಲ ಸ್ವಾಮೀ ತೊಂದರೆ
ಆಮೇಲೆ ನೋಡೋಣ ಅವರಿಂದ ಸಮಾಜಕ್ಕೆ ಕಷ್ಟ ಬಂದರೆ

ಉಗ್ರವಾದಿಗಳ ಸಾಹಸಕ್ಕೆ ಬನ್ನಿ ತಣ್ಣೀರೆರಚಿ ನೋಡೋಣ
ಪರದೇಶೀ ಶಕ್ತಿಗಳ ಕುಮ್ಮಕ್ಕನ್ನು ಮುರಿದು ತೋರಿಸೋಣ

ಲಂಚಕೋರರ ಹಿಡಿದು ಥಳಿಸುವವರು ಯಾರೂ ಇಲ್ಲಿಲ್ಲ
ಕಳ್ಳ ಕದೀಮರ ಹಿಡಿದು ಸಮಾಜವನು ಕಾಯುವವರಿಲ್ಲ

ರಾಜಕೀಯ ಪುಢಾರಿಗಳ ಹಿಡಿತದಿಂದ ದೇಶವನು ಬಿಡಿಸಿ
ಭ್ರಷ್ಟಾಚಾರದ ಪಿಡುಗಿನಿಂದ ಈ ನಾಡನ್ನು ಒಮ್ಮೆ ರಕ್ಷಿಸಿ

ನಮ್ಮ ನಮ್ಮ ನಡುವೆಯೇ ಯಾಕೆ ಸ್ವಾಮೀ ಈ ಬೀದಿ ಜಗಳ
ಬೀದಿಯಲಿ ನಡೆದರೆ ಆದೀತು ಇದು ಬರೇ ನಾಯಿಗಳ ಜಗಳ
**********************************